ಪುತ್ತೂರು: ಪುತ್ತೂರು ನಗರದ ರಿಕ್ಷಾ ಚಾಲಕ ಮಾಲಕರ ಎಲ್ಲಾ ಸಂಘದವರ ಜೊತೆ ಸಮಾಲೋಚನೆ ಮಾಡಿ, ಅವರನ್ನು ಕರೆಸಿ ಮಾತುಕತೆ ನಡೆಸಿದ ಬಳಿಕವೇ ಪುತ್ತೂರು ನಗರದಲ್ಲಿ ಸಿಟಿ ಬಸ್ ಗೆ ಚಾಲನೆ ನೀಡಬೇಕು ಎಂದು ಶಾಸಕ ಅಶೋಕ್ ರೈ ಕರ್ನಾಟಕ ಸಾರಿಗೆ ನಿಗಮದ ಡಿ ಸಿ ಅಮಲಿಂಗಯ್ಯ ಹೊಸಪೂಜಾರಿಯವರಿಗೆ ಸೂಚನೆ ನೀಡಿದ್ದಾರೆ.
ಸೋಮವಾರ ಶಾಸಕರ ಕಚೇರಿಯಲ್ಲಿ ಅಧಿಕಾರಿ ಜೊತೆ ಚರ್ಚೆ ನಡೆಸಿದ ಶಾಸಕರು ಪುತ್ತೂರು ಕೆಎಸ್ ಆರ್ ಟಿಸಿ ವಿಭಾಗದಲ್ಲಿ ಸಮಸ್ಯೆಗಳು ಮತ್ತು ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿದರು. ಈ ವೇಳೆ ಮಾತನಾಡಿದ ಶಾಸಕರು ಸಿಟಿ ಬಸ್ ನಗರದಲ್ಲಿ ಓಡಾಡಬೇಕು. ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಸಿಟಿ ಬಸ್ ಓಡಾಟ ಮಾಡುವ ಮೊದಲು ನಗರದಲ್ಲಿರುವ ರಿಕ್ಷಾ ಚಾಲಕರಿಗೆ ತೊಂದರೆಯಾಗುತ್ತದೆಯೇ ಎಂಬುದನ್ನು ಅರಿತುಕೊಳ್ಳಬೇಕು. ಹೆಚ್ಚಿನ ರಿಕ್ಷಾ ಚಾಲಕರು ಬಡವರು, ಅವರು ಒಪ್ಪೊತ್ತಿನ ಊಟಕ್ಕಾಗಿ ದಿನವಿಡೀ ರಿಕ್ಷಾ ಓಡಿಸುತ್ತಾರೆ. ಅವರಿಗೆ ಸಿಟಿ ಬಸ್ ನಿಂದ ತೊಂದರೆಯುಂಟಾಗಬಾರದು. ಅವರ ಜೊತೆ ಅಧಿಕಾರಿಗಳು ಚರ್ಚೆ ನಡೆಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗೆ ಸೂಚನೆ ನೀಡಿದರು. ಪುತ್ತೂರಿಗೆ ಬಸ್ಸಿನ ಬೇಡಿಕೆ ಇದ್ದರೆ ಅದನ್ನು ತಿಳಿಸುವಂತೆಯೂ ಶಾಸಕರು ಸೂಚನೆ ನೀಡಿದರು.