ಕಾಂಚನ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

3.45 ಲಕ್ಷ ರೂ.ನಿವ್ವಳ ಲಾಭ; ಶೇ.15 ಡಿವಿಡೆಂಡ್, ಪ್ರತಿ ಲೀ.ಹಾಲಿಗೆ 89 ಪೈಸೆ ಬೋನಸ್ -ಡೆನ್ನಿಸ್ ಪಿಂಟೋ

ನೆಲ್ಯಾಡಿ: ಕಾಂಚನ ಹಾಲು ಉತ್ಪಾದಕರ ಸಹಕಾರಿ ಸಂಘದ 2024-25ನೇ ಸಾಲಿನ ಸರ್ವಸದಸ್ಯರ ಸಾಮಾನ್ಯ ಸಭೆ ಸೆ.10ರಂದು ಸಂಘದ ಆವರಣದಲ್ಲಿ ನಡೆಯಿತು.



ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪಿ.ಡೆನ್ನಿಸ್ ಪಿಂಟೋ ಅವರು ಮಾತನಾಡಿ, ಸಂಘವು 2024-25ನೇ ಸಾಲಿನಲ್ಲಿ 2,78,36,510 ರೂ. ಒಟ್ಟು ವ್ಯವಹಾರ ಮಾಡಿದ್ದು 3,45,652 ರೂ.ನಿವ್ವಳ ಲಾಭಗಳಿಸಿದೆ. ಲಾಭಾಂಶವನ್ನು ಸಂಘದ ಉಪನಿಯಮದ ಪ್ರಕಾರ ವಿಂಗಡಣೆ ಮಾಡಲಾಗಿದ್ದು ಸಂಘದ ಸದಸ್ಯರಿಗೆ ಶೇ.15 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಪ್ರತಿ ಲೀ.ಹಾಲಿಗೆ 89 ಪೈಸೆಯಂತೆ ಬೋನಸ್ ನೀಡಲಾಗುವುದು ಎಂದರು. ವರದಿ ಸಾಲಿನಲ್ಲಿ ಸದಸ್ಯರಿಂದ 1,85,620 ಲೀ.ಹಾಲು ಖರೀದಿ ಮಾಡಲಾಗಿದೆ. ಇದರಲ್ಲಿ 71,37,687 ಮೌಲ್ಯದ ಹಾಲು ಒಕ್ಕೂಟಕ್ಕೆ ಹಾಗೂ 1,78,739 ರೂ.ಮೌಲ್ಯದ ಹಾಲು ಸ್ಥಳೀಯವಾಗಿ ಮಾರಾಟವಾಗಿದೆ. 1722 ಚೀಲ ಪಶುಆಹಾರ, 1250 ಕೆ.ಜಿ.ಲವಣ ಮಿಶ್ರಣ, 360 ಕೆ.ಜಿ. ಸಂವೃದ್ಧಿ ಮಾರಾಟ ಮಾಡಲಾಗಿದೆ. ಇದರಿಂದ 6,39,152 ರೂ.ವ್ಯಾಪಾರ ಲಾಭ ಬಂದಿರುತ್ತದೆ. ಅಲ್ಲದೇ ಒಕ್ಕೂಟದ ಷೇರು ಹೂಡಿಕೆ, ಠೇವಣಿ ಬಡ್ಡಿ ಹಾಗೂ ಇತರ ಆದಾಯದಿಂದಲೂ ಸಂಘಕ್ಕೆ ಲಾಭ ಬಂದಿರುತ್ತದೆ. ಒಕ್ಕೂಟದಿಂದ ಸಂಘದ ಒರ್ವ ಸದಸ್ಯನಿಗೆ ಹಾಲು ಕರೆಯುವ ಯಂತ್ರ, ಮೂವರಿಗೆ ರಬ್ಬರ್ ಮ್ಯಾಟ್ ಖರೀದಿಗೆ ಅನುದಾನ ಬಂದಿದೆ ಎಂದು ಅವರು ತಿಳಿಸಿದರು. ಪ್ರಸ್ತುತ ಸಂಘದಲ್ಲಿ ದಿನಕ್ಕೆ 509 ಲೀ.ಹಾಲು ಸಂಗ್ರಹವಾಗುತ್ತಿದೆ. 228 ಸದಸ್ಯರಿದ್ದರೂ 52 ಸದಸ್ಯರು ಹಾಲು ಪೂರೈಸುತ್ತಿದ್ದಾರೆ. ಇದರಲ್ಲಿ 22 ಸದಸ್ಯರು ಸಂಘದಿAದ ಪಶು ಆಹಾರ ಖರೀದಿಸುತ್ತಿಲ್ಲ. ಒಕ್ಕೂಟದಿಂದ ಸವಲತ್ತು ಸಿಗಬೇಕಾದರೆ ಸಂಘದಿಂದಲೇ ಪಶು ಆಹಾರ ಖರೀದಿಸಬೇಕೆಂಬ ಮಾನದಂಡವೂ ಇದೆ. ಇದಕ್ಕೆ ಎಲ್ಲಾ ಸದಸ್ಯರು ಸಹಕಾರ ನೀಡಬೇಕು. ಮುಂದೆ ಆನ್‌ಲೈನ್ ಸಿಸ್ಟಮ್ ಬರಲಿದ್ದು ಇದಕ್ಕೆ ನಾವು ಒಗ್ಗೂಡಿಕೊಳ್ಳಬೇಕಾಗಿದೆ. ಸಂಘದ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಎಂದರು.


ಅತಿಥಿಯಾಗಿದ್ದ ಒಕ್ಕೂಟದ ವಿಸ್ತರಣಾಧಿಕಾರಿ ರಾಜೇಶ್ ಕಾಮತ್‌ರವರು ಮಾತನಾಡಿ, ಒಕ್ಕೂಟದಿಂದ ಹಾಲು ಉತ್ಪಾದಕರಿಗೆ 23 ಯೋಜನೆಗಳಿದ್ದು ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು. ಖಾಸಗಿಯವರಿಂದ ಪಶು ಆಹಾರ ಖರೀದಿಸದೇ ಸಂಘದಿಂದಲೇ ಖರೀದಿಸಬೇಕು. ಇದರಿಂದ ಬರುವ ಲಾಭ ಸದಸ್ಯರಿಗೆ ಹಂಚಿಕೆಯಾಗಲಿದೆ. ಹಾಲು ಉತ್ಪಾದನೆ ಹೆಚ್ಚಳ ನಿಟ್ಟಿನಲ್ಲಿ ಈರೋಡ್ ತಳಿಗಳಿಗೆ ಒತ್ತು ನೀಡಲಾಗುತ್ತಿದೆ. ಈ ತಳಿಗಳ ಖರೀದಿಗೆ ಸಂಘದ ಸದಸ್ಯರಿಗೆ ಒಕ್ಕೂಟದಿಂದ ಪ್ರೋತ್ಸಾಹ ನೀಡಲಾಗುತ್ತಿದೆ. ಮುಂದೆ ಒಂದೇ ಸಾಫ್ಟ್‌ವೇರ್‌ನಲ್ಲಿ ಎಲ್ಲವೂ ದಾಖಲಾಗಲಿದ್ದು ಪಾರದರ್ಶಕವಾಗಿರಲಿದೆ. 1962 ಗೆ ಕರೆ ಮಾಡಿದಲ್ಲಿ ಪಶು ಸಂಜೀವಿನಿ ಆಂಬುಲೆನ್ಸ್ ಮನೆ ಬಾಗಿಲಿಗೆ ಬರಲಿದೆ. ಈ ಎಲ್ಲಾ ಸೌಲಭ್ಯಗಳನ್ನು ಹಾಲು ಉತ್ಪಾದಕರು ಪಡೆದುಕೊಳ್ಳುವಂತೆ ಹೇಳಿದರು.

ಸಂಘದ ಉಪಾಧ್ಯಕ್ಷ ಯಂ.ಶಶಿಧರ ಗೌಡ, ನಿರ್ದೇಶಕರಾದ ಯಂ.ಹರಿಶ್ಚಂದ್ರ ಗೌಡ, ಯಂ.ರವೀಂದ್ರ ಗೌಡ, ಯನ್.ಉಮೇಶ ಗೌಡ, ಸುರೇಶ್ ಕೆ., ಪ್ರೇಮ, ಹೊನ್ನಮ್ಮ, ನಾರಾಯಣ ಕೆ., ರುಕ್ಮಯ ಗೌಡ, ಶ್ರೀಧರ ಬಿ., ವಸಂತಿ ಬಿ.,ರತ್ನಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಅಜಯ್‌ಕುಮಾರ್ ವರದಿ ವಾಚಿಸಿದರು. ಯನ್.ಉಮೇಶ ಗೌಡ ಸ್ವಾಗತಿಸಿ, ನಾರಾಯಣ ಕೆ.ವಂದಿಸಿದರು. ಸುರೇಶ್ ಕೆ.ಪ್ರಾರ್ಥಿಸಿದರು. ಹಾಲು ಪರೀಕ್ಷಕಿ ಭವಾನಿ ಬಿ.ಸಹಕರಿಸಿದರು. ಮಾಜಿ ಅಧ್ಯಕ್ಷರಾದ ಹರಿಶ್ಚಂದ್ರ ಗೌಡ ಮುದ್ಯ, ಶಿವರಾಮ ಕಾರಂತ ಊರಾಬೆ ಹಾಗೂ ಸದಸ್ಯರು ಸಲಹೆ, ಸೂಚನೆ ನೀಡಿದರು. ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ.


ಅತೀ ಹೆಚ್ಚು ಹಾಲು ಹಾಕಿದವರಿಗೆ ಬಹುಮಾನ;
2024-25ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿದ ಮೂವರು ಸದಸ್ಯರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ರೂ.4,31,824 ಮೌಲ್ಯದ 12049 ಲೀ.ಹಾಲು ಹಾಕಿದ ತಿಮ್ಮಪ್ಪ ಗೌಡ ಉಪಾತಿಪಾಲು(ಪ್ರಥಮ), ರೂ.3,85,620 ರೂ.ಮೌಲ್ಯದ 10,694 ಲೀ.ಹಾಲು ಹಾಕಿದ ಡೆನ್ನಿಸ್ ಪಿಂಟೊ ಪುಯಿಲ(ದ್ವಿತೀಯ), ರೂ.2,85,986 ರೂ.ಮೌಲ್ಯದ 8375 ಲೀ.ಹಾಲು ಹಾಕಿದ ಸುರೇಶ್ ಕೆ.ಗುರುಮನೆ ಬಿದಿರಾಡಿ(ತೃತೀಯ)ಇವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಸಂಘಕ್ಕೆ ಹಾಲು ಪೂರೈಸಿದ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಲಾಯಿತು.

72 ಸದಸ್ಯರ ಷೇರು ಹಣ ಕ್ಷೇಮನಿಧಿಗೆ;
ಸಂಘದಲ್ಲಿ 228 ಸದಸ್ಯರಿದ್ದು ಇದರಲ್ಲಿ 72 ಸದಸ್ಯರು ಹೊಸದಾಗಿ ಆರಂಭಗೊಂಡಿರುವ ಶಾಂತಿನಗರ ಹಾಲು ಉತ್ಪಾದಕರ ಸಹಕಾರ ಸಂಘದ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಈ ಸದಸ್ಯರಿಗೆ ಎರಡು ಸಲ ಮನವಿ ಮಾಡಿದರೂ ಷೇರು ಹಣ ವಾಪಸ್ಸು ಪಡೆದಿರುವುದಿಲ್ಲ. ಆದ್ದರಿಂದ ಇವರ ಷೇರು ಹಣವನ್ನು ಕ್ಷೇಮನಿಧಿಗೆ ವರ್ಗಾಯಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.

LEAVE A REPLY

Please enter your comment!
Please enter your name here