ಸಂಘ ಸಂಸ್ಥೆಗಳ ಸಹಕಾರದಿಂದ ಯಶಸ್ಸು-ರಫೀಕ್ ದರ್ಬೆ
ಪುತ್ತೂರು: ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರದ ಯಶಸ್ವಿಗೆ ಪುತ್ತೂರಿನ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಸಾಧ್ಯವಾಗಿದೆ, ಸರಕಾರಿ ಶಾಲೆಗಳು ಉಳಿಯಬೇಕು ಮತ್ತು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬುವುದು ನಮ್ಮ ಕೇಂದ್ರದ ಗುರಿಯಾಗಿದೆ, ಹಾಗಾಗಿ ಪುತ್ತೂರಿನ ಬಹಳಷ್ಟು ಸಂಘ ಸಂಸ್ಥೆಗಳು ನಮ್ಮನ್ನು ಪ್ರೋತ್ಸಾಹಿಸಿ ನಮ್ಮ ಎಲ್ಲಾ ಕಾರ್ಯಕ್ರಮಗಳಿಗೆ ಸೇರಿ ಕೊಳ್ಳುವುದರ ಮೂಲಕ ಸಹಕಾರ ನೀಡುತ್ತಿದ್ದಾರೆ, ಇದು ಸಮಾಜದ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಮಹಮ್ಮದ್ ರಫೀಕ್ ಹೇಳಿದರು.
ಆ.23ರಂದು ಪುತ್ತೂರು ಲಯನ್ಸ್ ಸಭಾಂಗಣದಲ್ಲಿ ನಡೆದ ಕೇಂದ್ರದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹಾಸಭೆಯ ವೀಕ್ಷಕರಾಗಿ ಶಿಕ್ಷಣ ಸಂಪನ್ಮೂಲಗಳ ಕೇಂದ್ರಗಳ ಒಕ್ಕೂಟ ದ.ಕ ಜಿಲ್ಲೆ ಇದರ ಉಪಾಧ್ಯಕ್ಷ ಹಸೈನಾರ್ ಜಯನಗರ ಭಾಗವಹಿಸಿ ಸಭೆಯನ್ನು ನಡೆಸಿಕೊಟ್ಟರು. ಸಂಪನ್ಮೂಲ ವ್ಯಕ್ತಿ ಕಸ್ತೂರಿ ಬೊಳುವಾರುರವರು ಕೇಂದ್ರದ ಬೈಲಾ ಬಗ್ಗೆ ಮಾಹಿತಿ ನೀಡಿದರು.
ಪ್ರಧಾನ ಕಾರ್ಯದರ್ಶಿ ಸುಮಂಗಲಾ ಶೆಣೈ ರವರು ಕಳೆದ ಸಾಲಿನ ವರದಿ ವಾಚಿಸಿದರು. ಕೋಶಾಧಿಕಾರಿ ವತ್ಸಲಾ ನಾಯಕ್ ಲೆಕ್ಕಪತ್ರ ಮಂಡಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ರೋಹಿಣಿ ರಾಘವ, ಜಿಲ್ಲಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಯನಾ ರೈ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷೆ ಹರಿಣಾಕ್ಷಿ ಜೆ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರಫೀಕ್ ಸ್ವಾಗತಿಸಿದರು. ಕಾರ್ಯದರ್ಶಿ ಸುಮಂಗಲಾ ಶೆಣೈ ವಂದಿಸಿದರು. ಸಭೆಯಲ್ಲಿ ಸದಸ್ಯರುಗಳು ಭಾಗವಹಿಸಿದ್ದರು. ನೂತನ ಸದಸ್ಯರುಗಳನ್ನು ಸಮಿತಿಗೆ ಸೇರ್ಪಡೆಗೊಳಿಸಲಾಯಿತು.