ಪುತ್ತೂರು:ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಯುವತಿ ಗರ್ಭಿಣಿಯಾದ ಬಳಿಕ ಮದುವೆಯಾಗಲು ನಿರಾಕರಿಸಿ ವಂಚನೆ ಮಾಡಿರುವ ಆರೋಪಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಜು.10ಕ್ಕೆ ಮುಂದೂಡಿಕೆಯಾಗಿದೆ.
ಯುವತಿಗೆ ವಂಚನೆ ಪ್ರಕರಣ ದಾಖಲಾದ ಬಳಿಕ ನಾಪತ್ತೆಯಾಗಿರುವ ಆರೋಪಿ ಶ್ರೀಕೃಷ್ಣ ಜೆ. ರಾವ್ ನಿರೀಕ್ಷಣಾ ಜಾಮೀನು ಕೋರಿ ಮಂಗಳೂರು ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಜು.3ರಂದು ನಡೆದಿತ್ತು. ಸಂತ್ರಸ್ತ ಯುವತಿಯ ಪರವಾಗಿ ಆಕೆಯ ತಾಯಿ ನಮಿತಾರವರು ವಿಚಾರಣೆ ವೇಳೆ ನ್ಯಾಯಾಧೀಶರ ಮುಂದೆ ಹಾಜರಾದರು. ಸಂತ್ರಸ್ತೆಗೆ ನ್ಯಾಯಾಲಯದಿಂದ ನೋಟಿಸ್ ಜಾರಿಯಾಗಿತ್ತು.ಆದರೆ, ಆಕೆ ಮೂರು ದಿನಗಳ ಹಿಂದೆ ಮಗುವಿಗೆ ಜನ್ಮ ನೀಡಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಸಂತ್ರಸ್ತೆಯ ತಾಯಿ ನ್ಯಾಯಾಧೀಶರಿಗೆ ತಿಳಿಸಿದರಲ್ಲದೆ, ಆರೋಪಿಗೆ ನಿರೀಕ್ಷಣಾ ಜಾಮೀನು ನೀಡದಂತೆ ಮನವಿ ಮಾಡಿದರು.
ಸಂತ್ರಸ್ತೆಯ ತಾಯಿಯ ಲಿಖಿತ ಆಕ್ಷೇಪಣೆಯನ್ನು ಸಲ್ಲಿಸಲು ಕಾಲಾವಕಾಶ ನೀಡಬೇಕೆಂದು ಸರಕಾರಿ ಅಭಿಯೋಜಕರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಅವರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ವಿಚಾರಣೆಯನ್ನು ಜು.10ಕ್ಕೆ ಮುಂದೂಡಿದೆ. ಯುವತಿಗೆ ವಂಚನೆ ಆರೋಪದ ಕುರಿತು ಜೂ.24ರಂದು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬಳಿಕ ಆರೋಪಿ ಶ್ರೀಕೃಷ್ಣಜೆ.ರಾವ್ ತಲೆಮರೆಸಿಕೊಂಡಿದ್ದು ಆತನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.ಈ ಮಧ್ಯೆ ವಂಚನೆ ಪ್ರಕರಣದ ಆರೋಪಿಯ ತಂದೆ ಪಿ.ಜಿ.ಜಗನ್ನಿವಾಸ್ ರಾವ್ ಅವರ ಆರೋಗ್ಯದಲ್ಲಿ ಏರುಪೇರಾಗಿರುವುದರಿಂದ ಅವರು ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಡಿವೈಎಸ್ಪಿ ಅರುಣ್ ನಾಗೇಗೌಡ ಅವರು ಈಗಾಗಲೇ ಆಸ್ಪತ್ರೆಗೆ ತೆರಳಿ ಅವರ ಆರೋಗ್ಯದ ಕುರಿತು ವೈದ್ಯರಿಂದ ಮಾಹಿತಿ ಪಡೆದುಕೊಂಡಿದ್ದಾರೆ.ಅದಾದ ಬಳಿಕ ಆಸ್ಪತ್ರೆ ಯಲ್ಲಿ ಪೊಲೀಸ್ ಪಹರೆ ವ್ಯವಸ್ಥೆ ಮಾಡಲಾಗಿದೆ.