ನೆಲ್ಯಾಡಿ: ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಜೋತು ಬಿದ್ದ ವಿದ್ಯುತ್ ತಂತಿಗೆ ಸಿಲುಕಿದ ಪರಿಣಾಮ ವಿದ್ಯುತ್ ಕಂಬ ತುಂಡಾಗಿ ಬಿದ್ದ ಘಟನೆ ಕೊಕ್ಕಡ ಸಮೀಪ ಕೌಕ್ರಾಡಿ ಗ್ರಾಮದ ಮೂಡುಬೈಲು ಎಂಬಲ್ಲಿ ಜು.18ರಂದು ನಡೆದಿದೆ. ಘಟನೆಯಲ್ಲಿ ಯಾವುದೇ ಅಪಾಯವಾಗಿಲ್ಲ.
ವಿದ್ಯುತ್ ತಂತಿಯ ಮೇಲೆ ಮರ ಬಿದ್ದ ಪರಿಣಾಮ ತಂತಿ ರಸ್ತೆಗೆ ಬಾಗಿಕೊಂಡಿತ್ತು. ಇದರ ಅರಿವಿಲ್ಲದ ಧರ್ಮಸ್ಥಳದಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ಚಾಲಕ ಬಸ್ ಚಲಾಯಿಸಿದ ಪರಿಣಾಮ ವಿದ್ಯುತ್ ತಂತಿ ಬಸ್‌ಗೆ ಸಿಲುಕಿಕೊಂಡಿದೆ. ಇದರಿಂದಾಗಿ ಪಕ್ಕದಲ್ಲಿನ ವಿದ್ಯುತ್ ಕಂಬವೊಂದು ತುಂಡಾಗಿ ಬಿದ್ದಿದೆ. ಅದೃಷ್ಟವಶಾತ್ ಈ ವೇಳೆ ತಂತಿಯಲ್ಲಿ ವಿದ್ಯುತ್ ಸರಬರಾಜು ಇಲ್ಲದೇ ಇದ್ದ ಕಾರಣದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಸ್‌ನ ಮುಂಭಾಗಕ್ಕೆ ಸ್ವಲ್ಪ ಹಾನಿಯಾಗಿದೆ. ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ವಿದ್ಯುತ್ ತಂತಿ ಸರಿಪಡಿಸಿದರು ಎಂದು ತಿಳಿದುಬಂದಿದೆ.