ನೇತ್ರಾವತಿಯಿಂದ ಕುಮಾರಧಾರ ನದಿಗೆ ಕಾಡಾನೆಗಳು

0

ಉಪ್ಪಿನಂಗಡಿ: ಕಳೆದ 3 ದಿನಗಳಿಂದ ನೆಕ್ಕಿಲಾಡಿ, ಬಾರ‍್ಯ, ಇಳಂತಿಳ, ಉಪ್ಪಿನಂಗಡಿ ಪರಿಸರದಲ್ಲಿ ಓಡಾಡಿಕೊಂಡು ಜನರಲ್ಲಿ ಭೀತಿ ಉಂಟು ಮಾಡಿಕೊಂಡಿದ್ದ ಜೋಡಿ ಕಾಡಾನೆಗಳು ಆ. 25ರಂದು ಹಿರೇಬಂಡಾಡಿ ಗ್ರಾಮದ ಬೊಲುಂಬುಡ, ಕೊಯಿಲ ಗ್ರಾಮದ ಬೇಂಗದಪಡ್ಪು, ಪೆರ್ಲ, ಮಾಳ ಮುಂತಾದ ಕಡೆಯಲ್ಲಿ ತೋಟದೊಳಗೆ ಹೆಜ್ಜೆ ಹಾಕುತ್ತಾ, ಕೃಷಿ ಹಾನಿಗೊಳಿಸುತ್ತಾ ಸಾಗಿ ಮಧ್ಯಾಹ್ನದ ಹೊತ್ತಿಗೆ ಹಿರೇಬಂಡಾಡಿ ಗ್ರಾಮದ ಗುಂಡಿಜೆ ಎಂಬಲ್ಲಿ ಕುಮಾರಧಾರಾ ನದಿಗೆ ಇಳಿದಿದ್ದು, ಸಂಜೆ ತನಕವೂ ನದಿಯಲ್ಲೇ ನೀರಾಟ ಆಡುತ್ತಿದ್ದುದ್ದಾಗಿ ತಿಳಿದು ಬಂದಿದೆ.
ಹಿರೇಬಂಡಾಡಿ ಗ್ರಾಮದ ಬೊಲುಂಬುಡ ಕುಕ್ಕುದಕಟ್ಟೆ ಶೇಖರ ಶೆಟ್ಟಿ ಎಂಬವರ ಮನೆಯ ನಾಯಿ ರಾತ್ರಿ 1.30ರ ಹೊತ್ತಿಗೆ ಬೊಗಳುತ್ತಿದ್ದುದನ್ನು ಕಿಟಕಿಯ ಮೂಲಕ ನೋಡುವಾಗ ಮನೆ ಅಂಗಳದಲ್ಲಿ ಆನೆ ಇದ್ದುದನ್ನು ಅವರು ನೋಡಿದ್ದು, ಅಲ್ಲಿಂದ ಅದು ತೋಟದೊಳಗೆ ಹೋಗಿದೆ. ಬೆಳಗ್ಗೆ ಬೇಗನೆ ಎದ್ದು ತೋಟದೊಳಗೆ ಹೋದಾಗ 2 ಅಡಿಕೆ ಗಿಡ ಮತ್ತು ಬಾಳೆಗಿಡಗಳು ತುಂಡಾಗಿ ಬಿದ್ದಿತ್ತು ಎಂದು ಶೇಖರ ಶೆಟ್ಟಿ ತಿಳಿಸಿದ್ದಾರೆ.


ಬಳಿಕ ನಸುಕಿನಲ್ಲಿ 3 ಗಂಟೆಯ ಹೊತ್ತಿಗೆ ಕೊಯಿಲ ಗ್ರಾಮದ ಬೇಂಗದಪಡ್ಪು ಶಾಂತಾರಾಮ ಗೌಡ ಎಂಬವರ ತೋಟದಲ್ಲಿ ಇದ್ದುದನ್ನು ಅವರು ಗಮನಿಸಿದ್ದು, ಬೆಳಗ್ಗೆ ಎದ್ದು ತೋಟದಲ್ಲಿ ನೋಡುವಾಗ ಅಡಿಕೆ ಗಿಡ ಮತ್ತು ಕೆಲವು ಬಾಳೆಗಿಡಗಳನ್ನು ಕೆಡವಿ ತಿಂದು ಹಾಕಿರುವುದು ಕಂಡು ಬಂದಿದೆ ಎಂದು ಅವರು ತಿಳಿಸಿದ್ದಾರೆ.


ಬೇಂಗದಪಡ್ಪುವಿನಿಂದ ಮುಂದೆ ಸಾಗಿದ ಆನೆ ಪೆರ್ಲ, ಮಾಳ, ವಳಕಡಮ ಮೊದಲಾದೆಡೆ ತೋಟಗಳನ್ನು ದಾಟಿ ಗುಂಡಿಗೆ ಎಂಬಲ್ಲಿ ಕಾಡಿನೊಳಗೆ ಪ್ರವೇಶಿಸಿದ್ದು, ಅಲ್ಲಿ ಓಟೆ ಬಿದಿರು ಅಧಿಕವಾಗಿದ್ದು, ಮಧ್ಯಾಹ್ನದ ತನಕವೂ ಅಲ್ಲೇ ಇದ್ದು, ಸಂಜೆಯ ಹೊತ್ತಿಗೆ ಕಾಡಿನ ಅಂಚಿನಿಂದ ಕುಮಾರಧಾರಾ ನದಿಗೆ ಇಳಿದಿವೆ. ನದಿ ದಾಟಿದರೆ ಅವುಗಳ ಅಡ್ಡೆ ಶಾಂತಿಗೋಡು ಅರಣ್ಯ ಪ್ರದೇಶವಾಗಿದ್ದು, ಆದರೆ ಸಂಜೆ 6 ಗಂಟೆಯ ವರೆಗೂ ನದಿ ದಾಟಿರುವುದಿಲ್ಲ ಎಂದು ಪುತ್ತೂರು ವಲಯದ ಉಪ ವಲಯ ಅರಣ್ಯಾಧಿಕಾರಿ ಕಾಂತಾರಾಜು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here