ಜು.16: ಪುತ್ತೂರಿನಲ್ಲಿ ಎಸ್.ವೈ.ಎಸ್ ಸೌಹಾರ್ದ ಸಂಚಾರ – ಸರ್ವ ಧರ್ಮಿಯರು ಕೈ ಕೈ ಹಿಡಿದು ಸಾಗುವ ವಿಶೇಷ ಜಾಥಾ

0

ಪುತ್ತೂರು: ಕರ್ನಾಟಕ ಸುನ್ನೀ ಯುವಜನ ಸಂಘದ(ಎಸ್‌ವೈಎಸ್) ವತಿಯಿಂದ ಪುತ್ತೂರಿನಲ್ಲಿ ಸೌಹಾರ್ದ ಸಂಚಾರ ಜು.16ರಂದು ನಡೆಯಲಿದೆ ಎಂದು ಸ್ವಾಗತ ಸಮಿತಿ ಸಂಚಾಲಕರಾದ ಅಬೂಶಝ ಕೂರ್ನಡ್ಕ ತಿಳಿಸಿದ್ದಾರೆ. ಜು.14ರಂದು ಪುತ್ತೂರು ಪತ್ರಿಕಾಭನವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೃದಯ-ಹೃದಯಗಳನ್ನು ಬೆಸೆಯೋಣ ಎಂಬ ಧ್ಯೇಯ ವಾಕ್ಯದೊಂದಿಗೆ ಎಸ್‌ವೈಎಸ್ ರಾಜ್ಯ ಸಮಿತಿಯು ಮೂರು ದಿನಗಳ ‘ಸೌಹಾರ್ದ ಸಂಚಾರ’ ಕಾರ್ಯಕ್ರಮ ಕುಂದಾಪುರದಿಂದ ಸುಳ್ಯ ತನಕ, ದ.ಕ ಮತ್ತು ಉಡುಪಿ ಜಿಲ್ಲೆಯ 15ಕೇಂದ್ರಗಳಲ್ಲಿ ನಡೆಯುತ್ತಿದ್ದು ಎಲ್ಲಾ ಮತ ಪಥ ಪಕ್ಷ ಪಂಗಡಗಳ ಜನರನ್ನು ಸೇರಿಸಿಕೊಂಡು ಕೈ ಕೈ ಹಿಡಿದು ಕಾಲ್ನಡಿಗೆಯಲ್ಲಿ ಸಂಚರಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿದರು. ಜಾಥಾವು ಜು.16ರಂದು ಬೆಳಗ್ಗೆ 8.30ಕ್ಕೆ ಪುತ್ತೂರು ತಲುಪಲಿದ್ದು ಏಳ್ಮುಡಿಯಿಂದ ಕಿಲ್ಲೆ ಮೈದಾನದ ವರೆಗೆ ಎಲ್ಲಾ ಜಾತಿ ಧರ್ಮದವರನ್ನು ಸೇರಿಸಿಕೊಂಡು ಪರಸ್ಪರ ಕೈ-ಕೈ ಹಿಡಿದು ಸೌಹಾರ್ದ ಜಾಥಾ ನಡೆಯಲಿದೆ. ಶಾಂತಿಯ ಸಹಬಾಳ್ವೆಯ ಸಮಾನತೆಯ ಸೌಹಾರ್ದದ ಸಂದೇಶ ಸಾರುವುದು ನಮ್ಮ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.


ಜಾಥಾದಲ್ಲಿ ಡಾ.ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ ಕಾವಲ್‌ಕಟ್ಟೆ, ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ, ಪುತ್ತೂರು ಮಾಯ್‌ದೇ ದೇವುಸ್ ಚರ್ಚ್‌ನ ಧರ್ಮಗುರು ಡಾ.ಲಾರೆನ್ಸ್ ಮಸ್ಕರೇನ್ಹಸ್, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಡಾ.ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ, ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ದ.ಕ.ಜಿಲ್ಲಾ ಎಸ್‌ವೈಎಸ್ ಅಧ್ಯಕ್ಷ ಅಶ್ರಫ್ ಸಖಾಫಿ ಮಾಡಾವು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಅಧ್ಯಕ್ಷ ಯೂಸುಫ್ ಗೌಸಿಯಾ ಸಾಜ, ಪ್ರ.ಕಾರ್ಯದರ್ಶಿ ಇಕ್ಬಾಲ್ ಬಪ್ಪಳಿಗೆ, ಆರ್ಥಿಕ ಕಾರ್ಯದರ್ಶಿ ಯೂಸುಫ್ ಹಾಜಿ ಕೈಕಾರ, ವೈಸ್ ಚೇರ್‌ಮೆನ್ ಖಾಸಿಂ ಹಾಜಿ ಮಿತ್ತೂರು, ಕನ್ವೀನರ್ ಸ್ವಾಲಿಹ್ ಮುರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here