ಪ್ರತಿಷ್ಠೆ ಮತ್ತು ಪ್ರತಿಫಲಾಪೇಕ್ಷೆಯಿಲ್ಲದೇ ಕೆಲಸ ನಿರ್ವಹಿಸಿದ್ದೇವೆ – ಜಯಪ್ರಕಾಶ್ ರೈ ಚೆಲ್ಯಡ್ಕ
ಬೆಟ್ಟಂಪಾಡಿ: ಇಲ್ಲಿನ ವಿನಾಯಕನಗರದಲ್ಲಿ ಪುನರ್ ನಿರ್ಮಾಣಗೊಂಡ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ಲೋಕಾರ್ಪಣೆ ಕಾರ್ಯಕ್ರಮದ ಯಶಸ್ಸಿಗೆ ಕಾರಣೀಭೂತರಾದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವ ಅಂಗವಾಗಿ ಧನ್ಯತಾ ಸಭೆ ಹಾಗೂ ಲೆಕ್ಕಪತ್ರ ಮಂಡನೆಯು ಜೂ. 29 ರಂದು ಶ್ರೀ ಸಿದ್ದಿವಿನಾಯಕ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.
ಅಭಿನಂದನಾ ಮಾತುಗಳನ್ನಾಡಿದ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ಜಯಪ್ರಕಾಶ್ ರೈ ಚೆಲ್ಯಡ್ಕರವರು ಮಾತನಾಡಿ ‘ಎಲ್ಲರ ಸಹಕಾರ ಮತ್ತು ಶ್ರಮದಿಂದ ಕಾರ್ಯಕ್ರಮ ಯಶಸ್ಸು ಕಂಡಿದೆ. ಯಾವುದೂ ಪೂರ್ವನಿರ್ಧರಿತವಾಗಿರಲಿಲ್ಲ. ಒಂದು ವರ್ಷ ನಾಲ್ಕು ತಿಂಗಳಲ್ಲಿ ಇಲ್ಲಿ ಪ್ರತಿಯೊಂದೂ ಹಂತದಲ್ಲೂ ಪವಾಡಗಳು ನಡೆದಿವೆ. 5000 ಕೊಡ್ತೇವೆ ಅಂದವರು ಒಂದು ಲಕ್ಷದವರೆಗೂ ಕೊಟ್ಟಿದ್ದಾರೆ. ದೇವರ ಮಲ್ಲಿಗೆ ಮಾಲೆಯಲ್ಲಿ ಒಂದು ಮಲ್ಲಿಗೆಯಾಗಿ ಕೆಲಸ ಮಾಡಿದ್ದೇನೆ. ಇಲ್ಲಿನ ಎಲ್ಲಾ ಕೆಲವೂ ಸ್ಥಳೀಯ ಪ್ರತಿಭೆಗಳಿಂದ ನಡೆದಿದೆ. ಸಮಿತಿ ರಚನೆಯ ವೇಳೆ ಆರ್ಥಿಕ ಕ್ರೋಢೀಕರಣದ ಬಗ್ಗೆ ನನಗೆ ಹೆದರಿಕೆ ಇತ್ತು. ಜವಾಬ್ದಾರಿ ವಹಿಸಿಕೊಂಡ ಮೇಲೆ ಪವಾಡ ರೀತಿಯಲ್ಲಿ ನಡೆದಿದೆ. ಯಾರದ್ದೇ ಭಾವನೆಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ನಿರ್ವಹಣೆ ಮಾಡಿದ್ದೇವೆ. ಪ್ರತಿಷ್ಠೆ ಮತ್ತು ಪ್ರತಿಫಲ ಅಪೇಕ್ಷೆಯಿಲ್ಲದೇ ಕೆಲಸ ಮಾಡಿದ್ದೇವೆ. ಇನ್ನಷ್ಟು ಉಜ್ವಲವಾಗಿ ಮಂದಿರ ಮೂಡಿಬರಲಿ. ಹಿಂದುಗಳ ಶಕ್ತಿಯ ಉದ್ದೀಪನಕ್ಕೆ ಈ ಮಂದಿರ ಕೇಂದ್ರವಾಗಲಿ’ ಎಂದ ಅವರು ‘ಜಯಪ್ರಕಾಶರಿಂದ ಮಂದಿರ ನಿರ್ಮಾಣವಾಗಿಲ್ಲ. ಮಂದಿರದಿಂದ ನಮಗೆ ಹೆಸರು ಬಂದಿರಬಹುದು ಎಂಬ ಭಾವನೆ ನಮ್ಮೆಲ್ಲರಲ್ಲಿರಲಿ’ ಎಂದರು. ಇದೇ ವೇಳೆ ಮಂದಿರದ ಬೀಗದ ಕೀಯನ್ನು ಶ್ರೀ ಸಿದ್ದಿವಿನಾಯಕ ಸೇವಾ ಸಮಿತಿಯವರಿಗೆ ಹಸ್ತಾಂತರಿಸಿದರು.
ಕ್ಷೇತ್ರದ ಪುರೋಹಿತ ವೇ.ಮೂ. ದಿನೇಶ್ ಮರಡಿತ್ತಾಯರು ಮಾತನಾಡಿ ‘ಇಲ್ಲಿ ನಡೆದಿರುವ ಎಲ್ಲಾ ಕಾರ್ಯಗಳು ಗಣಪತಿ ದೇವರ ಚಿತ್ತಕ್ಕೆ ಸಮರ್ಪಣೆಯಾಗಿದೆ. ಭಕ್ತರು ಪರಿಪೂರ್ಣವಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಎಲ್ಲರ ಸಂಕಲ್ಪ ಒಂದೇ ರೀತಿಯಲ್ಲಿದ್ದುದರಿಂದ ಇಷ್ಟೊಂದು ವ್ಯವಸ್ಥಿತವಾಗಿ ನಡೆಯಲು ಸಾಧ್ಯವಾಯಿತು’ ಎಂದರು.
ಕಾರ್ಯಕರ್ತರಿಗೆ ಗೌರವಾರ್ಪಣೆ
ಇದೇ ವೇಳೆ ವಿವಿಧ ಜವಾಬ್ದಾರಿ ನಿರ್ವಹಿಸಿದ ಉಪಸಮಿತಿಗಳ ಸಂಚಾಲಕರು, ಸದಸ್ಯರುಗಳಿಗೆ ಶಾಲು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಪುನರ್ ನಿರ್ಮಾಣ ಮತ್ತು ಲೋಕಾರ್ಪಣೆ ಕಾರ್ಯಕ್ರಮದ ಒಟ್ಟು ಜಮಾ ಖರ್ಚು ವಿವರವನ್ನು ಪುನರ್ ನಿರ್ಮಾಣ ಸಮಿತಿಯ ಜೊತೆ ಕಾರ್ಯದರ್ಶಿ ಲಿಂಗಪ್ಪ ಗೌಡ ಕಕ್ಕೂರು ಸಭೆಯ ಮುಂದಿಟ್ಟರು.
ವೇದಿಕೆಯಲ್ಲಿ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ವಿನೋದ್ ಕುಮಾರ್ ರೈ ಗುತ್ತು, ಶ್ರೀ ಸಿದ್ಧಿವಿನಾಯಕ ಸೇವಾ ಸಂಘದ ಗೌರವಾಧ್ಯಕ್ಷ ನಾರಾಯಣ ಮನೋಳಿತ್ತಾಯ ಕಾಜಿಮೂಲೆ, ಅಧ್ಯಕ್ಷ ಶ್ರೀಕುಮಾರ್ ಭಟ್ ಅಡ್ಯತ್ತಿಮಾರು, ಕಾರ್ಯದರ್ಶಿ ಗಣೇಶ್ ಪಂಬೆಜಾಲು, ಕೋಶಾಧಿಕಾರಿ ಸತ್ಯನಾರಾಯಣ ಮಣಿಯಾಣಿ ತಲೆಪ್ಪಾಡಿ, ಪುನರ್‌ನಿರ್ಮಾಣ ಸಮಿತಿ ಕೋಶಾಧಿಕಾರಿ ದಿನೇಶ್ ಗೌಡ ಪಂಬೆಜಾಲು ಉಪಸ್ಥಿತರಿದ್ದರು.
‘ಶಿವಾಜಿ’ ನಾಟಕದ ಪ್ರಯುಕ್ತ ಶ್ರೀ ಸಿದ್ದಿವಿನಾಯಕ ಯುವಕ ಮಂಡಲದ ವತಿಯಿಂದ ನಡೆಸಲಾದ ಲಕ್ಕಿಡಿಪ್ ಲೆಕ್ಕಾಚಾರವನ್ನು ರಾಧಾಕೃಷ್ಣ ಆರ್ ಕೋಡಿ ಸಭೆಯ ಮುಂದಿಟ್ಟರು. ಧನ್ಯಶ್ರೀ ಕಕ್ಕೂರು ಪ್ರಾರ್ಥಿಸಿದರು. ಶಿವಪ್ರಸಾದ್ ತಲೆಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸಮಿತಿಗಳ ಸಂಚಾಲಕರು, ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಸುಮಾರು 200ಕ್ಕೂ ಮಿಕ್ಕಿ ಕಾರ್ಯಕರ್ತರು ಪಾಲ್ಗೊಂಡರು. ಸಭೆಯ ಬಳಿಕ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು.
ಜಮಾಖರ್ಚಿನ ವಿವರ
ಮಂದಿರ ಪುನರ್ ನಿರ್ಮಾಣ ಕಾರ್ಯಗಳು ಹಾಗೂ ಪ್ರತಿಷ್ಟಾ ಮಹೋತ್ಸವಕ್ಕೆ ಒಟ್ಟು ರೂ. 42,32,333 ಜಮೆ ಆಗಿದ್ದು, ರೂ. 41,03,228 ಖರ್ಚು ಆಗಿ ರೂ. 1,29,105 ಉಳಿತಾಯವಾಗಿರುತ್ತದೆ ಎಂದು ಲಿಂಗಪ್ಪ ಗೌಡ ಕಕ್ಕೂರು ಜಮಾಖರ್ಚಿನ ವಿವರ ಸಭೆಯ ಮುಂದಿಟ್ಟರು.
ಶ್ಲಾಘನೆ ವ್ಯಕ್ತಪಡಿಸಿದ ಭಕ್ತಾಭಿಮಾನಿಗಳು
ಅತ್ಯಲ್ಪ ಅವಧಿಯಲ್ಲಿ ಒಂದು ವರ್ಷ ನಾಲ್ಕು ತಿಂಗಳೊಳಗಾಗಿ ಮಂದಿರ ಸಂಪೂರ್ಣ ಕೆಡವಿ ಹೊಸ ಮಂದಿರ ನಿರ್ಮಾಣಗೊಂಡು ಪ್ರತಿಷ್ಠಾ ಮಹೋತ್ಸವ ನಡೆದಿರುವುದು ಮತ್ತು ಜಡಿಮಳೆಯ ಮಧ್ಯೆಯೂ ಎಳ್ಳಷ್ಟೂ ತೊಂದರೆಯಿಲ್ಲದೆ ಪ್ರತಿಷ್ಟಾ ಮಹೋತ್ಸವದ ಕಾರ್ಯಕ್ರಮಗಳು ನಡೆದಿರುವುದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಕಾರ್ಯಕರ್ತರು ಹಾಗೂ ಭಕ್ತವೃಂದ ಯಶಸ್ವೀ ಕಾರ್ಯಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.