ಪುತ್ತೂರು; ಪುತ್ತೂರು ಪ್ರಥಮ ದರ್ಜೆ ಮಹಿಳಾ ಕಾಲೇಜು ಕಟ್ಟಡವನ್ನು ಡಿಸೆಂಬರ್ ನೊಳಗೆ ಪೂರ್ಣಗೊಳಿಸುವಂತೆ ಶಾಸಕ ಅಶೋಕ್ ರೈ ಅವರು ಗುತ್ತಿಗೆದಾರರಿಗೆ ಖಡಕ್ ಸೂಚನೆಯನ್ನು ನೀಡಿದ್ದಾರೆ.
ಕಾಲೇಜು ಕಟ್ಟಡ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಕೆಲದಿನಗಳ ಹಿಂದೆ ಪೋಷಕರು ಶಾಸಕರಲ್ಲಿ ದೂರು ನೀಡಿದ್ದರು. ಕಟ್ಟಡ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವ ಕಾರಣದಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತದೆ ಎಂದು ಪೋಷಕರು ಶಾಸಕರಲ್ಲಿ ತಿಳಿಸಿದ್ದರು. ಸದ್ಯ ಹಳೆಯ ತಾಲೂಕು ಕಚೇರಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮುಂದಿನ ಡಿಸೆಂಬರ್‌ನಲ್ಲಿ ಕಾಮಗಾರಿ ಪೂರ್ಣಗೊಳಿಸಿ ತರಗತಿ ನಡೆಸಲು ಅನುವು ಮಾಡಿಕೊಡುವಂತೆಯೂ ಶಾಸಕರಿಗೆ ಮನವಿ ಮಾಡಲಾಗಿತ್ತು.

ಕಾಲೇಜು ಅಭಿವೃದ್ದಿ ಸಮಿತಿ, ಗುತ್ತಿಗೆದಾರರ ಸಭೆ
ಈ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕರು ಸೋಮವಾರ ತಮ್ಮ ಕಚೇರಿಯಲ್ಲಿ ಕಾಲೇಜು ಅಭಿವೃದ್ದಿ ಸಮಿತಿ, ರಕ್ಷಕ ಶಿಕ್ಷಕ ಸಮಿತಿ, ಪೋಷಕರು ಹಾಗೂ ಗುತ್ತಿಗೆದಾರರ ಸಭೆಯನ್ನು ಕರೆದು ಕಾಲೇಜು ಕಟ್ಟಡ ಕಾಮಗಾರಿ ವಿಚಾರದಲ್ಲಿ ಮಾಹಿತಿ ಪಡೆದುಕೊಂಡರು. ಈ ವೇಳೆ ಮಾತನಾಡಿದ ಶಾಸಕರು ಗುತ್ತಿಗೆದಾರರ ಲೋಪವೂ ಕಾಮಗಾರಿ ವಿಳಂಬವಾಗಲು ಕಾರಣವಾಗಿದೆ. ಯಾವುದೇ ಕಾರಣಕ್ಕೆ ಇನ್ನು ಮುಂದೆ ಕಾಮಗಾರಿ ಆಮೆಗತಿಯಲ್ಲಿ ಸಾಗಬಾರದು. ನಿಮಗೆ ಕಟ್ಟಡ ನಿರ್ಮಾಣದಲ್ಲಿ ವೇಗತೆಯನ್ನು ಪಡೆದುಕೊಳ್ಳಲು ಸಾಧ್ಯವಾಗದೇ ಇದಲ್ಲಿ ನನಗೆ ತಿಳಿಸಿ ಇನ್ನು ಉಳಿದ ಕಾಮಗಾರಿಯನ್ನು ಬೇರೆಯವರಿಗೆ ನೀಡಬೇಕಾಗುತ್ತದೆ. ನಮಗೆ ಯಾರು ಕೆಲಸ ಮಾಡುತ್ತಾರೆ ಎಂಬುದು ಮುಖ್ಯವಲ್ಲ ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕು. ಈಗ ಇರುವ ಕಾಲೇಜು ಕಟ್ಟಡ ಅಷ್ಟೊಂದು ಯೋಗ್ಯವಲ್ಲದ ಕಟ್ಟಡವಾಗಿದೆ ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು.
7.5 ಕೋಟಿ ಅನುದಾನ
ಕಾಲೇಜು ಕಟ್ಟಡ ನಿರ್ಮಾಣಕ್ಕೆ ಈಗಾಗಲೇ 7.5 ಕೋಟಿ ಅನುದಾನ ಬಿಡುಗಡೆಯಾಗಿದೆ. ಅನುದಾನದ ಕೊರತೆಯಿಲ್ಲ. ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದು ಇಲ್ಲಿ ಸಮಸ್ಯೆಯನ್ನು ಸೃಷ್ಟಿಸಿದೆ ಎಂದ ಶಾಸಕರು ಮುಂದಿನ ಡಿಸೆಂಬರ್‌ನಲ್ಲಿ ಕಾಮಗಾರಿಯನ್ನು ಪೂರ್ಣ ಮಾಡಬೇಕು, ಅದರಲ್ಲಿ ಯಾವುದೇ ರಾಜಿಯಿಲ್ಲ ಎಂದು ಶಾಸಕರು ಸೂಚನೆ ನೀಡಿದರು.
ಇಂಜನಿಯರ್‌ಗೆ ಕರೆ ಮಾಡಿದ ಶಾಸಕರು
ಕರ್ನಾಟಕ ಗೃಹ ಮಂಡಳಿ ಇಂಜನಿಯರ್‌ಗೆ ಕರೆ ಮಾಡಿದ ಶಾಸಕರು ಕಟ್ಟಡ ಕಾಮಗಾರಿಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಪ್ರಶ್ನಿಸಿದರು. ಈ ವೇಳೆ ಮಾತನಾಡಿದ ಇಂಜಿನಿಯರ್ ಮುಂದಿನ ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆಯನ್ನು ನೀಡುವುದಾಗಿ ಶಾಸಕರಿಗೆ ಭರವಸೆ ನೀಡಿದರು.
ಮುಂದಿನ ಶೈಕ್ಷಣಿಕ ವರ್ಷದಿಂದ ವಿಜ್ಞಾನ ಕೋರ್ಸು ಆರಂಭ
ಕಾಲೇಜು ಕಟ್ಟಡ ಡಿಸೆಂಬರ್‌ನಲ್ಲಿ ಪೂರ್ಣವಾಗಲಿದ್ದು, ಕೊಠಡಿಯ ಸಮಸ್ಯೆ ನಿವಾರಣೆಯಾಗಲಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ವಿಜ್ಞಾನ ಕೋರ್ಸು ( ಸೈನ್ಸ್) ಆರಂಭ ಮಾಡುವಂತೆ ಆಡಳಿತ ಸಮಿತಿಗೆ ಶಾಸಕರು ಸೂಚನೆಯನ್ನು ನೀಡಿದರು. ಅತ್ಯುತ್ತಮ ರೀತಿಯಲ್ಲಿ ಪ್ರಯೋಗ ಶಾಲೆಯನ್ನು ಪ್ರಾರಂಭಿಸಲಾಗುವುದು ಎಂದು ಶಾಸಕರು ಈ ವೇಳೆ ತಿಳಿಸಿದರು.
ಸಭೆಯಲ್ಲಿ ಕಾಲೇಜಿನ ಕಾರ್ಯಾಧ್ಯಕ್ಷ ಝೇವಿಯರ್ ಡಿಸೋಜಾ, ಉಪಾಧ್ಯಕ್ಷ ರಕ್ಷಕ ಶಿಕ್ಷಕ ಸಮಿತಿ ಅಧ್ಯಕ್ಷ ಚನಿಯಪ್ಪ ನಾಯ್ಕ್, ಸದಸ್ಯರಾದ ಶ್ರೀಧರ್ ರೈ, ಪ್ರೇಮಲತಾ, ಪ್ರಭಾರ ಪ್ರಾಂಶುಪಾಲ ಸ್ಟೀವನ್ ಕ್ವಾಟ್ರಸ್, ಉಪನ್ಯಾಸಕರಾದ ರವಿಚಂಧ್ರ, ಹರೀಶ್ ಚಂದ್ರ, ಡಾ. ಸುಕೇಶ್ ಪಿ ಹಾಗೂ ಗುತ್ತಿಗೆದಾರ ಅಶ್ರಫ್ ಉಪಸ್ಥಿತರಿದ್ದರು.