ಬೆಟ್ಟಂಪಾಡಿ ದೇವಾಲಯದಲ್ಲಿ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ವೃತಪೂಜೆ, ಧಾರ್ಮಿಕ ಸಭೆ

0

ದೇವರ ಮೇಲೆ ಶ್ರದ್ದೆ ನಂಬಿಕೆ ಇದ್ದರೆ ದೇವರು ಒಲಿಯುತ್ತಾನೆ- ಹರಿಣಾಕ್ಷಿ.ಜೆ

ನಿಡ್ಪಳ್ಳಿ: ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ವೃತ ಪೂಜಾ ಸಮಿತಿ ಬೆಟ್ಟಂಪಾಡಿ ಇದರ ವತಿಯಿಂದ 7ನೇ ವರ್ಷದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ವೃತಪೂಜಾ ಕಾರ್ಯಕ್ರಮ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬೆಟ್ಟಂಪಾಡಿಯಲ್ಲಿ ವೇದಮೂರ್ತಿ ರಾಧಾಕೃಷ್ಣ ಭಟ್ ಕಕ್ಕೂರು ಇವರ ನೇತೃತ್ವದಲ್ಲಿ ಆ.8 ರಂದು ನಡೆಯಿತು. 

ಸಭಾ ಕಾರ್ಯಕ್ರಮ ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ವಕೀಲರಾದ ಹರಿಣಾಕ್ಷಿ. ಜೆ ಮಾತನಾಡಿ ವರಮಹಾಲಕ್ಷ್ಮಿ ವೃತಪೂಜೆಯ ಮಹತ್ವ ಬಗ್ಗೆ ತಿಳಿಸಿ ಮಹಿಳೆಯರು ಯಾವುದೇ ಸಂದರ್ಭದಲ್ಲೂ ದೃತಿಗೆಡದೆ ದೇವರ ಮೇಲೆ ಶ್ರದ್ದೆಯಿಂದ ನಂಬಿಕೆ ಇಟ್ಟರೆ ದೇವರು ಒಲಿಯುತ್ತಾನೆ ಆದರೆ  ಮನುಷ್ಯನಲ್ಲಿ ತಾಳ್ಮೆ ಇರಬೇಕಷ್ಟೆ ಎಂದು ಹೇಳಿದರು.

 ಮುಖ್ಯ ಅತಿಥಿ ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಮಂಗಳೂರು ಇದರ ಆಡಳಿತಾಧಿಕಾರಿ ಪ್ರೀಯಾ ರಾಜಮೋಹನ್ ಮಾತನಾಡಿ ವರಮಹಾಲಕ್ಷ್ಮಿ ವೃತ ಪೂಜೆಯ ವೈಶಿಷ್ಟತೆ ಬಗ್ಗೆ ತಿಳಿಸಿದರು. ನಮ್ಮ ಸಾಂತ್ವನ ಕೇಂದ್ರಕ್ಕೆ ದೌರ್ಜನ್ಯಕ್ಕೆ ಒಳಗಾದ ಮಕ್ಕಳು ಮತ್ತು ಮಹಿಳೆಯರು ದಿನ ನಿತ್ಯ ಬರುತ್ತಾರೆ. ಅವರಲ್ಲಿ ಒಂದೊಂದು ದೇವಿಯ ಶಕ್ತಿಯನ್ನು ಮೈಗೂಡಿಸಿಕೊಳ್ಳುವಂತೆ ಮಾರ್ಗದರ್ಶನ ನೀಡುತ್ತೇವೆ. ನಾನು ಕೂಡ ಇದೆ ಊರಿನ ಮಗಳು ನನಗೆ ನಮ್ಮೂರಿನ ವೇದಿಕೆಯಲ್ಲಿ ನಿಂತುಕೊಳ್ಳಲು ಬಹಳ ಸಂತೋಷವಾಗುತ್ತಿದೆ ಎಂದರು.

  ಶ್ರೀ ಕ್ಷೇ.ಧ.ಗ್ರಾ ಯೋಜನೆ ಬಿಸಿ ಟ್ರಸ್ಟ್ ಪುತ್ತೂರು ಇಲ್ಲಿಯ ಯೋಜನಾಧಿಕಾರಿ ಶಶಿಧರ.ಎಂ ಮಾತನಾಡಿ ಧರ್ಮಸ್ಥಳದ ಖಾವಂದರು ಮಹಿಳೆಯರ ಅಭಿವೃದ್ಧಿಗಾಗಿ ಸಾವಿರಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮಹಿಳೆಯರು ಪುರುಷರಿಗೆ ಸಮಾನವಾಗಿ ಜವಾಬ್ದಾರಿಯನ್ನು ನಿರ್ವಹಿಸಲು ಶಕ್ತರಾಗಿದ್ದಾರೆ. ಇದಕ್ಕೆ ನಿದರ್ಶನ ಈ ಒಂದು ಪೂಜಾ ಕಾರ್ಯಕ್ರಮದ ನಿರ್ವಹಣೆಯೇ ಸಾಕ್ಷಿ. ಯಾವತ್ತೂ ನಾವು ಹಿಂದೆ ನಡೆದು ಬಂದ ದಾರಿ ನೀಡಿದ ಸಹಕಾರವನ್ನು ಮರೆತರೆ ದೇವರು ಮೆಚ್ಚದ ಕೆಲಸವಾಗುತ್ತದೆ ಎಂದು ತಿಳಿಸಿದರು.

 ಸಂತ ಫಿಲೋಮಿನಾ ಕಾಲೇಜಿನ ಸಂಸ್ಕ್ರತ ಉಪನ್ಯಾಸಕ  ಸುರೇಶ್ ಕುಮಾರ್ ಕಡಂದೇಲು ಮಾತನಾಡಿ ಒಂದು ಮಹಿಳೆ ಸುಸಂಸ್ಕೃತರಾದರೆ ಇಡೀ ಮನೆಯೇ ಸಂತಸದಲ್ಲಿ ಇರುತ್ತದೆ. ಇಂದಿನ ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ದಾರಿ ತಪ್ಪುತ್ತಿದ್ದಾರೆ. ಮನೆಯಲ್ಲಿ ತಂದೆ ತಾಯಿಯ ಎಚ್ಚರಿಕೆಯ ಜವಾಬ್ದಾರಿ ಅತ್ಯಂತ ಪ್ರಾಮುಖ್ಯವಾಗಿದೆ.  ಒಂದೊಂದು ಸ್ತ್ರೀಯಲ್ಲಿ ಒಂದೊಂದು ದೇವಿಯ ಶಕ್ತಿ ಅಡಗಿರುತ್ತದೆ ಅದನ್ನು ಅವಳು ಅವಳ ಮೇಲೆ ನಡೆಯುವ ದೌರ್ಜನ್ಯ ಸಂದರ್ಭದಲ್ಲಿ ತೊರ್ಪಡಿಸಲೇ ಬೇಕು ಎಂದರು.

 ಬ್ಯಾಂಕ್ ಆಫ್ ಬರೋಡ ಬೆಟ್ಟಂಪಾಡಿ ಇದರ ಪ್ರಬಂಧಕ ಅಥಿತ್ ರೈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಳ್ಳಾಲ್  ಬೀಡು, ಮೊಕ್ತೇಸರ ವಿನೋದ್ ಕುಮಾರ್ ರೈ ಗುತ್ತು, ಗಾಯಕಿ ಸಿಂಚನ ಎಮ್. ಗೌಡ ಮಿತ್ತಡ್ಕ, ಪೂಜಾ ಸಮಿತಿಯ ಗೌರವಾಧ್ಯಕ್ಷ ಲಕ್ಷ್ಮಿ ನಾರಾಯಣ ರೈ  ಡೆಮ್ಮಂಗರ, ಕಾರ್ಯದರ್ಶಿ ಜಯಂತಿ ಎಮ್ ಮಿತ್ತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೂಜಾ ಸಮಿತಿಯ ಅಧ್ಯಕ್ಷೆ ಸವಿತಾ ಎಮ್ ಮದಕ  ಅಧ್ಯಕ್ಷತೆ ವಹಿಸಿದ್ದರು. ಜಲಜಾಕ್ಷಿ, ರವಿಕಲ,ಸುಚಿತ್ರ ಪ್ರಾರ್ಥಿಸಿದರು. ಸುಪ್ರಿತಾ  ಸ್ವಾಗತಿಸಿ, ಪಾರ್ವತಿ ಮಿತ್ತಡ್ಕ ವಂದಿಸಿದರು. ಪಾಣಾಜೆ ವಿವೇಕ ಶಾಲಾ ಮುಖ್ಯ ಶಿಕ್ಷಕಿ ಸುನೀತಿ. ಪಿ ಕಾರ್ಯಕ್ರಮ ನಿರೂಪಿಸಿದರು.

  ಸಭಾ ಕಾರ್ಯಕ್ರಮದ ನಂತರ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು. ಯೋಜನೆಯ ವಲಯ ಮೆಲ್ವೀಚಾರಕ ಸೋಹನ್. ಜಿ, ಜನಜಾಗೃತಿ ವೇದಿಕೆ ಸದಸ್ಯರು, ಸೇವಾ ಪ್ರತಿನಿಧಿಗಳು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಹಾಗೂ  ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ವೃತ ಪೂಜಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಮತ್ತು ಭಕ್ತಾದಿಗಳು ಪಾಲ್ಗೊಂಡರು.

LEAVE A REPLY

Please enter your comment!
Please enter your name here