ನೆಲ್ಯಾಡಿ: ಕೊಕ್ಕಡ ಭುವನ ಜ್ಯುವೆಲ್ಲರ್ಸ್ ಮಾಲಕ, ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಕಟ್ಟೆಮಜಲು ನಿವಾಸಿ ಪದ್ಮನಾಭ ಆಚಾರ್ಯ(53ವ.)ರವರು ಜು.21ರಂದು ಮಧ್ಯಾಹ್ನ ಹೃದಯಾಘಾತದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೂಲತ: ಕೊಕ್ಕಡ ಗ್ರಾಮದ ಬಂಗಾಡಿಮಜಲು ನಿವಾಸಿಯಾಗಿದ್ದ ಪದ್ಮನಾಭ ಆಚಾರ್ಯ ಅವರು ಕೌಕ್ರಾಡಿ ಗ್ರಾಮದ ಕಟ್ಟೆಮಜಲುನಲ್ಲಿ ಜಾಗ ಖರೀದಿಸಿ ಸ್ವಂತ ಮನೆ ಮಾಡಿ ಕಳೆದ 10 ವರ್ಷದಿಂದ ಇಲ್ಲೇ ವಾಸವಾಗಿದ್ದರು. ಜು.20ರಂದು ರಾತ್ರಿ ಮನೆಯಲ್ಲಿ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು ಮನೆಯವರು ಕೊಕ್ಕಡ ಸರಕಾರಿ ಆಸ್ಪತ್ರೆಗೆ ಕರೆತಂದಿದ್ದರು. ಅಲ್ಲಿ ಚೇತರಿಸದೆ ಇದ್ದ ಹಿನ್ನೆಲೆಯಲ್ಲಿ ಜು.21ರಂದು ಬೆಳಿಗ್ಗೆ ಪುತ್ತೂರು, ಬಳಿಕ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ಮಧ್ಯಾಹ್ನದ ವೇಳೆ ಕೊನೆಯುಸಿರೆಳೆದರು ಎಂದು ವರದಿಯಾಗಿದೆ.
ಪದ್ಮನಾಭ ಆಚಾರ್ಯರವರು ಕೊಕ್ಕಡದಲ್ಲಿ ’ಭುವನ ಜ್ಯುವೆಲ್ಲರ್ಸ್’ ಹೊಂದಿದ್ದು ಕೆನರಾ ಬ್ಯಾಂಕ್ನ ಕೊಕ್ಕಡ ಶಾಖೆಯಲ್ಲಿ 20 ವರ್ಷ ಸರಾಫರಾಗಿಯೂ ಸೇವೆ ಸಲ್ಲಿಸಿದ್ದರು. ವ್ಯಾಪಾರದಲ್ಲಿ ಪ್ರಾಮಾಣಿಕತೆ ಹಾಗೂ ಸರಳತೆ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಮೃತರು ತಾಯಿ ಸುಶೀಲ, ಪತ್ನಿ ಶೋಭಾ, ಪುತ್ರಿಯರಾದ ಈಶ, ತೃಷಾ, ಸಹೋದರ ದಿನೇಶ್ ಆಚಾರ್ಯ, ಸಹೋದರಿಯರಾದ ಕಾರ್ತ್ಯಾಯಿನಿ, ಲೀಲಾ ಅವರನ್ನು ಅಗಲಿದ್ದಾರೆ.