





ಪುತ್ತೂರು: ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ನಾಯಕ ಎಚ್.ಮಹಮ್ಮದ್ ಆಲಿ ಅವರು ನೇಮಕಗೊಂಡಿದ್ದಾರೆ.ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರು ಈ ನೇಮಕಾತಿ ಆದೇಶ ಮಾಡಿದ್ದಾರೆ.
ಪಕ್ಷ ಸಂಘಟನೆ ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಸಹಿತ ಸರಕಾರದ ಜನಪರ ಕಾರ್ಯಕ್ರಮಗಳನ್ನು ಪ್ರಚಾರಗೊಳಿಸಿ ಜನಸಾಮಾನ್ಯರಿಗೆ ಮುಟ್ಟಿಸುವ ಮಹತ್ತರ ಜವಾಬ್ದಾರಿಯನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ಕೆಪಿಸಿಸಿ ಪ್ರಚಾರ ಸಮಿತಿಗೆ ನೀಡಿದೆ.ವಿನಯ ಕುಮಾರ್ ಸೊರಕೆ ಅವರು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಬಳಿಕ ಪ್ರಚಾರ ಸಮಿತಿ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು ಪ್ರತಿ ಜಿಲ್ಲೆ,ಕ್ಷೇತ್ರ,ಬ್ಲಾಕ್, ಪಂಚಾಯತ್ ಮಟ್ಟದಲ್ಲಿ ಪ್ರಚಾರ ಸಮಿತಿ ರಚಿಸಲು ಮುಂದಾಗಿದೆ.ಇದೀಗ ಪುತ್ತೂರು,ಬಂಟ್ವಾಳ,ಬೆಳ್ತಂಗಡಿ ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಹಮ್ಮದ್ ಆಲಿ ಅವರನ್ನು ನೇಮಕಗೊಳಿಸಿ ಜವಾಬ್ದಾರಿ ನೀಡಲಾಗಿದೆ.ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಪ್ರಸ್ತುತ ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಎಚ್.ಮಹಮ್ಮದ್ ಆಲಿಯವರಿಗೆ ಇದೀಗ ಮಹತ್ವದ ಜವಾಬ್ದಾರಿ ನೀಡಲಾಗಿದೆ.ಮಂಡಲ ಪಂಚಾಯತ್ ಪ್ರಧಾನರಾಗಿ,ಪುರಸಭೆ ಸದಸ್ಯರಾಗಿ,ನಗರ ಸಭೆಯ ಸದಸ್ಯರಾಗಿ,ಉಪಾಧ್ಯಕ್ಷರಾಗಿ,ಸ್ಥಾಯಿ ಸಮಿತಿ ಅಧ್ಯಕ್ಷರಾಗಿ,ವಿಪಕ್ಷ ನಾಯಕರಾಗಿ ಯಶಸ್ವಿ ಜವಾಬ್ದಾರಿ ನಿಭಾಯಿಸಿರುವ ಎಚ್.ಮಹಮ್ಮದ್ ಆಲಿಯವರು ಪ್ರಸ್ತುತ ಆರ್ಯಾಪು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.ಕ್ರಿಯಾಶೀಲ ವ್ಯಕ್ತಿತ್ವ,ಉತ್ತಮ ಸಂಘಟಕರಾಗಿರುವ ಮಹಮ್ಮದ್ ಆಲಿಯವರು ಈಗಾಗಲೇ ಪಕ್ಷದ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಅನುಭವ ಹೊಂದಿದ್ದಾರೆ.






