ಪುತ್ತೂರು: ‘ಜನಸೇವೆಯೇ ಜನಾರ್ದನ ಸೇವೆʼ ಎಂದು ಭಾವಿಸಿ ಸಮಾಜದಲ್ಲಿರುವ ನಿರ್ಗತಿಕ ಮಕ್ಕಳು, ವೃದ್ಧರ ಸೇವೆಯಲ್ಲಿಯೇ ನಿರತರಾಗಿರುವ ಹಲವು ಮಂದಿ ಎಲೆಮರೆಯ ಕಾಯಿಯಂತೆ ಸಮಾಜಕ್ಕೆ ಗೋಚರವಾಗದ ರೀತಿಯಲ್ಲಿರುತ್ತಾರೆ ಎನ್ನುವುದಕ್ಕೆ ಪುತ್ತೂರಿನ ಒಳಮೊಗ್ರು ಗ್ರಾಮದ ಅಜಲಡ್ಕ ರತ್ನಾಕರ ಆಳ್ವರೂ ಓರ್ವ ಸಾಕ್ಷಿಯಾಗಿದ್ದಾರೆ. ತನ್ನ ವೃತ್ತಿಯ ಬಳಿಕ ಅನಾಥ ಮಕ್ಕಳ ಸೇವೆಯನ್ನೇ ಪ್ರವೃತ್ತಿಯಾಗಿರಿಸಿಕೊಂಡಿರುವ ಇವರು ಅದರಲ್ಲಿ ಸಂತೃಪ್ತಿಯನ್ನು ಕಂಡಿದ್ದಾರೆ.

ಪುತ್ತೂರು ತಾಲೂಕಿನ ಪಂಜೊಟ್ಟು ಕುಟುಂಬದ ಅಜಲಡ್ಕ ದಿ. ಶೀಲಾವತಿ ಆಳ್ವ ಮತ್ತು ದಿ. ಸುಬ್ಬಣ್ಣ ಆಳ್ವ ದಂಪತಿಯ ಪುತ್ರನಾಗಿ ಜನಿಸಿರುವ ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಉಪ್ಪಳಿಗೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಬೆಟ್ಟಂಪಾಡಿ ನವೋದಯ ಪ್ರೌಢ ಶಾಲೆಯಲ್ಲಿ ಪ್ರೌಢಶಿಕ್ಷಣವನ್ನೂ ಹಾಗೂ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಿಕಾಂ ಪದವಿಯನ್ನೂ ಪಡೆದಿರುತ್ತಾರೆ. GLAXO SMITHKLINE ಫಾರ್ಮ, ಬೆಂಗಳೂರಲ್ಲಿ ತನ್ನ ಮೊದಲ ನೌಕರಿ ಆರಂಭಿಸಿ 17 ವರ್ಷ ಕರ್ತವ್ಯ ನಿರ್ವಹಿಸಿದರು. ಬಳಿಕ DTDC EXPRESS ಲಿಮಿಟೆಡ್, ಬೆಂಗಳೂರುನಲ್ಲಿ 16 ವರ್ಷ ಪಕೆಲಸ ನಿರ್ವಹಿಸಿದರು. ಪ್ರಸ್ತುತ ಬೆಂಗಳೂರಿನಲ್ಲಿ ಸ್ವಂತ ಮನೆ ಇದ್ದು, ಪುತ್ರ ಆದಿತ್ಯ ಆಳ್ವ ಬೆಂಗಳೂರನಲ್ಲಿ ಸಾಫ್ಟ್ವೇರ್ ಇಂಜಿನಿಯರ್, ಇನ್ನೋರ್ವ ಪುತ್ರ ಆರಾಧ್ಯ ಆಳ್ವ ಅಮೇರಿಕಾದ ಕ್ಯಾಲಿಫೋರ್ನಿಯಾ ದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾರೆ. ಇವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವರವರ ಸಹೋದರರಾಗಿದ್ದಾರೆ.
2017 ರಿಂದ ನೌಕರಿ ಬಿಟ್ಟು ಜನಸೇವೆ ಕಡೆ ಒಲವು ತೋರಿದ ಇವರು SSCF ಎಂಬ ಸಂಸ್ಥೆ ಮುಖಾಂತರ ಅನಾಥ ಮಕ್ಕಳ ಮತ್ತು ಹಿರಿಯ ನಾಗರಿಕರ ಆಶ್ರಮ ದಲ್ಲಿ 40 ಮಕ್ಕಳ ಸೇವೆ ಮಾಡುತ್ತಿದ್ದಾರೆ. ಈ ಸಂಸ್ಥೆಯಲ್ಲಿ ತಂದೆ ತಾಯಿ ಇಲ್ಲದಿರುವ ಮಕ್ಕಳು ಅಥವಾ ಒಂಟಿ ಪೋಷಕರ ಮಕ್ಕಳು ಅಥವಾ ವಿದ್ಯಾಭ್ಯಾಸದಿಂದ ವಂಚಿತರಾಗಿರುವ ಮಕ್ಕಳಿಗೆ ಉಚಿತ ಊಟ ಬಟ್ಟೆ ವಸತಿ ವಿದ್ಯಾಭ್ಯಾಸ ನೀಡುತ್ತಾ ಬರಲಾಗಿದೆ. ಮಕ್ಕಳಿಗೆ ಕನ್ನಡ ಮಾಧ್ಯಮ ಮತ್ತು ಆಂಗ್ಲ ಮಾಧ್ಯಮ ಎರಡರಲ್ಲೂ, ಒಳ್ಳೆಯ ಶಾಲೆಯಲ್ಲಿ ದಾಖಲಾತಿ ಮಾಡಿ ವಿದ್ಯಾಭ್ಯಾಸ ಕೊಡಿಸಲಾಗುತ್ತಿದೆ.
ಉಚಿತ ವಿದ್ಯಾಭ್ಯಾಸ ಜೊತೆಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಒತ್ತು ಕೊಡುವ ಪ್ರವೃತ್ತಿ ಬೆಳೆಸಿಕೊಂಡಿರುವ ಆಳ್ವರವರ ಸಂಸ್ಥೆಯಲ್ಲಿ ಈಗಾಗಲೇ ಹಲವು ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ 10 ನೇ ದರ್ಜೆ ದಾಟಿ ಕಾಲೇಜುಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ‘ನಮ್ಮಲ್ಲಿ ದಾಖಲಾದ ಎಲ್ಲ ಅವಕಾಶ ವಂಚಿತ ಮಕ್ಕಳಿಗೆ ಉತ್ತಮ ವ್ಯಾಸಂಗ ಕೊಡಿಸಿ ಅವರಿಗೆ ಒಳ್ಳೆಯ ಭವಿಷ್ಯ ರೂಪಿಸುವುದೇ ನಮ್ಮ ಸಂಸ್ಥೆಯ ಗುರಿ’ ಎನ್ನುತ್ತಾರೆ ಆಳ್ವರವರು.