ಶೀಘ್ರದಲ್ಲಿ ನ್ಯಾಯಾಲಯ ಪ್ರಾರಂಭಕ್ಕೆ ಕ್ರಮ
ಕಡಬ: ಕಡಬದಲ್ಲಿ ನ್ಯಾಯಾಲಯವನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಜು.26ರಂದು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ಪಾಟೀಲ್ ಭೇಟಿ ನೀಡಿ ಇಲ್ಲಿನ ಗಣೇಶ್ ಬಿಲ್ಡಿಂಗ್‌ನ ನೂತನ ಕಟ್ಟಡದಲ್ಲಿ ತಾತ್ಕಾಲಿಕವಾಗಿ ನ್ಯಾಯಾಲಯ ಪ್ರಾರಂಭಿಸಲು ಕಟ್ಟಡ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ನ್ಯಾಯಾಧೀಶರು, ನ್ಯಾಯಾಲಯಕ್ಕಾಗಿ ಕಡಬ ಮಿನಿ ವಿಧಾನ ಸೌಧದ ಹಿಂದುಗಡೆ ಮೂರು ಎಕ್ರೆ ಜಾಗದಲ್ಲಿ ಕಟ್ಟಡ ನಿರ್ಮಾಣವಾಗುವ ತನಕ ಈಗ ತಾತ್ಕಾಲಿಕವಾಗಿ ನ್ಯಾಯಾಲಯ ಪ್ರಾರಂಭಿಸಬೇಕಾಗಿದೆ. ತಾತ್ಕಾಲಿಕವಾಗಿ ನ್ಯಾಯಾಲಯ ಪ್ರಾರಂಭಿಸುವ ನಿಟ್ಟಿನಲ್ಲಿ ಈಗಾಗಲೇ ಇಲ್ಲಿನ ಎ.ಪಿ.ಎಂ.ಸಿ ಕಟ್ಟಡವನ್ನು ಪರಿಶೀಲಿಸಲಾಗಿದ್ದು ಅದು ಅಷ್ಟೊಂದು ಸೂಕ್ತವಾಗಿಲ್ಲ ಹಾಗಾಗಿ ಇಲ್ಲಿ ಖಾಸಗಿ ಕಟ್ಟಡವನ್ನು ಪರಿಶೀಲಿಸಲಾಗಿದೆ. ಕಾದಿರಿಸಿದ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಿ ನ್ಯಾಯಾಲಯ ಪ್ರಾರಂಭಿಸಲು ಸಮಯವಕಾಶ ಬೇಕಾಗುವುದರಿಂದ ಈಗ ಪರಿಶೀಲಿಸಿದ ಖಾಸಗಿ ಕಟ್ಟಡದ ಸಾಧಕಬಾಧಕಗಳನ್ನು ತಿಳಿದುಕೊಂಡು ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು, ಶೀಘ್ರದಲ್ಲೇ ನ್ಯಾಯಾಲಯ ಪ್ರಾರಂಭಿಸಲಾಗುವುದು ಎಂದರು. ಲೋಕೋಪಯೋಗಿ ಇಲಾಖಾ ಅಧಿಕಾರಿ ಪ್ರಮೋದ್ ಕುಮಾರ್ ಕೆ.ಕೆ. ನ್ಯಾಯಾಧೀಶರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಶೀನಪ್ಪ ಗೌಡ ಬೈತಡ್ಕ, ಲೋಕೇಶ್ ಎಂ.ಜೆ. ಕೊಣಾಜೆ, ಶಿವಪ್ರಸಾದ್ ಪುತ್ತಿಲ, ಕೃಷ್ಣಪ್ಪ ಗೌಡ ಕಕ್ವೆ, ನಾರಾಯಣ ಗೌಡ, ಮನೋಹರ ಸಬಳೂರು, ಸುಂದರ ಗೌಡ ಆಲಂಕಾರು, ಅವಿನಾಶ್ ಬೈತಡ್ಕ, ಪ್ರಶಾಂತ್ ಪಂಜೋಡಿ, ಅಶ್ವಿತ್ ಕಂಡಿಗ, ಜ್ಞಾನೇಶ್ ಕಡಬ, ಅಕ್ಷಯ್ ಕಡಬ, ಗುರುಚರಣ್ ಕೊಪ್ಪಡ್ಕ, ಚೇತನ್ ಕೊಂಬಾರು, ಜಿಲ್ಲಾ ನ್ಯಾಯಾಲಯದ ಮ್ಯಾನೇಜರ್ ಸುಭಾಶ್, ಗಣೇಶ್ ಬಿಲ್ಡಿಂಗ್ ಮಾಲಕ ಸುಂದರ ಗೌಡ ಮಂಡೆಕರ ಮತ್ತಿತರರು ಉಪಸ್ಥಿತರಿದ್ದರು.