-ಕಡಿಮೆ ಶುಲ್ಕದಲ್ಲಿ ಚಿಕಿತ್ಸೆ, ಫಲಾನುಭವಿಗಳಿಗೆ ಬೆನಿಫಿಟ್-ಡಾ.ಜ್ಯೋತಿ ಆರ್.ಪ್ರಸಾದ್
-ಉತ್ತಮ ಆರೋಗ್ಯ ಸೆಂಟರ್ ಆಗಿ ಬೆಳೆಯಲಿ-ಡಾ.ಮೋಕ್ಷ ನಾಯಕ್
-ಕುಟುಂಬದ ಹಿರಿಯರ, ಶಿಕ್ಷಕರ ನಡೆ-ನುಡಿ, ನಡತೆ ರೋಲ್ ಮಾಡೆಲ್ ಆಗಲಿ-ಬಾಲಕೃಷ್ಣ ಪೈ
-ಒಗ್ಗೂಡುವಿಕೆಯ ಉದ್ಧೇಶ ಅದು ಜನರ ಸೇವೆ-ಡಾ.ಸುರೇಶ್ ಪುತ್ತೂರಾಯ
-ಡೆಂಟಲ್ ಕ್ಲಿನಿಕ್ ರೋಟರಿ ಪುತ್ತೂರಿನ ಕಿರೀಟಕ್ಕೆ ಮತ್ತೊಂದು ಗರಿ-ಉಮಾನಾಥ್ ಪಿ.ಬಿ
ಪುತ್ತೂರು:ಜಿಲ್ಲೆಯ ಹಿರಿಯ ಕ್ಲಬ್ ಎನಿಸಿದ ರೋಟರಿ ಕ್ಲಬ್ ಪುತ್ತೂರು, ಸುಳ್ಯ ಕುರುಂಜಿಭಾಗ್ ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಪುತ್ತೂರು ಪಾಲಿಕ್ಲಿನಿಕ್ ಇವುಗಳ ಸಹಭಾಗಿತ್ವದಲ್ಲಿ ಸುಳ್ಯ ಕುರುಂಜಿಭಾಗ್ ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಇದರ ನಿರ್ವಹಣೆಯೊಂದಿಗೆ ಪುತ್ತೂರು ರೋಟರಿ ಮಲ್ಟಿ ಸ್ಪೆಷಾಲಿಟಿ ಸ್ಯಾಟಲೈಟ್ ಡೆಂಟಲ್ ಕ್ಲಿನಿಕ್ ಆ.25 ರಂದು ಬೊಳ್ವಾರು ಮಹಾವೀರ ವೆಂಚರ್ನ ಪುತ್ತೂರು ಪಾಲಿಕ್ಲಿನಿಕ್ ಆವರಣದಲ್ಲಿ ಶುಭಾರಂಭಗೊಂಡಿತು.
ಕಡಿಮೆ ಶುಲ್ಕದಲ್ಲಿ ಚಿಕಿತ್ಸೆ, ಫಲಾನುಭವಿಗಳಿಗೆ ಬೆನಿಫಿಟ್-ಡಾ.ಜ್ಯೋತಿ ಆರ್.ಪ್ರಸಾದ್:
ಸುಳ್ಯ ಕುರುಜಿಭಾಗ್ ಎ.ಎಲ್.ಒ.ಇ ಸಮಿತಿ ’ಬಿ’ ಇದರ ಕಾರ್ಯದರ್ಶಿ ಡಾ.ಜ್ಯೋತಿ ಆರ್.ಪ್ರಸಾದ್ರವರು ಸಭಾ ಕಾರ್ಯಕ್ರಮದ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಸಮಾಜದ ಅಭಿವೃದ್ಧಿ ಎಂಬ ದೃಷ್ಟಿಕೋನದಿಂದ ಡಾ.ಅಶೋಕ್ ಪಡಿವಾಳ್ ಫ್ಯಾಮಿಲಿ ಡಯಾಲಿಸಿಸ್ ಸೆಂಟರ್ ಇದೀಗ ಡೆಂಟಲ್ ಕ್ಲಿನಿಕ್ ತೆರೆಯಲು ಅವಕಾಶ ನೀಡಿದ್ದಕ್ಕೆ ಕೃತಜ್ಞತೆಗಳು. ಈ ಕ್ಲಿನಿಕ್ ಫಲಾನುಭವಿಗಳಿಗೆ ಕಡಿಮೆ ಚಿಕಿತ್ಸಾ ಶುಲ್ಕದಲ್ಲಿ ಚಿಕಿತ್ಸೆ ನೀಡಲಿದ್ದು ಇದು ಇಲ್ಲಿನ ಫಲಾನುಭವಿಗಳಿಗೆ ಬೆನಿಫಿಟ್ ಎನಿಸಲಿದೆ. ಸಮಾಜ ಸೇವೆಯಲ್ಲಿ ರೊಟೇರಿಯನ್ಸ್ಗಳು ಮುಂದಿದ್ದು ಸಮಾಜದಲ್ಲಿ ಹಲವಾರು ವಿವಿಧ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡು ಸಮಾಜದ ಹೆಲ್ತ್ಕೇರ್ ಎನಿಸಿದೆ ಎಂದರು.
ಉತ್ತಮ ಆರೋಗ್ಯ ಸೆಂಟರ್ ಆಗಿ ಬೆಳೆಯಲಿ-ಡಾ.ಮೋಕ್ಷ ನಾಯಕ್:
ಬೊಳ್ವಾರು ಮಹಾವೀರ ಮೆಡಿಕಲ್ ಸೆಂಟರ್ ಮುಖ್ಯಸ್ಥ ಡಾ.ಅಶೋಕ್ ಪಡಿವಾಳ್ರವರು ನೂತನ ಡೆಂಟಲ್ ಕ್ಲಿನಿಕ್ನ ರಿಸೆಪ್ಸನ್ ಕೌಂಟರ್ ಅನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸುಳ್ಯ ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಾಂಶುಪಾಲೆ ಡಾ.ಮೋಕ್ಷ ನಾಯಕ್ರವರು ನೂತನ ಚಿಕಿತ್ಸಾಲಯವನ್ನು ಉದ್ಘಾಟಿಸಿ ಮಾತನಾಡಿ, ರೋಟರಿ ಡೆಂಟಲ್ ಕ್ಲಿನಿಕ್ ಸ್ಥಾಪನೆ ಮಾಡಿದಂತಹ ಈ ಮೂರೂ ಸಂಸ್ಥೆಗಳು ಸಮಾಜಕ್ಕೋಸ್ಕರ ದುಡಿಯುತ್ತದೆ. ಕುರುಂಜಿ ವೆಂಕಟ್ರಮಣ ಗೌಡರವರ ಕನಸನ್ನು ನನಸು ಮಾಡುವತ್ತ ಅವರ ಪುತ್ರ ಡಾ.ರೇಣುಕಾ ಪ್ರಸಾದ್ರವರು ಶಿಕ್ಷಣದ ಅಭಿವೃದ್ಧಿಯ ಜೊತೆಗೆ ಸಮಾಜದ ಉನ್ನತಿಗೋಸ್ಕರ ದುಡಿಯುತ್ತಾ ಸಮಾಜದಲ್ಲಿ ಆರೋಗ್ಯಕರ ಜೀವನಕ್ಕೆ ನಾಂದಿ ಹಾಡಿದ್ದಾರೆ. ಈ ಡೆಂಟಲ್ ಕ್ಲಿನಿಕ್ನಲ್ಲಿ ಸ್ಪೆಷಾಲಿಟಿ ವೈದ್ಯರುಗಳು ಇದ್ದು ವಿದ್ಯಾರ್ಥಿಗಳಿಗೆ ಇದು ಪ್ರಯೋಜನಕಾರಿ ಎನಿಸಲಿದ್ದು ಜೊತೆಗೆ ಸಾರ್ವಜನಿಕರು ಕೂಡ ಇಲ್ಲಿನ ತಜ್ಞ ವೈದ್ಯರುಗಳಿಂದ ಸೂಕ್ತ ಮಾರ್ಗದರ್ಶನ ಪಡೆದು ಉತ್ತಮ ಆರೋಗ್ಯ ಸೆಂಟರ್ ಆಗಿ ಬೆಳೆಯಲಿ ಎಂದರು.

ಕುಟುಂಬದ ಹಿರಿಯರ, ಶಿಕ್ಷಕರ ನಡೆ-ನುಡಿ, ನಡತೆ ರೋಲ್ ಮಾಡೆಲ್ ಆಗಲಿ-ಬಾಲಕೃಷ್ಣ ಪೈ:
ರೋಟರಿ ಅಸಿಸ್ಟೆಂಟ್ ಗವರ್ನರ್ ಬಾಲಕೃಷ್ಣ ಪೈ ಮಾತನಾಡಿ, ರೋಟರಿ ಸಂಸ್ಥೆಯು ಶಿಸ್ತಿಗೆ ಹಾಗೂ ಸಮಯಕ್ಕೆ ಬಹಳ ಪ್ರಾಧಾನ್ಯತೆ ನೀಡುತ್ತಿದೆ ಎಂಬುದಕ್ಕೆ ರೋಟರಿ ಪುತ್ತೂರಿನ ಒಂದೊಂದು ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಿದೆ. ನೇತ್ರ ಚಿಕಿತ್ಸೆ, ನೇತ್ರದಾನ, ಬ್ಲಡ್ಬ್ಯಾಂಕ್, ಡಯಾಲಿಸಿಸ್ ಸೆಂಟರ್ ಇದೀಗ ಡೆಂಟಲ್ ಕ್ಲಿನಿಕ್ ಸಮಾಜಕ್ಕೆ ಮಾದರಿಯಾಗಿದೆ. ನಾವು ಚಿತ್ರನಟ/ನಟಿಯರನ್ನು ರೋಲ್ ಮಾಡೆಲ್ ಆಗಿ ತೆಗೆದುಕೊಳ್ಳುವ ಬದಲು ನಮ್ಮ ಕುಟುಂಬದಲ್ಲಿನ ಅಥವಾ ಶಿಕ್ಷಣ ನೀಡುವ ಗುರುಗಳ ನಡೆ-ನುಡಿ, ನಡತೆಯನ್ನು ನೋಡಿಕೊಂಡು ಅವರನ್ನು ನಾವು ರೋಲ್ ಮಾಡೆಲ್ ಆಗಿ ತೆಗೆದುಕೊಳ್ಳೋಣ ಎಂದರು.
ಒಗ್ಗೂಡುವಿಕೆಯ ಉದ್ಧೇಶ ಅದು ಜನರ ಸೇವೆ-ಡಾ.ಸುರೇಶ್ ಪುತ್ತೂರಾಯ:
ಮುಖ್ಯ ಅತಿಥಿ ಮಹಾವೀರ ಮೆಡಿಕಲ್ ಸೆಂಟರ್ ವೈದ್ಯ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಮೂರು ಸಂಸ್ಥೆಯ ಒಗ್ಗೂಡುವಿಕೆಯ ಉದ್ದೇಶ ಅದು ಜನರ ಸೇವೆಯಾಗಿದ್ದು ಇದು ಖಂಡಿತಾ ಯಶಸ್ವಿಯಾಗಲಿದೆ. ರೋಟರಿ ಪ್ರಾಯೋಜಿತ ಡಯಾಲಿಸಿಸ್ ಸೆಂಟರ್ ಮಹಾವೀರ ಮೆಡಿಕಲ್ ಸೆಂಟರ್ನಲ್ಲಿ ಈಗಾಗಲೇ ಕಾರ್ಯಾಚರಿಸುತ್ತಿದ್ದು ಇದೀಗ ಡೆಂಟಲ್ ಕ್ಲಿನಿಕ್ ಹೆಚ್ಚುವರಿಯಾಗಿ ಈ ಮಹಾವೀರ ಮೆಡಿಕಲ್ ಸೆಂಟರ್ನಲ್ಲಿ ಸೇವೆಗೈಯಲಿದ್ದು ಈ ಸೇವೆಯು ಪುತ್ತೂರಿನ ಆಸುಪಾಸಿನ ಜನತೆಗೆ ಉತ್ತಮ ಚಿಕಿತ್ಸೆ ನೀಡುವಂತಾಗಲಿ ಎಂದರು.
ಡೆಂಟಲ್ ಕ್ಲಿನಿಕ್ ರೋಟರಿ ಪುತ್ತೂರಿನ ಕಿರೀಟಕ್ಕೆ ಮತ್ತೊಂದು ಗರಿ-ಉಮಾನಾಥ್ ಪಿ.ಬಿ:
ರೋಟರಿ ವಲಯ ಸೇನಾನಿ ಉಮಾನಾಥ್ ಪಿ.ಬಿ ಮಾತನಾಡಿ, ಈಗಾಗಲೇ ಬ್ಲಡ್ಬ್ಯಾಂಕ್, ಡಯಾಲಿಸಿಸ್ ಸೆಂಟರ್, ಕಣ್ಣಿನ ಆಸ್ಪತ್ರೆ ಪುತ್ತೂರಿನಲ್ಲಿ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದ್ದು ಇದೀಗ ರೋಟರಿ ಡೆಂಟಲ್ ಕ್ಲಿನಿಕ್ ರೋಟರಿ ಪುತ್ತೂರಿನ ಕಿರೀಟಕ್ಕೆ ಮತ್ತೊಂದು ಗರಿ ಪೋಣಿಸಿದೆ. ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು ಆದರೆ ನಾನು ಕೊಟ್ಟದ್ದು ತನಗೇ ಗೊತ್ತಾಗಬಾರದು ಎಂಬ ವ್ಯಕ್ತಿತ್ವ ಡಾ.ಅಶೋಕ್ ಪಡಿವಾಳ್ರವರದ್ದು. ಅವರ ನಿಸ್ವಾರ್ಥ ಸೇವೆಯು ಪುತ್ತೂರಿನ ಜನತೆಯ ಭಾಗ್ಯವಾಗಿದೆ ಎಂದರು.
ರೋಟರಿ ಕ್ಲಬ್ ಪುತ್ತೂರು ಕಾರ್ಯದರ್ಶಿ ಪ್ರೊ|ಸುಬ್ಬಪ್ಪ ಕೈಕಂಬ, ಸುಳ್ಯ ಕುರುಂಜಿಭಾಗ್ ಎ.ಎಲ್.ಒ.ಇ ಸಮಿತಿ “ಬಿ’ ನಿರ್ದೇಶಕಿ ಡಾ.ಅಭೀಜ್ಞಾ ಕೆ.ಆರ್ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಪುತ್ತೂರು ಉಪಾಧ್ಯಕ್ಷ ಪ್ರೊ|ದತ್ತಾತ್ರೇಯ ರಾವ್ ಪ್ರಾರ್ಥಿಸಿದರು. ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ. ಸ್ವಾಗತಿಸಿ, ಪುತ್ತೂರು ಪಾಲಿಕ್ಲಿನಿಕ್ ಮುಖಸ್ಥ ಅಜಯ್ ಪಡಿವಾಳ್ ವಂದಿಸಿದರು. ಸುದ್ದಿ ನಿರೂಪಕಿ ಹೇಮಾ ಜಯರಾಂ ಕಾರ್ಯಕ್ರಮ ನಿರೂಪಿಸಿದರು.

ರೋಟರಿ ಮುಕುಟಕ್ಕೆ ಮತ್ತೊಂದು ಗರಿ..
61 ವರ್ಷಗಳ ಇತಿಹಾಸವಿರುವ ರೋಟರಿ ಪುತ್ತೂರು ಈಗಾಗಲೇ ಬ್ಲಡ್ಬ್ಯಾಂಕ್, ಡಯಾಲಿಸಿಸ್ ಕೇಂದ್ರ, ಕಣ್ಣಿನ ಆಸ್ಪತ್ರೆ ಈಗಾಗಲೇ ಲೋಕಾರ್ಪಣೆಗೊಂಡು ಯಶಸ್ವಿಯಾಗಿದ್ದು ಇದೀಗ ನಾಲ್ಕನೇ ಶಾಶ್ವತ ಪ್ರಾಜೆಕ್ಟ್ ಎನಿಸಿದ ರೋಟರಿ ಮಲ್ಟಿ ಸ್ಪೆಷಾಲಿಟಿ ಸ್ಯಾಟಲೈಟ್ ಡೆಂಟಲ್ ಕ್ಲಿನಿಕ್ ಸಾರ್ವಜನಿಕರಿಗೆ ಫಲದಾಯಕವೆನಿಸಲಿದೆ ಮಾತ್ರವಲ್ಲ ರೋಟರಿ ಪುತ್ತೂರು ಇದರ ಮುಕುಟಕ್ಕೆ ಮತ್ತೊಂದು ಗರಿ ಪೋಣಿಸಲಿದೆ. ಈ ನಾಲ್ಕನೇ ಯೋಜನೆಯು ಸುಳ್ಯ ಕೆ.ವಿ.ಜಿ ದಂತ ಮಹಾವಿದ್ಯಾಲಯದ ನಿರ್ವಹಣೆಯೊಂದಿಗೆ ವಾರದ ಆರು ದಿನ ಹೊಸ ಆವಿಷ್ಕಾರದೊಂದಿಗೆ ಕಡಿಮೆ ಶುಲ್ಕ, ವಿಶೇಷ ಆಧುನಿಕ ಸೌಲಭ್ಯದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಂಡು ಯೋಜನೆಯನ್ನು ಸಾಕಾರಗೊಳಿಸಬೇಕು.
-ಡಾ.ಶ್ರೀಪ್ರಕಾಶ್ ಬಿ, ಅಧ್ಯಕ್ಷರು, ರೋಟರಿ ಕ್ಲಬ್ ಪುತ್ತೂರು