ಪುತ್ತೂರು: ರಸ್ತೆ ಬದಿಯಲ್ಲಿ ಕಸ ಎಸೆದು ಹೋಗಿದ್ದವರನ್ನು ಪತ್ತೆ ಹಚ್ಚಿ ದಂಡನೆ ವಿಧಿಸಿದ್ದು ಅಲ್ಲದೆ ಕಸವನ್ನು ಅವರಿಂದಲೇ ತೆರವು ಮಾಡಿಸುವ ಮೂಲಕ ಒಳಮೊಗ್ರು ಗ್ರಾಮ ಪಂಚಾಯತ್ ಗಮನ ಸೆಳೆದಿದೆ.
ಗ್ರಾಪಂ ವ್ಯಾಪ್ತಿಯ ಕೈಕಾರ-ಬಿಜತ್ರೆ ರಸ್ತೆಯಲ್ಲಿ ಕಸವನ್ನು ಸುರಿದು ಹೋಗಿದ್ದರು. ಇದನ್ನು ಗಮನಿಸಿದ ವಾರ್ಡ್ ಸದಸ್ಯೆ ರೇಖಾ ಯತೀಶ್ ಬಿಜತ್ರೆಯವರು ಕಸ ಸುರಿದಿರುವುದನ್ನು ಮೊಬೈಲ್ನಲ್ಲಿ ಫೋಟೋ ತೆಗೆದು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ರವರುಗಳಿಗೆ ಕಳಿಸಿದ್ದರು. ಅಲ್ಲದೆ ಕಸದಲ್ಲಿ ಏನಾದರೂ ಕುರುಹು ಸಿಗಬಹುದೇ ಎಂದು ಹುಡುಕಾಡಿದ್ದರು ಈ ವೇಳೆ ಅವರಿಗೆ ವಿದ್ಯುತ್ ಬಿಲ್ವೊಂದು ಸಿಕ್ಕಿತ್ತು ಆ ಬಳಿಕ ಸಂಜೀವಿನಿ ಒಕ್ಕೂಟದ ಸ್ವಚ್ಚತಾ ಸೇನಾನಿಗಳನ್ನು ಕರೆಸಿ ಕಸದಲ್ಲಿ ಇನ್ನೇನಾದರೂ ಕುರುಹು ಸಿಗಬಹುದೇ ಎಂದು ಹುಡುಕಾಡಿಸಿದ್ದರು. ವಿದ್ಯುತ್ ಬಿಲ್ ಅನ್ನು ಕೂಡ ಪಂಚಾಯತ್ ಅಧ್ಯಕ್ಷೆಯವರಿಗೆ ಕಳಿಸಿದ್ದರು.
ಗ್ರಾಪಂ ಅಧ್ಯಕ್ಷರು ವಿದ್ಯುತ್ ಬಿಲ್ ಅನ್ನು ಮೆಸ್ಕಾಂ ಎಇಇಯವರಿಗೆ ಕಳಿಸಿ ಈ ಬಗ್ಗೆ ಮಾಹಿತಿ ನೀಡುವಂತೆ ಕೇಳಿಕೊಂಡಿದ್ದರು. ಮೆಸ್ಕಾಂ ಎಇಇ ನೀಡಿದ ವಿಳಾಸದ ಆಧಾರದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಯವರು ಕರೆ ಮಾಡಿ ಕಸ ಹಾಕಿರುವ ಬಗ್ಗೆ ವಿಚಾರಿಸಿದ್ದರು ಈ ವೇಳೆ ಕಸ ಹಾಕಿದವರು ಒಪ್ಪಿಕೊಂಡಿದ್ದು ನಮ್ಮ ಕೆಲಸಗಾರರು ಕಸವನ್ನು ತಂದು ಅಲ್ಲಿ ಹಾಕಿರಬಹುದು ಎಂದು ಹೇಳಿಕೊಂಡಿದ್ದರು. ಈ ಬಗ್ಗೆ ಪಂಚಾಯತ್ಗೆ ದಂಡನೆ ಪಾವತಿಸುವಂತೆ ಸೂಚಿಸಲಾಗಿತ್ತು ಅದರಂತೆ ಬೆಳ್ಳಿಪ್ಪಾಡಿ ಭಾಗದ ವ್ಯಕ್ತಿಯೊಬ್ಬರು ಕಸ ಹಾಕಿದ ಬಗ್ಗೆ ದಂಡನೆ ಪಾವತಿಸಿದ್ದಾರೆ.
ಎಲ್ಲಿಯ ಕಸ ಇನ್ನೆಲ್ಲಿಗೋ…!
ಒಳಮೊಗ್ರು ಗ್ರಾಮದ ಬಿಜತ್ರೆಯಲ್ಲಿ ಸುರಿದಿರುವ ಕಸ ಬೆಳ್ಳಿಪ್ಪಾಡಿ ಭಾಗದ್ದು ಆಗಿದ್ದು ಎಲ್ಲಿಯ ಕಸ ಇನ್ನೆಲ್ಲಿಗೋ ಹೋಗಿರುವುದು ವಿಚಿತ್ರವಾದರೂ ಸತ್ಯವಾಗಿದೆ. ಇದರಿಂದ ನಾವು ಗಮನಿಸಬೇಕಾದ ವಿಷಯವೆಂದರೆ ಸ್ಥಳೀಯವಾಗಿ ರಸ್ತೆ ಬದಿಯಲ್ಲಿ ರಾಶಿ ಬಿದ್ದಿರುವ ಕಸ ಇನ್ನೆಲ್ಲಿದ್ದೋ ಆಗಿರುತ್ತದೆ. ಎಲ್ಲಿಂದಲೋ ತಂದು ಇನ್ನೆಲ್ಲಿಯೋ ಕಸವನ್ನು ಸುರಿದು ಹೋಗುತ್ತಿದ್ದಾರೆ. ಹೀಗೆ ಸುರಿದಿರುವ ಕಸವನ್ನು ಸರಿಯಾಗಿ ವಿಂಗಡನೆ ಮಾಡಿ ನೋಡಿದರೆ ಅದರಲ್ಲಿ ಕಸ ಸುರಿದಿರುವ ವ್ಯಕ್ತಿಯ ಕುರುಹು ಪತ್ತೆ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಒಳಮೊಗ್ರು ಗ್ರಾಮ ಪಂಚಾಯತ್ ಯಶಸ್ಸು ಕಂಡಿದೆ. ಆ ಮೂಲಕ ಕಸ ಹಾಕಿದವರಿಗೆ ದಂಡನೆ ವಿಧಿಸುವ ಮೂಲಕ ಕಸ ಹಾಕುವವರಿಗೆ ಎಚ್ಚರಿಕೆಯನ್ನು ರವಾನಿಸಿದೆ.
‘ ಕಸದಲ್ಲಿ ದೊರೆತಿರುವ ವಿದ್ಯುತ್ ಬಿಲ್ ಆಧಾರದಲ್ಲಿ ಕಸ ಹಾಕಿದವರನ್ನು ಪತ್ತೆ ಹಚ್ಚಿ ದಂಡನೆ ವಿಧಿಸಲಾಗಿದೆ ಅಲ್ಲದೆ ಕಸವನ್ನು ಕೂಡ ತೆರವುಗೊಳಿಸಲಾಗಿದೆ. ರಸ್ತೆ ಬದಿಯಲ್ಲಿ ಕಸ, ತ್ಯಾಜ್ಯ ಸುರಿಯುವುದು ಅಪರಾಧವಾಗಿದ್ದು ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಸ್ವಚ್ಚತಾ ವಾಹಿನಿ ವಾಹನಕ್ಕೆ ನೀಡುವ ಮೂಲಕ ಸಹಕರಿಸಬೇಕು. ಗ್ರಾಮದ ಸ್ವಚ್ಚತೆಗೆ ಪ್ರತಿಯೊಬ್ಬರು ಸಹಕರಿಸಬೇಕಾಗಿದೆ.’
ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಪಂ