ರಾಮಕುಂಜ: ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಯಾಗಿ ವಿಚಾರಣೆ ಎದುರಿಸುತ್ತಿದ್ದ ರಾಮಕುಂಜ ಗ್ರಾಮದ ಕಂಪ ನಿವಾಸಿ ದೇವಪ್ಪ ಮೂಲ್ಯ ಅವರ ಪುತ್ರ ದಿವಾಕರರವರಿಗೆ ಶಿಕ್ಷೆ ವಿಧಿಸಿ ಪುತ್ತೂರು ಪ್ರಧಾನ ವ್ಯವಹಾರಿಕ ಮತ್ತು ಜೆಎಂಎಫ್ಸಿ ನ್ಯಾಯಾಲಯ ಜು.3ರಂದು ಆದೇಶಿಸಿದೆ.
2 ವರ್ಷದ ಹಿಂದೆ ದಿವಾಕರ ಅವರು ಆಲಂಕಾರು ಗ್ರಾಮದ ನೆಕ್ಕರೆ ನಿವಾಸಿ ಲವಿನಾ ಪ್ಲೆವಿ ಪಿಂಟೋ ಡಿಸೋಜ ಎಂಬವರಿಂದ ರೂ. 3 ಲಕ್ಷದ 4 ಸಾವಿರ ಸಾಲ ಪಡೆದುಕೊಂಡಿದ್ದರು. ಸದ್ರಿ ಸಾಲದ ಮರುಪಾವತಿ ಬಗ್ಗೆ ದಿವಾಕರ ಅವರು ರೂ.1.50 ಲಕ್ಷ, ರೂ.79 ಸಾವಿರ ಹಾಗೂ ರೂ. 75 ಸಾವಿರದ ಮೂರು ಪ್ರತ್ಯೇಕ ಚೆಕ್ ಗಳನ್ನು ನೀಡಿದ್ದರು. ಸದ್ರಿ ಚೆಕ್ ಗಳನ್ನು ಲವಿನಾ ಅವರು ನಗದೀಕರಣಕ್ಕಾಗಿ ಬ್ಯಾಂಕ್ಗೆ ಹಾಜರುಪಡಿಸಿದಾಗ ಮೂರೂ ಚೆಕ್ಗಳು ಬೌನ್ಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ಲವಿನಾ ಅವರು ದಿವಾಕರ ಅವರ ವಿರುದ್ಧ ಪುತ್ತೂರು ಪ್ರಧಾನ ವ್ಯವಹಾರಿಕ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
ಇದರ ವಿಚಾರಣೆ ನಡೆಸಿದ ನ್ಯಾಯಾಲಯ ದಿವಾಕರ ಅವರು ತಪ್ಪಿತಸ್ಥ ಎಂದು ತೀರ್ಮಾನಿಸಿದ್ದು, ಅವರು ದೂರುದಾರರಿಗೆ ರೂ.1.50 ಲಕ್ಷಕ್ಕೆ ಪ್ರತಿಯಾಗಿ ರೂ.1.60 ಲಕ್ಷ, ರೂ.79 ಸಾವಿರಕ್ಕೆ ಪ್ರತಿಯಾಗಿ ರೂ.84 ಸಾವಿರ ಹಾಗೂ ರೂ.75 ಸಾವಿರಕ್ಕೆ ಪ್ರತಿಯಾಗಿ ರೂ.80 ಸಾವಿರ ಪಾವತಿಸುವಂತೆ ಆದೇಶಿಸಿದೆ. ಈ ಮೊತ್ತ ಪಾವತಿಸಲು ವಿಫಲವಾದಲ್ಲಿ 3 ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕು ಹಾಗೂ ದಂಡದ ಮೊತ್ತವನ್ನು ಸಹ ಪಾವತಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ. ದೂರುದಾರರ ಪರವಾಗಿ ನ್ಯಾಯವಾದಿಗಳಾದ ಶಂಭು ಭಟ್, ರವಿಕಿರಣ್ ಕೊಯಿಲ ವಾದಿಸಿದ್ದರು.