ಪುತ್ತೂರು: ಆಯುಷ್ಮಾನ್ ಆರೋಗ್ಯ ಕೇಂದ್ರ ಮೊಗಪ್ಪೆ, ನೆಟ್ಟಾರು, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಳ್ತಿಗೆ ಇಲ್ಲಿ “ಸ್ವಸ್ಥ ನಾರಿ, ಸಶಕ್ತ ಪರಿವಾರ” ಅಭಿಯಾನ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರು ಹಾಗೂ ಮಹಿಳೆಯರು ಗಿಡಕ್ಕೆ ನೀರು ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆಯನ್ನು ನೀಡಿದರು.
ಈ ಅಭಿಯಾನವು 17-09-2025 ರಿಂದ 02-10-2025ರವರೆಗೆ ಎಲ್ಲಾ ಆಯುಷ್ಮಾನ್ ಆರೋಗ್ಯ ಕೇಂದ್ರಗಳಲ್ಲಿ ನಡೆಯಲಿದ್ದು ಇದರಲ್ಲಿ ಮುಖ್ಯವಾಗಿ ಮಹಿಳೆಯರು, ಹದಿಹರೆಯದವರು ಮತ್ತು ಮಕ್ಕಳ ಹಲವು ಆರೋಗ್ಯ ಚಟುವಟಿಕೆಗಳನ್ನು ಆಯ್ಕೆ ಮಾಡಲಾಗಿದ್ದು ರಕ್ತದೊತ್ತಡ, ಮಧುಮೇಹ, ರಕ್ತಹೀನತೆ, ಕ್ಯಾನ್ಸರ್, ಕ್ಷಯರೋಗ, ಪೌಷ್ಠಿಕಾಹಾರ, ಮಾನಸಿಕ ಆರೋಗ್ಯ, ಮುಟ್ಟಿನ ನೈರ್ಮಲ್ಯ, ತಾಯಿ-ಮಕ್ಕಳ ಆರೋಗ್ಯ, ಚುಚ್ಚುಮದ್ದು ಮುಂತಾದ ಹಲವು ವಿಷಯಗಳ ತಪಾಸಣೆ ಮತ್ತು ಮಾಹಿತಿ ನೀಡಲಾಗುವುದು ಎಂದು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಅಕ್ಷತಾ ಕೆ ಇವರು ಮಾಹಿತಿ ನೀಡಿದರು.
ಈ ಅಭಿಯಾನವು ಮಹಿಳಾ ಆರೋಗ್ಯ ಮತ್ತು ಪೋಷಣೆಯನ್ನು ಬಲಪಡಿಸುವ ಮೂಲಕ ಕುಟುಂಬವನ್ನು ಸಶಕ್ತಗೊಳಿಸುವ ಅದ್ಭುತ ಅವಕಾಶವಾಗಿದೆ ಎಂದು ಪಂಚಾಯತ್ ಸದಸ್ಯರಾದ ಶ್ಯಾಂಸುಂದರ ರೈ ಅವರು ತಿಳಿಸಿದರು. ಇನ್ನೋರ್ವ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಕೆಮ್ಮಾರ ಇವರು ಅಭಿಯಾನಕ್ಕೆ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯಾದ ಸ್ನೇಹಪ್ರಭಾ, ಆಶಾ ಕಾರ್ಯಕರ್ತೆಯಾದ ರೇವತಿ, ಬೇಬಿ, ಮಹಿಳೆಯರು, ಮಕ್ಕಳು ಸೇರಿದ್ದರು. ಈ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯಾದ ಬೇಬಿ ಎಲ್ಲರನ್ನೂ ಸ್ವಾಗತಿಸಿ ಸಮುದಾಯ ಅಧಿಕಾರಿಯಾದ ಲೀಲಾವತಿ ವಂದಿಸಿದರು.