ಪುತ್ತೂರು: ಕರ್ನಾಟಕ ಸಂಘ ಕತಾರ್ ವತಿಯಿಂದ ಬೆಂಗಳೂರಿನ ಬಸವೇಶ್ವರ ನಗರದ ಕರ್ನಾಟಕ ಎಂಜಿನಿಯರ್ಸ್ ಅಕಾಡೆಮಿಯಲ್ಲಿ “ಸಂಸ್ಥಾಪಕರಿಗೆ, ರಜತಪಥದ ಹರಿಕಾರರಿಗೆ ಅಭಿವಂದನಾ” ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಆ ಮೂಲಕ ತನ್ನ ಬೆಳ್ಳಿಹಬ್ಬದ ಸಂಭ್ರಮವನ್ನು ತವರು ನೆಲಕ್ಕೆ ತರುವುದರ ಮೂಲಕ ರಜತ ವರ್ಷಕ್ಕೆ ಇನ್ನಷ್ಟು ಮೆರುಗನ್ನು ನೀಡಿತು.
ಈ ಸಂದರ್ಭದಲ್ಲಿ ‘25 ವರ್ಷ-25 ನೊಂದ ಮುಖಗಳಲ್ಲಿ ಹರ್ಷ’ ಎಂಬ ಯೋಜನೆ ಮೂಲಕ ಸದಸ್ಯರು ಮತ್ತು ಹಿತೈಷಿಗಳಿಂದ ಸಂಗ್ರಹಿಸಿದ ನಿಧಿಯ ಮೂಲಕ, ರಾಜ್ಯದ ಬೇರೆ ಬೇರೆ ಕಡೆ ಅನಾಥರಿಗೆ, ವಿಶೇಷ ಚೇತನರಿಗೆ, ಏಡ್ಸ್ ಕ್ಯಾನ್ಸರಿನಂಥಹ ಭೀಕರ ಕಾಯಿಲೆಗಳಿಂದ ಬಳಲುವರಿಗೆ ಆಶ್ರಮಗಳನ್ನು ಸ್ಥಾಪಿಸಿ ನಡೆಸುವ 12 ನಿಸ್ವಾರ್ಥ ಸಮಾಜ ಸೇವಕರನ್ನು ಬಿರುದಿನೊಂದಿಗೆ ಗೌರವ ಧನವನ್ನು ನೀಡಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದ ಪದ್ಮಶ್ರೀ ಕೆ ಸ್ ರಾಜಣ್ಣ ಅವರು ‘ಅದಮ್ಯ ದಿವ್ಯ ಚೇತನ’ ಬಿರುದಿನೊಂದಿಗೆ ಈ ಗೌರವಕ್ಕೆ ಪಾತ್ರರಾದರು. ಜೊತೆಗೆ ರಾಜ್ಯದ ವಿವಿಧ ಭಾಗದಲ್ಲಿ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಸಹಾಯ ಹಸ್ತವನ್ನು ತಲುಪಿಸಲಾಯಿತು. ಹಲವು ವರ್ಷಗಳಿಂದ ಪುತ್ತೂರಿನಲ್ಲಿ ಬೌದ್ಧಿಕ ದಿವ್ಯಾಂಗರಿಗೆ ಪ್ರಜ್ಞಾಶ್ರಮವನ್ನು ನಡೆಸುತ್ತಿರುವ ಅಣ್ಣಪ್ಪರವರನ್ನು ‘ಅನಾಥ ಬಂಧು’ ಬಿರುದು ನೀಡಿ ಗೌರವಿಸಿ ಸನ್ಮಾನಿಸಲಾಯಿತು . ಕರ್ನಾಟಕ ಸಂಘ ಕತಾರ್ ಅಧ್ಯಕ್ಷ ಮೂಡಂಬೈಲ್ ರವಿ ಶೆಟ್ಟಿ, ಸಂಘದ ಮಾಜಿ ಸದಸ್ಯರುಗಳಾದ ಸದಾನಂದ್ ಪುತ್ತೂರು ಹಾಗೂ ಅರುಣ್ ಉಪಸ್ಥಿತರಿದ್ದರು.