ಪುತ್ತೂರು: ತೆಂಗಿನ ಕಾಯಿ ಗಗನಮುಖಿಯಾದ ಬೆನ್ನಲ್ಲೇ ತೋಟದಲ್ಲಿ ತೆಂಗಿನ ಕಾಯಿ ಕಳ್ಳರ ಹಾವಳಿ ಹೆಚ್ಚಾಗಿದೆ. ಬನ್ನೂರು ಅಲುಂಬುಡದ ತೋಟವೊಂದರಲ್ಲಿ ತೆಂಗಿನ ಕಾಯಿ ಕಳ್ಳನನ್ನು ಊರವರೇ ರೆಡ್ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಜು.7ರ ರಾತ್ರಿ ನಡೆದಿದೆ.
ಕಳೆದ ಕೆಲವು ವಾರಗಳಿಂದ ಬನ್ನೂರು ಪರಿಸರದಲ್ಲಿ ತೋಟದಲ್ಲಿನ ತೆಂಗಿನ ಮರದಿಂದ ತೆಂಗಿನ ಕಾಯಿ, ಅಡಿಕೆ ಮರದಿಂದ ಅಡಿಕೆ ಕಳುವಾಗುತ್ತಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ಪ್ರತಿ ಮನೆಯ ಮಂದಿ ರಾತ್ರಿ ತೋಟ ಕಾವಲು ಕಾಯುವ ಪರಿಸ್ಥಿತಿ ಬಂದೊಗಿತ್ತು. ಜು.7ರ ರಾತ್ರಿ ಬನ್ನೂರು ಅಲುಂಬುಡ ರಾಜೇಶ್ ಎಂಬವರ ತೋಟದಲ್ಲಿ ತೆಂಗಿನ ಮರದಿಂದ ತೆಂಗಿನ ಕಾಯಿ ಬೀಳುತ್ತಿರುವ ಶಬ್ದ ಕೇಳಿ ರಾಜೇಶ್ ಸಹೋದರರು ತೆಂಗಿನ ಮರದ ಬಳಿ ಹೋದಾಗ ತೆಂಗಿನ ಮರದ ಕೆಳಗೆ ನಿಂತಿದ್ದ ಸತೀಶ್ ಎಂಬಾತನನ್ನು ಹಿಡಿದಾಗ ಆತ ಕೈಯಿಂದ ತಪ್ಪಿಸಿ ಓಡಿ ಹೋಗಿದ್ದು, ತೆಂಗಿನ ಮರದಲ್ಲಿದ್ದ ಯಶನ್ ಎಂಬವರನ್ನು ತೆಂಗಿನ ಮರದಿಂದ ಕೆಳಗೆ ಇಳಿಸಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿರುವುದಾಗಿ ತಿಳಿದು ಬಂದಿದೆ.