ಪುತ್ತೂರು: ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಲಾರಿಯಿಂದ ಹಣ ಕಳವು ಮಾಡಿದ 2 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯಾದ ಲಾರಿಯ ಕಂಡಕ್ಟರ್ರೊಬ್ಬರನ್ನು ಪುತ್ತೂರು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಆರೋಪಿ ಶಿವಕುಮಾರ್ ಯಾನೆ ಶಿವು ಎಂಬವರು ಬಂಧಿತ ಆರೋಪಿ. ಬನ್ನೂರಿನ ಕಲಂದರ್ ಇಬ್ರಾಹಿಂ ಅವರ ಮಾಲಕತ್ವದ ಅಝರ್ ಟ್ರಾನ್ಸ್ಪೋರ್ಟ್ ಸಂಸ್ಥೆಯ ಲಾರಿಯಲ್ಲಿ ಶಿವಕುಮಾರ್ ಕಂಡಕ್ಟರ್ ಕೆಲಸ ನಿರ್ವಹಿಸುತ್ತಿದ್ದು, 2023ರ ಜು.18ರಂದು ಪುಣೆಯಿಂದ ಪುತ್ತೂರಿಗೆ ಲಾರಿಯಲ್ಲಿ ಬರುವಾಗ ಅಲ್ಲಿಂದ ಪುಣೆ ಸಂಸ್ಥೆಯಿಂದ ಪುತ್ತೂರಿನಲ್ಲಿರುವ ಮಾಲಕ ಕಲಂದರ್ ಇಬ್ರಾಹಿಂ ಅವರಿಗೆ ನೀಡಲೆಂದು ಲಾರಿ ಚಾಲಕ ಅಬ್ದುಲ್ ರವೂಫ್ ಕಬಕ ಅವರಲ್ಲಿ ರೂ. 10ಲಕ್ಷ ನೀಡಲಾಗಿತ್ತು. ನಗದನ್ನು ಅವರು ಲಾರಿಯಲ್ಲಿ ಇರಿಸಿದ್ದರು. ಲಾರಿ ಪುತ್ತೂರಿಗೆ ಬರುವ ಸಂದರ್ಭ ಲಾರಿಯಲ್ಲಿ ಕಂಡಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಶಿವಕುಮಾರ್ ಯಾನೆ ಶಿವು ಅವರು ಲಾರಿಯಲ್ಲಿಟ್ಟಿದ್ದ ನಗದನ್ನು ಕಳವು ಮಾಡಿದ್ದರು. ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆಗೆ ಸಂಬಂಧಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಶಿವಕುಮಾರ್ ಅವರ ವಿರುದ್ಧ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು. ತನಿಖೆ ಕೈಗೆತ್ತಿಕೊಂಡ ಪುತ್ತೂರು ನಗರ ಪೊಲೀಸ್ ಠಾಣೆಯ ಪೊಲೀಸರು ಉಪವಿಭಾಗದ ಡಿವೈಎಸ್ಪಿ ಅರುಣ್ ನಾಗೇಗೌಡ ಹಾಗೂ ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕ ಕಿರಣ್ ಜಾನ್ಸನ್ ಡಿಸೋಜಾ ರವರ ಮಾರ್ಗದರ್ಶನದಲ್ಲಿ, ಉಪ್ಪಿನಂಗಡಿ ಠಾಣಾ ಎಸ್.ಐ ಕೌಶಿಕ್ ರವರ ನೇತೃತ್ವದ, ಸಿಬ್ಬಂದಿಗಳಾದ ಪ್ರಶಾಂತ ರೈ, ಗಣೇಶ ಎನ್, ಶ್ರೀಶೈಲ ಎಂ.ಕೆ, ಮಹಮ್ಮದ್ ಮೌಲಾನಾ ಅವರನ್ನೊಳಗೊಂಡ ವಿಶೇಷ ತಂಡ ತಂಡವು ಆರೋಪಿಯನ್ನು ಆ.12ರಂದು ಬೆಂಗಳೂರಿನ ಅಬ್ಜಿಗೆರೆ ಎಂಬಲ್ಲಿ ಬಂಧಿಸಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ:14/2022, ಕಲಂ:394 ಐ.ಪಿ.ಸಿ. ಪ್ರಕರಣದಲ್ಲಿ ಆರೋಪಿಯಾಗಿ, ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ 3 ವರ್ಷಗಳಿಂದ ತಲೆಮರೆಸಿಕೊಂಡಿದ್ದ, ಬೆಂಗಳೂರು, ಜಗಜೀವನ್ ರಾಮ್ ನಗರ ನಿವಾಸಿ ಸಯ್ಯದ್ ಕಲೀಂ (ಕಲ್ಲು ಮಾಮು) ಎಂಬಾತನನ್ನು, ಪುತ್ತೂರು ಉಪವಿಭಾಗದ ಉಪಾಧೀಕ್ಷಕರಾದ ಅರುಣ್ ನಾಗೇಗೌಡ ರವರ ಮಾರ್ಗದರ್ಶನದಲ್ಲಿ, ಉಪ್ಪಿನಂಗಡಿ ಪೊಲೀಸ್ ವೃತ ನಿರೀಕ್ಷಕರಾದ ರವಿ ಬಿ.ಎಸ್ ಹಾಗೂ ಪೊಲೀಸ್ ಉಪನಿರೀಕ್ಷರಾದ ಕೌಶಿಕ್ ರವರ ನೇತೃತ್ವದಲ್ಲಿ, ಉಪ್ಪಿನಂಗಡಿ ಠಾಣಾ CHC -826 ಶಿವರಾಮ ರೈ ಮತ್ತು ಡಿವೈಎಸ್ಪಿ ವಿಶೇಷ ತಂಡದ ಸಿಬ್ಬಂದಿಗಳಾದ ಸಿಪಿಸಿ ಶಾಂತಕುಮಾರ್, ಸಿಪಿಸಿ ರವಿಕುಮಾರ್ , ಸಿಪಿಸಿ ರಮೇಶ್ ಅವರನ್ನು ಒಳಗೊಂಡ ತಂಡವು ದಸ್ತಗಿರಿ ಮಾಡಿದೆ. ಸಯ್ಯದ್ ಕಲೀಂ ವಿರುದ್ಧ ಬೆಂಗಳೂರು ನಗರದ ವಿವಿಧ ಠಾಣೆಗಳಲ್ಲಿ 4 ಪ್ರಕರಣಗಳು ದಾಖಲಾಗಿರುತ್ತದೆ.
ಕಡಬ ಪೊಲೀಸ್ ಠಾಣಾ ಅ ಕ್ರ: 91/2019 ಕಲಂ: 341,323,324,504,506 R/w 34 ಐಪಿಸಿ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ, ಕಳೆದ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಡಬ ರಾಮಕುಂಜ ನಿವಾಸಿ ಯೂಸೂಫ್ (32) ಎಂಬಾತನನ್ನು, ಕಡಬ ಠಾಣಾ ಪೊಲೀಸರು ಆ.12 ರಂದು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.