ಸುಳ್ಯದ ಮಡಪ್ಪಾಡಿಯಲ್ಲಿ ಚಿತ್ರೀಕರಣಗೊಂಡ “ಜಂಗಲ್ ಮಂಗಲ್” ಕನ್ನಡ ಚಲನಚಿತ್ರ ಜು.4ಕ್ಕೆ ತೆರೆಗೆ

0

ಪುತ್ತೂರು: ಟ್ರೇಲರ್‌ನಲ್ಲೇ ಕುತೂಹಲ ಮೂಡಿಸಿರುವ ಪುತ್ತೂರಿನ ಬೆಳ್ಳಿಪ್ಪಾಡಿಯ ರಕ್ಷಿತ್ ಕುಮಾರ್ ಅವರ ನಿರ್ದೇಶನದಲ್ಲಿ ಮಲೆನಾಡಿನ ಸೊಗಡನ್ನು ತೋರಿಸುವ ಸುಳ್ಯದ ಮಡಪ್ಪಾಡಿಯಲ್ಲೇ ಪೂರ್ತಿ ಚಿತ್ರೀಕರಣಗೊಂಡ ಜಂಗಲ್ ಮಂಗಲ್ ಕನ್ನಡ ಚಲನಚಿತ್ರ ಜು.4ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.


ಪುತ್ತೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಚಿತ್ರದ ನಿರ್ದೇಶಕ ಬೆಳ್ಳಿಪ್ಪಾಡಿ ನಿವಾಸಿ ರಕ್ಷಿತ್ ಕುಮಾರ್ ಅವರು ಮಾತನಾಡಿ ಸುನಿ ಸಿನಿಮಾಸ್(ಸಿಂಪಲ್ ಸುನಿ) ಅರ್ಪಿಸುವ ಸಹ್ಯಾದ್ರಿ ಸ್ಟುಡಿಯೋಸ್ ನಿರ್ಮಾಣದ ಜಂಗಲ್ ಮಂಗಲ್ ಸಿನಿಮಾದಲ್ಲಿ ನಾಯಕ ನಟನಾಗಿ ಯಶ್ ಶೆಟ್ಟಿ ಮತ್ತು ನಾಯಕ ನಟಿಯಾಗಿ ಹರ್ಷಿತಾ ರಾಮಚಂದ್ರ ಅವರು ಮುಖ್ಯ ಪಾತ್ರ ವಹಿಸಲಿದ್ದಾರೆ. ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದೆ. ಇದೊಂದು ಅರೆ ಮಲೆನಾಡಿನಲ್ಲಿ ನಡೆಯುವ ಕಥೆ. ಈ ಸಿನಿಮಾ ಬಗ್ಗೆ ಒಂದು ಇಂಟ್ರೆಸ್ಟಿಂಗ್ ಕಥೆಯಿದೆ. ಚಿತ್ರ ಪೂರ್ತಿಯಾಗಿ ಸುಳ್ಯದ ಗುತ್ತಿಗಾರು ಗ್ರಾಮದ ಮಡಪ್ಪಾಡಿ ಎಂಬಲ್ಲಿ ಸತತ 30 ದಿನಗಳು ಚಿತ್ರೀಕರಣ ನಡೆದಿದೆ.

ಪುತ್ತೂರಿನವರೇ ಹೆಚ್ಚಿನ ಕಲಾವಿದರು ಈ ಚಿತ್ರದಲ್ಲಿದ್ದಾರೆ. ಪ್ರಮುಖವಾಗಿ ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೋಳ್ಳಾರ್, ಚಂದ್ರಹಾಸ್ ಉಳ್ಳಾಲ್ ಸಹಿತ ಚಿತ್ರೀಕರಣ ನಡೆದ ಮಡಪ್ಪಾಡಿಯ ಒಂದಷ್ಟು ಗ್ರಾಮಸ್ಥರನ್ನು ಕೂಡಾ ನಟಿಸಿರುವುದು ವಿಶೇಷ. ತಂತ್ರಜ್ಞಾನದಲ್ಲಿ ಶೇ.80 ರಷ್ಟು ಕರಾವಳಿಯ ಪ್ರತಿಭಾನ್ವಿತರಿದ್ದಾರೆ ಎಂದವರು ಹೇಳಿದರು.

ಚಿತ್ರದ ನಾಯಕ ನಟ ಯಶ್ ಶೆಟ್ಟಿಯವರು ಮಾತನಾಡಿ ನನಗೆ ನಾಯಕ ನಟನಾಗಿ ನಟಿಸುವ ಗುರಿ ಇರಲಿಲ್ಲ. ಆದರೆ, ಚಿತ್ರ ಕಥೆಯು ನನ್ನನ್ನು ನಾಯಕನಾಟಿ ನಟಿಸುವಂತೆ ಒತ್ತಾಯಿಸಿತು ಎಂದರು. ಚಿತ್ರ ಸುಂದರವಾಗಿದೆ ಎಂದು ನಾಯಕ ನಟಿ ಹರ್ಷಿತಾ ತಿಳಿಸಿದರು. ಸಿನಿಮಾ ಮೆಚ್ಚಿಕೊಂಡ ನಿರ್ದೇಶಕ ಸಿಂಪಲ್ ಸುನಿ ತಮ್ಮ ಸುನಿ ಸಿನಿಮಾಸ್ ಬ್ಯಾನರ್ ಮೂಲಕ ಚಿತ್ರವನ್ನು ಅರ್ಪಿಸಲು ಮುಂದಾದರು ಎಂದು ತಿಳಿಸಿದ ನಿರ್ದೇಶಕ ರಕ್ಷಿತ್ ಕುಮಾರ್ ಅವರು ಮುಂದಿನ ದಿನ ಅರೆಭಾಷೆಯಲ್ಲಿ ಊರಿನ ಕಥೆ ಹೆಣೆದು ಚಿತ್ರ ಮಾಡುವ ಗುರಿ ಇದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಮ್ಯಾನೇಜರ್ ಮಿಲನ್ ಮಡಪ್ಪಾಡಿ ಅವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here