ರೂ.199 ಕೋಟಿ ವ್ಯವಹಾರ, ರೂ.1 ಕೋಟಿ 16 ಲಕ್ಷ ನಿವ್ವಳ ಲಾಭ
ಲಾಭಾಂಶದಲ್ಲಿ ಸ್ವಲ್ಪ ಪಾಲು ನೂತನ ಕಟ್ಟಡ ನಿರ್ಮಾಣಕ್ಕೆ ವಿನಿಯೋಗಿಸಿ ಶೇ.5 ಡಿವಿಡೆಂಡ್ ಘೋಷಣೆ
ಪುತ್ತೂರು: ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಲರವರ ಅಧ್ಯಕ್ಷತೆಯಲ್ಲಿ ಸೆ.6 ರಂದು ಕೆಯ್ಯೂರು ಜಯ ಕರ್ನಾಟಕ ಸಭಾಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಲರವರು ಮಾತನಾಡಿ, ವರದಿ ಸಾಲಿನಲ್ಲಿ ರೂ.199 ಕೋಟಿ ವ್ಯವಹಾರ ನಡೆಸಿ ರೂ.1 ಕೋಟಿ 16 ಲಕ್ಷ ನಿವ್ವಳ ಲಾಭ ಗಳಿಸಿದೆ. ಸಂಘಕ್ಕೆ ತಿಂಗಳಾಡಿಯಲ್ಲಿ ನೂತನ ಕಟ್ಟಡ ನಿರ್ಮಾಣವಾಗುತ್ತಿರುವುದರಿಂದ ನಿವ್ವಳ ಲಾಭಾಂಶವನ್ನು ಸಂಪೂರ್ಣವಾಗಿ ಕಟ್ಟಡ ನಿರ್ಮಾಣಕ್ಕೆ ವಿನಿಯೋಗಿಸುವುದರ ಅಭಿಪ್ರಾಯದಲ್ಲಿ ಸದಸ್ಯರುಗಳ ಸಲಹೆ ಮೇರೆಗೆ ಸ್ವಲ್ಪ ಪಾಲು ಅನ್ನು ಕಟ್ಟಡ ನಿರ್ಮಾಣಕ್ಕೆ ವಿನಿಯೋಗಿಸಿ ಶೇ.5 ರಂತೆ ಡಿವಿಡೆಂಡ್ ನೀಡುವುದು ಎಂದು ತಿಳಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ ಕುಮಾರ್ ರೈ ದೇರ್ಲರವರು 2024-25ನೇ ಸಾಲಿನ ಆಡಳಿತ ಸಮಿತಿಯ ವಾರ್ಷಿಕ ವರದಿಯನ್ನು ಮಂಡಿಸುತ್ತಾ, 2024-25ನೇ ಸಾಲಿನಲ್ಲಿ ಸಹಕಾರಿ ಸಂಘವು 2711 ಸದಸ್ಯರನ್ನು ಹೊಂದಿದ್ದು 3.2856140 ರೂ. ಪಾಲುಬಂಡವಾಳ ಹೊಂದಿರುತ್ತದೆ. ಸಹಕಾರಿ ಸಂಘವು ರೂ. 21,14,54,308.17 ಠೇವಣಿ ಹೊಂದಿದ್ದು, ಸದಸ್ಯರಿಗೆ ನೀಡಿದ ಸಾಲಗಳಲ್ಲಿ ಆರಂಭದಲ್ಲಿ ರೂ.28.67 ಕೋಟಿ ಸಾಲ ಇದ್ದು ರೂ 31.47 ಕೋಟಿ ವಿತರಿಸಿ ರೂ 28.07 ಕೋಟಿ ವಸೂಲಾಗಿದ್ದು ವರ್ಷಾಂತ್ಯಕ್ಕೆ ಸದಸ್ಯರ ಹೊರಬಾಕಿ ಸಾಲ ರೂ. 32,07,30,283.00 ಇರುತ್ತದೆ. ವರದಿ ವರ್ಷದಲ್ಲಿ ಶೇ.99.12 ಸಾಲ ವಸೂಲಾತಿ ಆಗಿದೆ. ನಿಧಿಗಳಲ್ಲಿ ರೂ 5.67 ಕೋಟಿ ಇರುತ್ತದೆ. ಪಡೆದ ಸಾಲಗಳಲ್ಲಿ ವರ್ಷಾರಂಭದಲ್ಲಿ ರೂ. 17.70 ಕೋಟಿ ಇದ್ದು ರೂ 20.52 ಕೋಟಿ ಪಡೆದುಕೊಂಡು ರೂ. 19.52 ಕೋಟಿ ಮರುಪಾವತಿಸಲಾಗಿದೆ. ವಷಾಂತ್ಯಕ್ಕೆ ರೂ.18.70 ಕೋಟಿ ಹೊರಬಾಕಿ ಇದ್ದು ಯಾವುದೇ ಸುಸ್ತಿ ಇರುವುದಿಲ್ಲ ಎಂದು ತಿಳಿಸಿದರು.
ವ್ಯಾಪಾರ ವಹಿವಾಟಿನಲ್ಲಿ ಕ್ಯಾಂಪ್ಕೋ ಅಡಿಕೆ ಖರೀದಿಯಿಂದ ರೂ.1,09,241 ಕಮೀಷನ್ ಬಂದಿರುತ್ತದೆ.ಸಹಕಾರಿ ಮಾರ್ಟ್ನಿಂದ ರೂ.2.53 ಕೋಟಿ ಮೌಲ್ಯದ ಗೃಹಬಳಕೆ ವಸ್ತುಗಳ ಮಾರಾಟ ಮಾಡಿ ರೂ.7 ಲಕ್ಷ 45 ಸಾವಿರ ಲಾಭ ಗಳಿಸಿದೆ ಎಂದು ತಿಳಿಸಿದರು. ಲಾಭ ನಷ್ಟದಲ್ಲಿ 67 ವರ್ಷಗಳ ಸುಧೀರ್ಘ ಅವಧಿಯಲ್ಲಿ 2024-25ನೇ ಸಾಲಿನಲ್ಲಿ ರೂ. 199,76,04,782.23 ವ್ಯವಹಾರ ನಡೆಸಿ ರೂ.1 ಕೋಟಿ 16 ಲಕ್ಷದ 78 ಸಾವಿರದ 443 ರೂಪಾಯಿಗಳ ನಿವ್ವಳ ಲಾಭವನ್ನು ಗಳಿಸಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ ಕುಮಾರ್ ರೈ ದೇರ್ಲ ತಿಳಿಸಿದರು. ದ.ಕ ಜಿಲ್ಲಾ ಬ್ಯಾಂಕ್ನಿಂದ ರೂ. 18,70,50,221.00 ಸಾಲವನ್ನು ಪಡೆಯಲಾಗಿದೆ. ದ.ಕ ಜಿಲ್ಲಾ ಬ್ಯಾಂಕ್ನಲ್ಲಿ ರೂ. 11,68,09,476.00 ಧನ ವಿಯೋಗ, ರೂ. 1,00,00,000,00 ಪಾಲು ಬಂಡವಾಳದಲ್ಲಿ ಹೂಡಿಕೆ ಮಾಡಲಾಗಿದೆ. ಸಂಘದಲ್ಲಿ ಕ್ಷೇಮ ನಿಧಿ ಮತ್ತು ಇತರ ನಿಧಿಗಳು ರೂ.5,05,47,609 ಇರುತ್ತದೆ. 2024-25ನೇ ಸಾಲಿನಲ್ಲಿ ರೂ 40.87.558.08 ಬೆಳೆ ವಿಮೆಯ ಪ್ರೀಮಿಯಂ ಪಾವತಿಸಲಾಗಿದೆ ಎಂದು ಅವರು ತಿಳಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು, ನಿರ್ದೇಶಕರುಗಳಾದ ಎಸ್.ಬಿ ಜಯರಾಮ ರೈ ಬಳಜ್ಜ, ತಾರಾನಾಥ ಕಂಪ, ಜನಾರ್ದನ ರೈ ಪಿ, ರಿತೇಶ್ ಎಂ, ಸೀತಾರಾಮ ಗೌಡ, ಪುಷ್ಪಲತಾ ಜೆ.ರೈ, ಜಯಂತಿ, ಲೋಕೇಶ್ ಬಿ, ಪ್ರವೀಣ್, ಸಂತೋಷ್ ಕುಮಾರ್ ಕೆ ಮತ್ತು ಡಿಸಿಸಿ ಬ್ಯಾಂಕ್ ವಲಯ ಮೇಲ್ವಿಚಾರಕ ಶರತ್ ಡಿ ಉಪಸ್ಥಿತರಿದ್ದರು. ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಸೂರಜ್ ಕುಮಾರ್ ಬಜೆಟ್ ಮಂಡನೆ ಮಾಡಿದರು. ಸಂಘದ ಸಿಬ್ಬಂದಿ ಅಣ್ಣು ತಿಂಗಳಾಡಿ ಪ್ರಾರ್ಥಿಸಿದರು. ನಿರ್ದೇಶಕ ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು ಸ್ವಾಗತಿಸಿದರು. ನಿರ್ದೇಶಕ ಸಂತೋಷ್ ಕುಮಾರ್ ರೈ ಕೋರಂಗ ವಂದಿಸಿದರು. ಸಂಘದ ಶಾಖಾ ವ್ಯವಸ್ಥಾಪಕರಾದ ನಿರೂಪಮ, ಗುಮಾಸ್ತರಾದ ಪ್ರೀತಮ್, ಸಿಬ್ಬಂದಿಗಳಾದ ಕೌಶಲ್ಯ, ಭವ್ಯ,ದುರ್ಗಾಕಿರಣ್, ಚರಣ್ರಾಜ್, ಐತ್ತಪ್ಪ ನಾಯ್ಕ್, ಪ್ರದೀಪ್, ಕೊರಗಪ್ಪ ಟಿ ಸಹಕರಿಸಿದ್ದರು.
ಸಭೆಯಿಂದ ಬಂದ ಸಲಹೆ ಸೂಚನೆಗಳು
ಕೊಳೆರೋಗದಿಂದ ಅಡಿಕೆ ನಷ್ಟ:
ಈ ವರ್ಷ ಸುರಿದ ಭಾರೀ ಮಳೆಯಿಂದಾಗಿ ಬಹುತೇಕ ರೈತರು ಅಡಿಕೆ ಕೊಳೆರೋಗದಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ.ಆದ್ದರಿಂದ ರೈತರ ಸಾಲಮನ್ನಾದ ವಿಚಾರ ಸೇರಿದಂತೆ ರೈತರ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರವನ್ನು ನೀಡುವಂತೆ ಆಗ್ರಹಿಸಿ ಸಹಕಾರಿ ಸಂಘದ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ಸದಸ್ಯರು ತಿಳಿಸಿದರು.
ಕೆಯ್ಯೂರಿನಲ್ಲಿ ಕಟ್ಟಡ ನಿರ್ಮಾಣ ಯಾವಾಗ?:
ಕೆಯ್ಯೂರಿನಲ್ಲಿ ಸಂಘದ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಕಳೆದ ಮಹಾಸಭೆಯಲ್ಲಿ ಪ್ರಸ್ತಾಪ ಮಾಡಲಾಗಿತ್ತು ಆದರೆ ಇದುವರೆಗೆ ಯಾವುದೆ ಕೆಲಸ ಆಗಿಲ್ಲ, ಕೆಯ್ಯೂರಿನಲ್ಲಿಯೂ ಸುಸಜ್ಜಿತ ಕಟ್ಟಡ ನಿರ್ಮಾಣವಾಗಬೇಕು ಎಂದು ವಿಶ್ವನಾಥ ಪೂಜಾರಿ ಕೆಂಗುಡೇಲು, ಜಯಂತ ಪೂಜಾರಿ ಕೆಂಗುಡೇಲು ಮತ್ತಿತರರು ಆಗ್ರಹಿಸಿದರು. ಪಂಚಾಯತ್ಗೊಂದು ಪ್ರಾ.ಕೃ.ಪ.ಸಹಕಾರಿ ಸಂಘದ ಆಗಬೇಕು ಎಂದು ಸರಕಾರದ ಆದೇಶ ಕೂಡ ಇದೆ. ಕೆಯ್ಯೂರಿನಲ್ಲಿ ಕಟ್ಟಡ ನಿರ್ಮಾಣ ಆಗಲೇಬೇಕು ಎಂದು ಜಯಂತ ಪೂಜಾರಿ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಲರವರು ಕೆಯ್ಯೂರಿನಲ್ಲಿ ಕಟ್ಟಡ ಆಗಬೇಕು ಎಂಬ ಆಸೆ ನಮಗೂ ಇದೆ. ಇದಲ್ಲದೆ ಒಂದು ಸಹಕಾರಿ ಮಾರ್ಟ್ ಕೂಡ ಆಗಬೇಕು ಎಂಬ ಆಸೆ ಇದೆ. ಪ್ರಸ್ತುತ ತಿಂಗಳಾಡಿಯಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗುತ್ತಿದೆ. ಮುಂದಿನ ದಿನಗಳಲ್ಲಿ ಕೆಯ್ಯೂರಿನಲ್ಲಿ ಹಳೆಯ ಕಟ್ಟಡದ ದುರಸ್ತಿ ಅಥವಾ ಹೊಸ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಮುಂದಿನ ಮಹಾಸಭೆಗೆ ತಿಂಗಳಾಡಿಯಲ್ಲಿ ನೂತನ ಕಟ್ಟಡ ಲೋಕಾರ್ಪಣೆಯಾಗಬೇಕು:
ತಿಂಗಳಾಡಿಯಲ್ಲಿ ನೂತನ ಕಟ್ಟಡದ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಮುಂದಿನ ಮಹಾಸಭೆಯ ವೇಳೆಗೆ ಕಟ್ಟಡ ನಿರ್ಮಾಣವಾಗಿರಬೇಕು ಎಂದು ಕಡಮಜಲು ಸುಭಾಷ್ ರೈ ತಿಳಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಕೆಲವೊಂದು ಟೆಕ್ನಿಕಲ್ ಸಮಸ್ಯೆ, ಕಲ್ಲು, ಮರಳು ಇತ್ಯಾದಿಗಳ ಅಭಾವದಿಂದ ಕಾಮಗಾರಿ ಸ್ವಲ್ಪ ತಡವಾಗಿದೆ ಖಂಡಿತ ಮಾಡುತ್ತೇವೆ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸುಭಾಷ್ ರೈಗಳು, ಇದು ಸಮಂಜಸ ಉತ್ತರವಲ್ಲ ಇದನ್ನು ಆಡಳಿತ ಮಂಡಳಿಯೊಳಗೆ ಸರಿಪಡಿಸಿಕೊಳ್ಳಬೇಕು ಎಂದರು. ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಆಗಿದ್ದು ಯಾವಾಗ ಮತ್ತು ಯಾಕೆ ತಡವಾಯಿತು ಎಂದು ನಾರಾಯಣ ಪೂಜಾರಿ ಕುರಿಕ್ಕಾರ ಪ್ರಶ್ನಿಸಿದರು. ಜೂ.೩೦ ಕ್ಕೆ ಟೆಂಡರ್ ಆಗಿದೆ. ಮಳೆಯ ಕಾರಣದಿಂದ ಕಾಮಗಾರಿ ಆರಂಭಕ್ಕೆ ತೊಡಕಾಯಿತು ಎಂದು ಸಿಇಓ ವಿನಯ ಕುಮಾರ್ ತಿಳಿಸಿದರು.
ಕಟ್ಟಡ ನಿರ್ಮಾಣಕ್ಕೆ ಲಾಭಾಂಶವನ್ನು ಬಿಟ್ಟುಕೊಡಿ:
ಈಗಾಗಲೇ ತಿಂಗಳಾಡಿಯಲ್ಲಿ ನಿರ್ಮಾಣವಾಗಲಿರುವ ಕಟ್ಟಡಕ್ಕೆ ಈ ವರದಿ ವರ್ಷದ ಲಾಭಾಂಶವನ್ನು ಸದಸ್ಯರು ಬಿಟ್ಟುಕೊಟ್ಟರೆ ಬಹಳ ಒಳ್ಳೆಯದು ಎಂಬ ಅಭಿಪ್ರಾಯವನ್ನು ಅಧ್ಯಕ್ಷರು ಸಭೆಯ ಮುಂದಿಟ್ಟರು. ಇದಕ್ಕೆ ಪ್ರತಿಕ್ರಿಯೆ ನೀಡಿದ ವಿಶ್ವನಾಥ ಪೂಜಾರಿ ಕೆಂಗುಡೇಲು, ಜಯಂತ ಪೂಜಾರಿ, ಅಬ್ದುಲ್ ಖಾದರ್ ಮೇರ್ಲ, ಕಡಮಜಲು ಸುಭಾಷ್ ರೈರವರುಗಳು ಕೊಳೆರೋಗದಿಂದ ರೈತರು ಬಹಳಷ್ಟು ನಷ್ಟದಲ್ಲಿದ್ದಾರೆ ಆದ್ದರಿಂದ ಲಾಭಾಂಶದಲ್ಲಿ ಸ್ವಲ್ಪವಾದರೂ ಡಿವಿಡೆಂಡೆ ಕೊಡಬೇಕು ಎಂದು ಒತ್ತಾಯಿಸಿದರು. ರಾಘವ ಗೌಡ ಕೆರೆಮೂಲೆಯವರು ಮಾತನಾಡಿ, ಸಾಲಮುಕ್ತ ಕಟ್ಟಡ ನಿರ್ಮಾಣ ಸಾಧ್ಯವಾಗುವುದಾದರೆ ಡಿವಿಡೆಂಡ್ ಬಿಟ್ಟುಕೊಡಬಹುದು ಎಂಬುದು ನನ್ನ ಅನಿಸಿಕೆ ಎಂದರು. ಇದಕ್ಕೆ ಧ್ವನಿಗೂಡಿಸಿದ ವಿಜಯ ಕುಮಾರ್ ರೈ ಕೋರಂಗ, ಮುಂಡಾಳಗುತ್ತು ಮೋಹನ ಆಳ್ವ ಮತ್ತಿತರರು ಈ ವರದಿ ವರ್ಷದ ಡಿವಿಡೆಂಡ್ ಬಿಟ್ಟುಕೊಟ್ಟರೆ ಸಾಲಮುಕ್ತ ಕಟ್ಟಡ ನಿರ್ಮಾಣ ಸಾಧ್ಯವೇ ಎಂದು ಕೇಳಿದರು. ಇದಕ್ಕೆ ಆಡಳಿತ ಮಂಡಳಿ ಸಾಧ್ಯವಿದೆ ಎಂದು ಉತ್ತರಿಸಿತು. ಕೊನೆಗೆ ಅಧ್ಯಕ್ಷರು ಮಾತನಾಡಿ, ಒಂದಷ್ಟು ಸದಸ್ಯರು ಬಿಟ್ಟುಕೊಡುತ್ತೇವೆ ಎಂದು ಸೂಚಿಸಿದರೆ ಒಂದಷ್ಟು ಮಂದಿ ಸ್ವಲ್ಪವಾದರೂ ಡಿವಿಡೆಂಡ್ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ ಅದರಂತೆ ಶೇ.5 ಡಿವಿಡೆಂಡ್ ನೀಡುವುದು ಉಳಿದ ಮೊತ್ತವನ್ನು ಕಟ್ಡಡ ನಿರ್ಮಾಣಕ್ಕೆ ಬಳಸಿಕೊಳ್ಳುವುದು ಎಂದು ತಿಳಿಸಿದರು.
67 ವರ್ಷಗಳಲ್ಲೇ ಅತೀ ಹೆಚ್ಚು ಲಾಭ
ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಆರಂಭವಾಗಿ ೬೭ ವರ್ಷಗಳು ಕಳೆದಿದ್ದು ಈ ಸುಧೀರ್ಘ ಪಯಣದಲ್ಲಿ ಸಂಘವು ಪ್ರಪ್ರಥಮ ಬಾರಿಗೆ ರೂ.೧ಕೋಟಿ೧೬ ಲಕ್ಷ ಲಾಭವನ್ನು ಪಡೆದುಕೊಂಡಿದೆ.
ಸಂಘಕ್ಕೆ ಅತೀ ಹೆಚ್ಚು ವ್ಯವಹಾರದ ಮೂಲಕ ಸಹಕರಿಸಿದವರಿಗೆ ಗೌರವಾರ್ಪಣೆ
ವಿಶೇಷವಾಗಿ ಸಂಘದ ಮಹಾಸಭೆ ನಡೆಸಲು ಕೆಯ್ಯೂರು ಜಯ ಕರ್ನಾಟಕ ಸಭಾಭವನದಲ್ಲಿ ಕಳೆದ ಹಲವು ವರ್ಷಗಳಿಂದ ಉಚಿತವಾಗಿ ನೀಡುತ್ತಾ ಬಂದಿರುವ ದಿವಾಕರ ರೈ ಸಣಂಗಳರವರನ್ನು ಶಾಲು,ಸ್ಮರಣಿಕೆ ನೀಡಿ ಗೌರವಿಸಲಾಯಿತು. ಇದಲ್ಲದೆ ಸಹಕಾರಿ ಸಂಘಕ್ಕೆ ಅತೀ ಹೆಚ್ಚು ವ್ಯವಹಾರದ ಮೂಲಕ ಸಹಕರಿಸಿದ ದೇವಸ್ಥಾನ ಮತ್ತು ದೈವಸ್ಥಾನದ ಸಾಲಿನಲ್ಲಿ ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಕೆದಂಬಾಡಿಗುತ್ತು ತರವಾಡು ಮನೆಗೆ ಸಂಬಂಧಪಟ್ಟವರನ್ನು ಗೌರವಿಸಲಾಯಿತು. ಅಂಗಡಿಗಳಲ್ಲಿ ಜನನಿ ಎಂಟರ್ಪ್ರೈಸಸ್ ಕಲ್ಲರ್ಪೆ ಮತ್ತು ತೆಗ್ಗು ಗಣೇಶ್ ಸ್ಟೋರ್ನ ಗಣೇಶ್ ರೈ ತೆಗ್ಗುರವರಿಗೆ ಗ್ರಾಹಕರಲ್ಲಿ ವೆಂಕಟರ್ರಾಜ್ ಕೆ.ಭಟ್ ಪಟ್ಲಮೂಲೆ ಮತ್ತು ಡೊಂಬಯ್ಯ ಗೌಡ ಕೋಡಂಬುರವರನ್ನು ಹಾಗೇ ರಸಗೊಬ್ಬರ ಖರೀದಿಯಲ್ಲಿ ಪ್ರಮೋದ್ ಕುಮಾರ್ ರೈ ಕಜೆ, ರಾಮಯ್ಯ ರೈ ಎನ್ ಮತ್ತು ಸಂತೋಷ್ ಕುಮಾರ್ ರೈ ಇಳಂತಾಜೆರವರುಗಳನ್ನು ಗುರುತಿಸಿ ಗೌರವಿಸಲಾಯಿತು.