ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಸಾಹಿತ್ಯ ಕಲರವ – 2025

0

ಪುತ್ತೂರು : ಭಾಷೆಯಲ್ಲಿ ಸಂವಹನ ಕೌಶಲ್ಯವನ್ನು ವೃದ್ಧಿಸಿಕೊಳ್ಳುವ ಮುಖೇನ ಭಾಷೆಯ ಕಂಪನ್ನು ಹರಡಬೇಕು. ತಾನು ಹೇಳುವ ಮಾತು ಕೇಳುಗನಿಗೆ, ವೀಕ್ಷಕರಿಗೆ ಇಷ್ಟವಾದರೆ ಆ ಮಾತಿಗೊಂದು ಅರ್ಥ ಬರುತ್ತದೆ. ಭಾಷೆಯ ಹಿಡಿತದ ಜೊತೆಗೆ ಕಲಿಯುವ ತುಡಿತ ಇದ್ದಾಗಲೇ ವೃತ್ತಿ ಬದುಕು ಕೈಗೊಡುತ್ತದೆ ಎಂದು ನಟ, ಹಿನ್ನಲೆ ಧ್ವನಿ ಕಲಾವಿದ ಬಿಗ್ ಬಾಸ್ ಧ್ವನಿಯಂದೇ ಪರಿಚಿತರಾದ ಬಡೆಕ್ಕಿಲ ಪ್ರದೀಪ್ ಅವರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜು ಸವಣೂರು ನಲ್ಲಿ ಸಾಹಿತ್ಯ ಸಂಘ ಮತ್ತು ಐಕ್ಯುಎಸಿ ಘಟಕದ ಸಂಯೋಜನೆಯಲ್ಲಿ ಅಯೋಜಿಸಿದ ಸಾಹಿತ್ಯ ಕಲರವ 2025 ಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಇದ್ದರಷ್ಟೇ ಪ್ರತಿಭೆಗೆ ಮನ್ನಣೆ ದೊರೆಯುತ್ತದೆ. ಕಲೆ ಯಾರ ಸೊತ್ತು ಅಲ್ಲ ಕಲಿಯುವ ಅಧಮ್ಯ ಹಂಬಲವನ್ನು ಇಟ್ಟುಕೊಂಡು ನಿರ್ದಿಷ್ಟ ಗುರಿಯ ಜೊತೆಗೆ ಸಾಗಬೇಕು. ಮಾಧ್ಯಮ, ಎಲೆಕ್ಟ್ರಾನಿಕ್ಸ್ ಮಾಧ್ಯಮಗಳ ತಮ್ಮ ಅನುಭವ ಹಂಚಿಕೊಳ್ಳುತ್ತಾ ವಿದ್ಯಾರ್ಥಿಗಳಿಗೆ ನಟನೆ,ಹಿನ್ನಲೆ ಧ್ವನಿಗಳ ಮಹತ್ವವನ್ನು ವಿವರಿಸಿದರು. ಸಿನಿಮಾ, ಧಾರವಾಹಿಗಳು, ಮನೋರಂಜನೆಯ ತಾಣವಾಗಿದ್ದು ಬೇಕಾದಷ್ಟು ವಿಪುಲ ಅವಕಾಶಗಳಿವೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಗಳಿಗೆ ಸೂಕ್ತ ಮಾರ್ಗದರ್ಶನ ಪಡೆದು ವೇದಿಕೆಯನ್ನು ಅವಕಾಶವಾಗಿ ಬಳಸಿಕೊಳ್ಳುವಂತೆ ಹೇಳಿದ್ದಲ್ಲದೇ ಕನ್ನಡ ಸೇರಿದಂತೆ ಆನೇಕ ಭಾಷೆಗಳನ್ನು ಕಲಿಯುವುದು ಇಂದಿನ ತಲೆಮಾರಿಗೆ ಸುಲಲಿತ. ಭಾಷೆಯ ಉಳಿಯುವಿಕೆಗೆ ಭಾಷೆಯನ್ನು ಅರ್ಥೈಸಿ ಸಂವಹನ ಮಾಡುವ ಬಗೆ ಹೇಗೆ ಎಂಬ ಅರಿವು ಇರಬೇಕಾಗುತ್ತದೆ. ತಪ್ಪು ಉಚ್ಚಾರಣೆಯ ಸಮಯದಲ್ಲಿ ತಪ್ಪನ್ನು ಗುರುತಿಸಿ ದೋಷತೆಯನ್ನು ತಿದ್ದಿಕೊಳ್ಳುವ ಮುಖೇನ ಸಂವಹನ, ನಿರೂಪಣೆ, ಹಿನ್ನಲೆ ಧ್ವನಿ ಕಲಾವಿದನಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು, ಸವಣೂರು ಅದರ ಆಡಳಿತ ಅಧಿಕಾರಿ ಅಶ್ವಿನ್ ಎಲ್ ಶೆಟ್ಟಿ ಮಾತನಾಡಿ, ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲ ಕಾರ್ಯನ್ಮೂಖವಾಗಬೇಕಾಗಿದೆ. ಈ ನಿಟ್ಟಿನಲ್ಲಾದರೂ ವಿದ್ಯಾರ್ಥಿಗಳಿಗೆ ಭಾಷೆಯ ಅರಿವು ಮೂಡಲಿ. ಮಾಧ್ಯಮ ಭಾಷೆಗೂ ಮನೆ ಭಾಷೆಗೂ ಅಜಗಜಾಂತರ ವ್ಯತ್ಯಾಸವಿದ್ದು ಹೊರದೇಶದಲ್ಲಿದ್ದ ನನಗೆ ಮಾತೃಭಾಷೆಯ ಕಲಿಕೆಗೆ ಹೆಚ್ಚಿನ ಅವಕಾಶ ಸಿಗಲಿಲ್ಲ. ಈ ನಿಟ್ಟಿನಲ್ಲಿ ಇಂದಿನ ಪೀಳಿಗೆ ಅದೃಷ್ಟಶಾಲಿಗಳಾಗಿದ್ದು ಕನ್ನಡ ಕಲರವದ ಮೂಲಕ ಸಾಹಿತ್ಯದ ಅಭಿರುಚಿಯು ಪಸರಿಸಲಿ ಎಂದರು.

ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜು ಸವಣೂರು ಇದರ ಉಪಪ್ರಾಂಶುಪಾಲ ಮತ್ತು ಕನ್ನಡ ವಿಭಾಗ ಮುಖ್ಯಸ್ಥ ಶೇಷಗಿರಿ ಎಂ. ಮಾತನಾಡಿ ನಮ್ಮ ವಿಭಾಗವೂ ಆನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಶೈಕ್ಷಣಿಕ ಚಟುವಟಿಕೆಗಳ ಮಾಹಿತಿಯನ್ನು ನೀಡುತ್ತಾ ಸಾಹಿತ್ಯ ಕಲರವದ ಮುಖೇನ ನಾಡಿಗೆ ಸಾಹಿತಿ, ಕವಿ, ನಿರೂಪರು, ಕಥೆಗಾರರು ಈ ಸಾಹಿತ್ಯ ಸಂಘದ ಮುಖೇನ ಹುಟ್ಟಿ ಬರಲಿ ಎಂದು ಹಾರೈಸಿದರು.


ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜು ಸವಣೂರು ಇದರ ಪ್ರಾಂಶುಪಾಲೆ ರಾಜಲಕ್ಷ್ಮಿ ಎಸ್., ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಆಳ್ವ ಹಾಗೂ ಐಕ್ಯುಎಸಿ ಘಟಕ ಸಂಯೋಜಕರು ಹಾಗೂ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜು ಇದರ ಗಣಕ ವಿಭಾಗದ ಉಪನ್ಯಾಸಕಿ ಕೌಸಲ್ಯ ಹಾಗೂ ಸಾಹಿತ್ಯ ಸಂಘಟಕರಾದ ಕನ್ನಡ ವಿಭಾಗದ ಉಪನ್ಯಾಸಕ ಗಿರೀಶ್ ಭಟ್ ಕೊವೆತ್ತಂಡ ಹಾಗೂ ಇಂಗ್ಲೀಷ್ ವಿಭಾಗದ ಉಪನ್ಯಾಸಕಿ ವಾಗ್ದೇವಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘಟಕರಾದ ಪ್ರಸ್ತುತಿ ಎಸ್.ಎಂ ಹಾಗೂ ಪವಿತ್ರ ಕೆ ಉಪಸ್ಥಿತರಿದ್ದರು. ತೃತೀಯ ಬಿ.ಸಿ.ಎ ವಿದ್ಯಾರ್ಥಿನಿ ಪ್ರಸ್ತುತಿ ಸ್ವಾಗತಿಸಿ ದ್ವಿತೀಯ ಬಿ.ಸಿ.ಎ ವಿದ್ಯಾರ್ಥಿನಿ ಪವಿತ್ರ ಧನ್ಯವಾದ ಸಮರ್ಪಿಸಿದರು. ತೃತೀಯ ಬಿ.ಎ ವಿದ್ಯಾರ್ಥಿನಿ ಕಲ್ಪನಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here