ಕುಂಬ್ರ: ಅಪಘಾತಕ್ಕೆ ಕಾರಣವಾಗುತ್ತಿರುವ ಅವೈಜ್ಞಾನಿಕ ವಾಹನ ತಿರುವು – ಬಂದ್ ಮಾಡಿ ಎಂದು ಮನವಿ ಮಾಡಿಕೊಂಡರೂ ನೋ ಯ್ಯೂಸ್….!?

0

ಪುತ್ತೂರು: ಯಾವುದೇ ಜಂಕ್ಷನ್‌ನಲ್ಲಿ ವಾಹನಗಳು ಜಂಕ್ಷನ್‌ಗೆ ಸುತ್ತುಬಳಸಿ ತಿರುವು ಪಡೆದುಕೊಳ್ಳಬೇಕು ಎಂಬ ನಿಯಮವಿದೆ. ಈ ರೀತಿ ಸುತ್ತು ಬಳಸದೆ ಸಿಕ್ಕಸಿಕ್ಕಲ್ಲಿ ತಿರುವು ಪಡೆದುಕೊಂಡರೆ ಅಪಘಾತಗಳು ಸಂಭವಿಸುತ್ತವೆ. ಈ ರೀತಿಯ ಒಂದು ಅಪಘಾತ ವಲಯ ಕುಂಬ್ರ ಜಂಕ್ಷನ್‌ನಲ್ಲಿದೆ. ಸುಳ್ಯದಿಂದ ಬರುವ ವಾಹನಗಳು ಹಾಗೇ ಬೆಳ್ಳಾರೆ ಕಡೆಯಿಂದ ಬರುವ ವಾಹನಗಳು ಕುಂಬ್ರ ಕಟ್ಟೆಗೆ ಸುತ್ತು ಬಳಸಿ ತಿರುವು ಪಡೆದುಕೊಳ್ಳದೆ ನೇರವಾಗಿ ರಿಕ್ಷಾ ಪಾರ್ಕಿಂಗ್‌ನ ಮೂಲಕ ಸದಾಶಿವರವರ ಹೊಸಮ್ಮ ಹೂವಿನ ಅಂಗಡಿ ಪಕ್ಕದಲ್ಲಿ ಎಂಟ್ರಿ ಪಡೆದುಕೊಳ್ಳುತ್ತವೆ. ಇದರಿಂದ ಇಲ್ಲಿ ಪ್ರತಿದಿನ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಈ ಭಾಗವನ್ನು ತಡೆ ಕಂಬಗಳ ಹಾಕಿ ಬಂದ್ ಮಾಡಿ ಎಂದು 2023ರ ಫೆ.15ರಂದು ನಡೆದ ಒಳಮೊಗ್ರು ಗ್ರಾಮ ಪಂಚಾಯತ್‌ನ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಧ್ವನಿ ಎತ್ತಿದ್ದರು ಆದರೆ ಇದುವರೆಗೆ ಯಾವುದೇ ಪ್ರಯೋಜನವಾಗದಿರುವುದು ಮಾತ್ರ ದುರಂತ.


ಅವೈಜ್ಷಾನಿಕ ವಾಹನ ತಿರುವು
ಕುಂಬ್ರ ಸುಳ್ಯ ರಸ್ತೆಯಲ್ಲಿ ಸುಳ್ಯ ಕಡೆಯಿಂದ ಬರುವ ವಾಹನ ಚಾಲಕರು ಬೆಳ್ಳಾರೆ ರಸ್ತೆಗೆ ಎಂಟ್ರಿ ತೆಗೆದುಕೊಳ್ಳುವಾಗ ಕುಂಬ್ರ ಕಟ್ಟೆಗೆ ಸರ್ಕಲ್ ಹೊಡೆದು ತಿರುವು ಪಡೆದುಕೊಳ್ಳದೇ ರಿಕ್ಷಾ ಪಾಕಿಂಗ್ ಜಾಗದ ಮೂಲಕ ಎಂಟ್ರಿ ಪಡೆದುಕೊಳ್ಳುತ್ತಿರುವುದರಿಂದ ಮತ್ತು ಬೆಳ್ಳಾರೆ ರಸ್ತೆಯಿಂದ ಬರುವ ವಾಹನ ಚಾಲಕರು ಕೂಡ ಕುಂಬ್ರ ಕಟ್ಟೆಗೆ ಸರ್ಕಲ್ ಹೊಡೆಯದೆ ರಿಕ್ಷಾ ಪಾರ್ಕಿಂಗ್ ಜಾಗದ ಮೂಲಕ ಸುಳ್ಯ ರಸ್ತೆಗೆ ತಿರುವು ಪಡೆದುಕೊಳ್ಳುತ್ತಿರುವುದು ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಲೇ ಇರುತ್ತದೆ ಎಂದು ಗ್ರಾಮಸ್ಥರು ಸಭೆಯಲ್ಲಿ ತಿಳಿಸಿದ್ದರು.


ಒಂದೇ ದಿನ 3 ಕ್ಕೂ ಹೆಚ್ಚು ಅಪಘಾತ
ಈ ಅವೈಜ್ಞಾನಿಕ ತಿರುವಿನಿಂದಾಗಿ ಒಂದೇ ದಿನ 3 ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದೂ ಇದೆ. ಆದ್ದರಿಂದ ಸುಳ್ಯ ರಸ್ತೆಯ ಭಾಗದಿಂದ ಯಾವುದೇ ವಾಹನಗಳು ಬೆಳ್ಳಾರೆ ರಸ್ತೆಗೆ ರಿಕ್ಷಾ ಪಾರ್ಕಿಂಗ್ ಜಾಗದ ಮೂಲಕ ಎಂಟ್ರಿ ತೆಗೆದುಕೊಳ್ಳದಂತೆ ತಡೆ ಕಂಬಗಳನ್ನು ಹಾಕುವ ಮೂಲಕ ಪ್ರವೇಶ ಬಂದ್ ಮಾಡಬೇಕು ಎಂದು ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಂದಿನ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್.ರವರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ರಿಕ್ಷಾ ಪಾರ್ಕಿಂಗ್‌ನ ಒಂದು ಬದಿಯಿಂದ ಸಂಪೂರ್ಣ ಬಂದ್ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಈ ಬಗ್ಗೆ ಪೊಲೀಸ್ ಇಲಾಖೆಗೂ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದರು.

ತಡೆ ಕಂಬ ಹಾಕೋರ‍್ಯಾರು..?
ಅವೈಜ್ಞಾನಿಕ ತಿರುವಿನಿಂದ ಅಪಘಾತಗಳು ಸಂಭವಿಸುವುದನ್ನು ತಡೆಯಬೇಕಾದರೆ ತಡೆ ಕಂಬಗಳನ್ನು ಹಾಕಲೇ ಬೇಕಾಗಿದೆ.ಆದರೆ ಈ ತಡೆ ಕಂಬಗಳನ್ನು ಯಾರು ಹಾಕುವವರು ಎಂಬುದು ಪ್ರಶ್ನೆಯಾಗಿದೆ. ಅಂದಿನ ಪಿಡಿಓ ಅವಿನಾಶ್ ಬಿ.ಆರ್.ರವರು ಗ್ರಾಮಸಭೆಯ ಪ್ರಸ್ತಾಪವನ್ನು ಪೊಲೀಸ್ ಇಲಾಖೆಗೂ ಕಳುಹಿಸಿಕೊಟ್ಟಿದ್ದರು ಅಲ್ಲದೆ ಮೌಖಿಕವಾಗಿಯೂ ತಿಳಿಸಿದ್ದರು. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರ, ಪೊಲೀಸ್ ಇಲಾಖೆ ಗಮನಹರಿಸಬೇಕಾಗಿದೆ.

‘ ಇದೊಂದು ಅವೈಜ್ಞಾನಿಕ ತಿರುವು ಆಗಿದ್ದು ಇಲ್ಲಿ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಲೇ ಇರುತ್ತದೆ. ಈ ಬಗ್ಗೆ ಒಳಮೊಗ್ರು ಗ್ರಾಮಸಭೆಯಲ್ಲೂ ಪ್ರಸ್ತಾಪ ಮಾಡಿದ್ದೆ ಆದರೆ ಇದುವರೆಗೆ ಯಾವುದೇ ಪ್ರಯೋನ ಆಗಿಲ್ಲ. ಆದ್ದರಿಂದ ಈ ಭಾಗಕ್ಕೆ ತಡೆ ಕಂಬಗಳನ್ನು ಹಾಕುವ ಮೂಲಕ ಅಪಘಾತಗಳನ್ನು ತಪ್ಪಿಸಬೇಕಾಗಿದೆ.’
ಮಹಮ್ಮದ್ ಬೊಳ್ಳಾಡಿ, ಸಾಮಾಜಿಕ ಕಾರ್ಯಕರ್ತರು

LEAVE A REPLY

Please enter your comment!
Please enter your name here