ಪುತ್ತೂರು: ಕಾರ್ಗಿಲ್ ಯುದ್ಧ ಗೆದ್ದ ಸಂಭ್ರಮವೇ ಕಾರ್ಗಿಲ್ ವಿಜಯ್ ದಿವಸ್. ಪಾಕಿಸ್ತಾನದ ಭಯೋತ್ಪಾದಕರನ್ನು ಬಗ್ಗು ಬಡಿದು ವಿಜಯ ಸಾಧಿಸಿದ ದಿನ. ದೇಶ ಸೇವೆಯ ಪವಿತ್ರ ಕೈಂಕರ್ಯಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅದೆಷ್ಟೋ ವೀರ ಯೋಧರು ನಮ್ಮ ಕಣ್ಣ ಮುಂದೆ ಮಿಂಚಿ ಮರೆಯಾಗ್ತಾರೆ. ಗಡಿ ಕಾಯುವ ಸೈನಿಕ ಎಂದೂ ತನ್ನ ಭವಿಷ್ಯದ ಬಗ್ಗೆ ಚಿಂತಿಸೋದಿಲ್ಲ. ಬದಲಾಗಿ ತನ್ನ ದೇಶ, ತನ್ನ ಜನರು ಅನ್ನೋ ಅಭಿಮಾನದಿಂದ ರಾತ್ರಿ ಹಗಲು ಎನ್ನದೇ ದುಡಿಯುತ್ತಾನೆ. ರಾಷ್ಟ್ರಪ್ರೇಮವನ್ನು ಮೈಗೂಡಿಸಿಕೊಂಡವನಿಂದ ಮಾತ್ರವೇ ಇದು ಸಾಧ್ಯ. ದೇಶ ಸೇವೆಗೆ ಅವನು,ಇವನು ಎನ್ನುವ ಬೇಧ ಭಾವವಿಲ್ಲ. ದೇಶಕ್ಕೆ ಗಡಿಯಿದೆಯೇ ಹೊರತು ದೇಶಪ್ರೇಮಕ್ಕೆ ಗಡಿಯಿಲ್ಲ. ಯುವ ಜನತೆ ದೇಶಾಭಿಮಾನದ ಕಿಚ್ಚನ್ನು ಬೆಳೆಸಿಕೊಳ್ಳಬೇಕು. ದೇಶ ಸೇವೆಗಾಗಿ ಪ್ರಾಣತ್ಯಾಗ ಮಾಡಿದವರ ಕಥೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಹೇಳಿದರು.
ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಗಿಲ್ ವಿಜಯೋತ್ಸವದ ಆಚರಣೆ ಸಂದರ್ಭದಲ್ಲಿ ಮಾತನಾಡಿದರು. ವೀರ ಯೋಧರ ಭಾವಚಿತ್ರಕ್ಕೆ ಪುಷ್ಪಾರ್ಚನೆಯ ಮೂಲಕ ನುಡಿನಮನಗಳನ್ನು ಸಲ್ಲಿಸಿದರು.
ಭಾರತೀಯ ಸೈನ್ಯದ ಶೌರ್ಯ,ಸೈನಿಕರ ಸಾಹಸವನ್ನು ಜಗತ್ತಿಗೆ ಪರಿಚಯಿಸಿದ್ದು ಕಾರ್ಗಿಲ್ ಯುದ್ಧ. ಹೀಗಾಗಿ ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸ್ ಸಂಭ್ರಮದಿಂದ ಭಾರತೀಯರು ಆಚರಿಸುತ್ತಾರೆ. ಅಂತಹ ಮಹಾನ್ ಸೈನಿಕರಿಗೆ ಗೌರವ ನೀಡುವುದು ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಶಂಕರ್ ಮಹಾದೇವನ್ ಅಕಾಡೆಮಿಯಲ್ಲಿ ಸಂಗೀತದ ಪ್ರಾಧ್ಯಾಪಕರಾದ ನಂದಿನಿ ವಿನಾಯಕ ಪುತ್ತೂರು ಮತ್ತು ಚಲನಚಿತ್ರ ನಿರ್ದೇಶಕರಾದ ಕೀರ್ತನ್ ಶೆಟ್ಟಿ ಸುಳ್ಯ ಇವರು ಭಾಗವಹಿಸಿದ್ದರು. ಈ ಸಮಾರಂಭದಲ್ಲಿ ಉಪನ್ಯಾಸಕರಾದ ಮಧುರಾ ಸ್ವಾಗತಿಸಿ, ವಂದಿಸಿದರು.