ಪುತ್ತೂರು: 2025-26ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕೈಗೊಳ್ಳುವಂತೆ ಕೃಷಿ ಇಲಾಖೆ ರೈತರಿಗೆ ಸೂಚಿಸಿದೆ. ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯ ಮಾಹಿತಿಯನ್ನು ಬೆಳೆ ಸಮೀಕ್ಷೆ ತಂತ್ರಾಂಶದ ಮೂಲಕ ಸಂಗ್ರಹಿಸುತ್ತಿದೆ. ಬೆಳೆ ಸಮೀಕ್ಷೆಯಲ್ಲಿ ರೈತರು ನೇರವಾಗಿ ಭಾಗಿಯಾಗಲು ಅವಕಾಶ ನೀಡಲಾಗಿದ್ದು ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಸ್ವತಃ ತಾವೇ ಪ್ಲೇಸ್ಟೋರ್‌ನಲ್ಲಿ “ಮುಂಗಾರು ರೈತರ ಬೆಳೆ ಸಮೀಕ್ಷೆ 2025” ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಅದರ ಮೂಲಕ ಬೆಳೆಗಳ ಛಾಯಾಚಿತ್ರ ಮತ್ತು ಬೆಳೆ ವಿವರಗಳನ್ನು ಅಪ್‌ಲೋಡ್ ಮಾಡಬಹುದು.
ರೈತರಿಗೆ ಅಪ್‌ಲೋಡ್ ಮಾಡಲು ಸಾಧ್ಯವಾಗದಿದ್ದಲ್ಲಿ ತಾಲೂಕು ಆಡಳಿತ ನೇಮಿಸಿರುವ ಮೊಬೈಲ್ ತಂತ್ರಾಂಶ ಜ್ಞಾನವುಳ್ಳ ಸ್ಥಳೀಯ ಖಾಸಗಿ ನಿವಾಸಿಗಳ ಸಹಾಯದಿಂದ ಬೆಳೆ ವಿವರ ದಾಖಲಿಸಬಹುದು. ರೈತರು ಅಥವಾ ಖಾಸಗಿ ನಿವಾಸಿಗಳು ಛಾಯಾಚಿತ್ರದೊಂದಿಗೆ ನಮೂದಿಸಿದ ಬೆಳೆ ಮಾಹಿತಿಯನ್ನು ತಾಲೂಕು ಆಡಳಿತ ಪರಿಶೀಲಿಸಿ ಅನುಮೋದಿಸುತ್ತದೆ. ರೈತರು ಬೆಳೆ ಸಮೀಕ್ಷೆಯ ಮಾಹಿತಿಯನ್ನು ಪರಿಶೀಲಿಸಿಕೊಳ್ಳಬಹುದು. ವ್ಯತ್ಯಾಸಗಳು ಕಂಡು ಬಂದಲ್ಲಿ ರೈತರು ನೇರವಾಗಿ ತಮ್ಮ ಆಕ್ಷೇಪಣೆಯನ್ನು “ಬೆಳೆ ದರ್ಶಕ” ಮೊಬೈಲ್ ಆ್ಯಪ್ನಲ್ಲಿ ದಾಖಲಿಸಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ, ಕೃಷಿ ಇಲಾಖೆ, ಗ್ರಾಮ ಆಡಳಿತಾಧಿಕಾರಿ, ಕಂದಾಯ ಇಲಾಖೆ, ತೋಟಗಾರಿಕಾ ಅಧಿಕಾರಿಯವರನ್ನು ಸಂಪರ್ಕಿಸಬಹುದು ಎಂದು ಪುತ್ತೂರು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಬೆಳೆ ಸಮೀಕ್ಷೆ ಆಗದ ರೈತರಿಗೆ ಮುಂದಿನ ಸಾಲಿನಲ್ಲಿ ಬೆಳೆ ವಿಮೆ ಯೋಜನೆಯ ಫಲಾನುಭವಿಯಾಗಲು ಅರ್ಹತೆ ಇರುವುದಿಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.