ಮಹಾಲಿಂಗೇಶ್ವರ ದೇವಸ್ಥಾನಕ್ಕೆ ರೂ.50 ಕೋಟಿ ಮೌಲ್ಯದ ಜಾಗ ಮರುಸ್ವಾಧೀನ:ಮೆಚ್ಚುಗೆ ವ್ಯಕ್ತಪಡಿಸಿದ ದಿನೇಶ್ ಗುಂಡೂರಾವ್

0

ಪುತ್ತೂರು:ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ 50 ಕೋಟಿ ರೂಪಾಯಿ ಮೌಲ್ಯದ ಜಾಗವನ್ನು ವಶಪಡಿಸಿ ದೇವರಿಗೆ ಸಮರ್ಪಣೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮತ್ತು ಸದಸ್ಯರ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಜು.25ರಂದು ನಡೆದ ಜಿಲ್ಲೆಯ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗಳ ಸಮಾಲೋಚನಾ ಸಭೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ದೇವಳದ ಕುರಿತು ಮಾಹಿತಿ ನೀಡಿದರು.ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸುಮಾರು 34 ಎಕ್ರೆ ಜಾಗ ಇದೆ.ಆದರೆ ನಮ್ಮ ವ್ಯವಸ್ಥಾಪನಾ ಸಮಿತಿ ಬರುವ ಸಂದರ್ಭ ಕೇವಲ 14 ಎಕ್ರೆ ಇತ್ತು.ಉಳಿದವೆಲ್ಲ ಒತ್ತುವರಿಯಾಗಿತ್ತು.ನಾವು ಅದನ್ನು ಮರಳಿ ದೇವಸ್ಥಾನಕ್ಕೆ ಸಮರ್ಪಣೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ.ಈಗ ರೂ.50 ಕೋಟಿ ಮೌಲ್ಯದ ಜಾಗವನ್ನು ವಶ ಪಡಿಸಿಕೊಂಡಿದ್ದೇವೆ.ಆದರೆ ಜಾಗ ಪಡೆಯುವ ಸಂದರ್ಭ ರಾಜಕೀಯ ದುರುದ್ದೇಶದಿಂದ ನಮ್ಮ ಮೇಲೆ ಎರಡೆರಡು ಎಪ್ಐಆರ್ ಆಗಿದೆ.ಇನ್ನು ಎರಡೂವರೆ ವರ್ಷದಲ್ಲಿ ನಮ್ಮ ಅವಧಿ ಮುಗಿಯುತ್ತದೆ.ಆದರೆ ನಮ್ಮ ಮೇಲಿನ ಕೇಸು ಮುಗಿಯುವುದಿಲ್ಲ.ಅದಕ್ಕಾಗಿ ನೀವು ನಮಗೆ ರಕ್ಷಣೆ ಕೊಡಬೇಕು ಎಂದರು.ಉತ್ತರಿಸಿದ ಸಚಿವ ದಿನೇಶ್ ಗುಂಡೂರಾವ್ ಅವರು,ನೀವು ಧಾರ್ಮಿಕ ಕ್ಷೇತ್ರಕ್ಕಾಗಿ ಹೋರಾಟ ಮಾಡುತ್ತಿರುವುದರಿಂದ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಬೇಕು.ದೇವರು ನಿಮ್ಮ ಜೊತೆ ಇದ್ದಾರೆ.ನಾವು ಕೂಡಾ ನಿಮ್ಮ ಜೊತೆಯಲ್ಲಿದ್ದೇವೆ ಎಂದು ಹೇಳಿದರಲ್ಲದೆ,ದೇವಸ್ಥಾನಕ್ಕೆ 50 ಕೋಟಿ ರೂಪಾಯಿ ಮೌಲ್ಯದ ಜಾಗ ವಶ ಪಡಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.


ದೇವಸ್ಥಾನಗಳಿಗೆ ಜಾಗ ವಶಪಡಿಸಲು ಅನುದಾನ ಒದಗಿಸಿ:
ಒತ್ತುವಾರಿಯಾದ ಜಾಗದಲ್ಲಿ ಕಡು ಬಡವರಿದ್ದುದರಿಂದ ಜಾಗ ತೆರವು ಸಂದರ್ಭ ನಾನು ಮತ್ತು ಪುತ್ತೂರಿನ ಶಾಸಕರಾಗಿರುವ ಅಶೋಕ್ ಕುಮಾರ್ ರೈ ಅವರು ರೂ.22.42 ಲಕ್ಷವನ್ನು ದೇವಸ್ಥಾನಕ್ಕೆ ಜಾಗ ಮರಳಿಸಿದವರಿಗೆ ನೀಡಿದ್ದೇವೆ.ಇನ್ನು ಕೂಡಾ ಜಾಗ ತೆರವು ಮಾಡಲಿಕ್ಕಿದೆ.ನಾವು ತೆರವು ಮಾಡಲು ಸಿದ್ದರಿದ್ದೇವೆ.ಆದರೆ ನಮ್ಮಲ್ಲಿ ಆರ್ಥಿಕ ಕೊರತೆಯಿದೆ.ಈ ನಿಟ್ಟಿನಲ್ಲಿ ಸರಕಾರದಿಂದ ಎಲ್ಲಾ ದೇವಸ್ಥಾನಗಳಿಗೂ ಅನುದಾನ ನೀಡುವಂತೆ ಪಂಜಿಗುಡ್ಡೆ ಈಶ್ವರ ಭಟ್ ಮನವಿ ಮಾಡಿದರು.ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ, ಸುಭಾಷ್ ರೈ ಬೆಳ್ಳಿಪ್ಪಾಡಿ, ಕುಂಜೂರು ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರೋಹನ್‌ರಾಜ್, ಮಹಾಲಿಂಗೆಶ್ವರ ದೇವಸ್ಥಾನದ ಕಾರ್ಯನಿರ್ವಹಣಾಽಕಾರಿ ಕೆ.ವಿ.ಶ್ರೀನಿವಾಸ ಉಪಸ್ಥಿತರಿದ್ದರು.ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ,ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಸಹಿತ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಚಿವರಿಗೆ ಮಹಾಲಿಂಗೇಶ್ವರ ದೇವರ ಪ್ರಸಾದ ನೀಡಿ ಗೌರವ
ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮತ್ತು ಸದಸ್ಯರು ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಶ್ರೀ ದೇವರ ಪ್ರಸಾದ ಮತ್ತು ಶ್ರೀ ದೇವರ ಫೋಟೋವನ್ನು ನೀಡಿ ಶಲ್ಯ ಹೊದಿಸಿ ಗೌರವಿಸಿದರು.

LEAVE A REPLY

Please enter your comment!
Please enter your name here