ಪುತ್ತೂರು: ಬೆಟ್ಟಂಪಾಡಿ ವಿದ್ಯಾಗಿರಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 8ನೇ ವರ್ಷದ ಗೋಕುಲಾಷ್ಟಮಿ ವಿಜೃಂಭಣೆಯಿಂದ ಆ.16ರಂದು ನಡೆಯಿತು.

ಗೋಕುಲಾಷ್ಟಮಿಯ ಉದ್ಘಾಟನಾ ಸಮಾರಂಭವು ಅಯ್ಯಪ್ಪ ಭಜನಾ ಮಂದಿರ ಶ್ರೀ ರಾಮನಗರದಲ್ಲಿ ನಡೆಯಿತು. ಪ್ರಗತಿಪರ ಕೃಷಿಕ ಜಗದೀಶ ಗೌಡ ಪಾರ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಅತಿಥಿಗಳಾಗಿ ವಿದ್ಯಾರಾಜ್ ಕುಮಾರ್ ಕಾಟುಕುಕ್ಕೆ, ಪ್ರತಿಮಾ ಬೋರ್ಕರ್, ಭಾರತಿ ರೈ ಕೋಟೆ ಕಾರ್ಯಕ್ರಮದ ಯಶಸ್ಸಿಗೆ ಶುಭ ಹಾರೈಸಿದರು. ಶಾಲಾ ಆಡಳಿತ ಸಮಿತಿಯ ಅಧ್ಯಕ್ಷ ರಂಗನಾಥ ರೈ ಗುತ್ತು ಹಾಗೂ ಗೋಕುಲಾಷ್ಟಮಿ ಸಮಿತಿಯ ಅಧ್ಯಕ್ಷ ಗಿರೀಶ್ ರೈ ನೀರ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯಗುರು ರಾಜೇಶ್ ಎನ್ ಸ್ವಾಗತಿಸಿದರು.

ಶ್ರೀ ಕೃಷ್ಣನ ತೊಟ್ಟಿಲಶಾಸ್ತ್ರ
ಲಕ್ಕಿ ಕೃಷ್ಣನಾಗಿ ರೇಷ್ಮಾ ಹಾಗೂ ಪ್ರಭಾಕರ ದಂಪತಿಗಳ ಪುತ್ರ ಎಲ್ಕೆಜಿ ವಿಭಾಗದ ವೈಭವ್ ಇವನು ಆಯ್ಕೆಗೊಂಡು ಅತಿಥಿಗಳು ತೊಟ್ಟಿಲಶಾಸ್ತ್ರ ನೆರವೇರಿಸಿದರು. ಮುದ್ದು ಕೃಷ್ಣನಿಗೆ ಆರತಿ ಬೆಳಗಿದರು. ತುಳಸಿ ಮಾಲಾ ಧಾರಣೆ ಮಾಡಿದರು.ಶ್ರೀ ಶಬರಿ ಮಹಿಳಾ ಭಜನಾ ಮಂಡಳಿ ರೆಂಜ ಬೆಟ್ಟಂಪಾಡಿ ಇದರ ವತಿಯಿಂದ ಭಜನಾ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಂದ ಶಂಖನಾದದೊಂದಿಗೆ ಗೀತಾ ಪಾರಾಯಣ ನಡೆಯಿತು. ನಂತರದಲ್ಲಿ ಎಲ್ಲಾ ರಾಧಾಕೃಷ್ಣ ವೇಷಧಾರಿಗಳಿಗೆ ಆರತಿ ಬೆಳಗಿ ಅರಿಶಿನ ಕುಂಕುಮ ನೀಡಿದರು.

ಅಯ್ಯಪ್ಪ ಮಂದಿರದಿಂದ ವಿದ್ಯಾಗಿರಿಯತ್ತ ಭವ್ಯ ಮೆರವಣಿಗೆ
ಅತಿಥಿ ಪ್ರತಿಮಾ ಭೋರ್ಕರ್ ತೆಂಗಿನ ಕಾಯಿ ಹೊಡೆಯುವುದರೊಂದಿಗೆ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ಸುಮಾರು 500 ರಾಧಾಕೃಷ್ಣ ವೇಷಧಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು. ನೂರಾರು ಪೋಷಕರು ಮೆರವಣಿಗೆಯ ಮೆರುಗು ಹೆಚ್ಚಿಸಿದರು. ಪಕಡಿ ವೇಷ, ಬೊಂಬೆಕುಣಿತಗಳು ಮೆರವಣಿಗೆಯ ಸೌಂದರ್ಯವನ್ನು ನೂರ್ಮಡಿಗೊಳಿಸಿತ್ತು. ಶ್ರೀ ಶಬರಿ ಸಿಂಗಾರಿ ಮೇಳ ದೊಂದಿಗೆ ಶ್ರೀ ಕೃಷ್ಣನ ರಥ ಮುಂದೆ ಸಾಗುತ್ತಿತ್ತು. ಮೆರವಣಿಗೆಯ ಮಧ್ಯದಲ್ಲಿ ಪೋಷಕರು ನೀಡಿದ ಸಿಹಿ ತಿಂಡಿ ಹಾಗೂ ಪಾನೀಯಗಳು ಹೊಟ್ಟೆ ತಣ್ಣಗಾಗಿಸಿತು. ಮೆರವಣಿಗೆಯ ಪೂರ್ಣ ಹಂತದಲ್ಲಿ ರಾಧಾಕೃಷ್ಣವೇಷಧಾರಿಗಳ ನೃತ್ಯ ಕಣ್ಮನ ಸೆಳೆಯಿತು.

ಆಟೋಟಗಳು
ಪೋಷಕರಿಗೆ ಏರ್ಪಡಿಸಲಾದ ಆಟೋಗಳ ಉದ್ಘಾಟನೆಯನ್ನು ಅತಿಥಿಗಳಾದ ಶ್ರೀಮತಿ ಭಾರತಿ ಕೋಟೆಯವರು ಮಡಕೆ ಹೊಡೆಯುವುದರ ಮೂಲಕ ಚಾಲನೆ ನೀಡಿದರು. ನಂತರದಲ್ಲಿ ಭಕ್ತಿಗೀತೆ, ಲಕ್ಕಿ ಗೇಮ್, ಆಶುನಟನೆ, ಮಡಕೆ ಹೊಡೆಯುವುದು, ಹಗ್ಗ ಜಗ್ಗಾಟ ಮೊದಲಾದ ಸ್ಪರ್ಧೆಗಳು ನಡೆಯಿತು.


ಗೋಕುಲಾಷ್ಟಮಿಯ ಸಮಾರೋಪ ಬಹುಮಾನ ವಿತರಣೆ
ಸಮರೋಪ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಗೋಕುಲಾಷ್ಟಮಿ ಸಮಿತಿಯ ಅಧ್ಯಕ್ಷ ಗಿರೀಶ್ ರೈ ನೀರ್ಪಾಡಿ ವಹಿಸಿ ಪ್ರಿಯದರ್ಶಿನೀ ಗೋಕುಲಾಷ್ಟಮಿಯ ಯಶಸ್ವಿಗೆ ಕಾರಣರಾದ ಶಿಕ್ಷಕರು ದಾನಿಗಳು ಮತ್ತು ಪೋಷಕರ ಶ್ರಮವನ್ನು ಶ್ಲಾಘಿಸಿದರು. ಮುಖ್ಯ ಅತಿಥಿಗಳಾಗಿ ಪ್ರಗತಿಪರ ಕೃಷಿಕ ಕಿಶೋರ್ ರೈ ಕೋರ್ಮಂಡ, ಸಿಎ ಬ್ಯಾಂಕ್ ಇರ್ದೆ ಉಪಾಧ್ಯಕ್ಷ ಹರೀಶ್ ಗೌಡ ಗುಮ್ಮಟಗದ್ದೆ , ಲಾಸ್ಯ ಭರತನಾಟ್ಯ ಕಲಾ ಶಾಲೆ ಇರ್ದೆ ಇದರ ವಿದುಷಿ ಗೌತಮಿ ಅನುದೀಪ್, ಪ್ರಗತಿಪರ ಕೃಷಿಕ ಜಗನ್ನಾಥ ರೈ ಪಡ್ಡಂಬೈಲು ,ಓಂ ಶಿವ ಡ್ರೈವಿಂಗ್ ಸ್ಕೂಲ್ ಇದರ ಮುಖ್ಯಸ್ಥ ಶಿವಪ್ರಸಾದ್ ಮೇರ್ವೆ,S.V service ಪುತ್ತೂರು ಇದರ ದಿನೇಶ್ ಪಂಬೇಜಾಲು,SDP ಔಷಧಾಲಯ ಆರ್ಲಪದವು, ಇಲ್ಲಿನ ಅನುಷಾ ಸುನಿಲ್, ಪೋಷಕರಾದ ಶಿಲ್ಪ ಗೋವಿಂದಮೂಲೆ, ಆಶಾ ಮೇಗಿನಮನೆ, ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ರಾಜೇಶ್ ಎನ್ ಸ್ವಾಗತಿಸಿ, ಸಂಧ್ಯಾ ಪಕಳ ವಂದಿಸಿದರು. ಭವ್ಯ ಹಾಗೂ ಭಾಗ್ಯಶ್ರೀ ರೈ ಕಾರ್ಯಕ್ರಮ ನಿರೂಪಿಸಿದರು.
