






ಪುತ್ತೂರು: ಪ್ರಗತಿ ಸ್ಟಡಿ ಸೆಂಟರ್ ನಿಂದ ಸೆ.14ರಿಂದ 16ರವರೆಗೆ ಚಿಕ್ಕಮಗಳೂರು ಜಿಲ್ಲೆಯ ಶೋಲಾ ಅರಣ್ಯದಲ್ಲಿ ಆಯೋಜಿಸಲಾಗಿದ್ದ ಚಾರಣದಲ್ಲಿ ಸಂಸ್ಢೆಯ 26 ವಿದ್ಯಾರ್ಥಿಗಳು, ಸಂಸ್ಢೆಯ ಸಿಬ್ಬಂದಿ ನಿಶ್ಮಿತಾ ಹಾಗೂ ಶಾಲಾ ಸಂಚಾಲಕರಾದ ಗೋಕುಲ್ ನಾಥ್ ಪಿವಿ ಭಾಗವಹಿಸಿದ್ದರು. ಈ ಚಾರಣದ ಅನುಭವದ ಕುರಿತು ಸಂಸ್ಢೆಯ ಮಕ್ಕಳು ಬರೆದ ಲೇಖನ ಹೀಗಿದೆ..




ಕಾಲೇಜಿನಿಂದ ಹೊರಟ ತಂಡ ಉಪ್ಪಿನಂಗಡಿ ಇಳಂತಿಲ ಮಾರ್ಗವಾಗಿ ಉಜಿರೆ ತಲುಪಿ, ಅಲ್ಲಿ ಬಂದಾರು ಗ್ರಾಮದಲ್ಲಿರುವ ಕಲ್ಲರ್ಬಿ ಹೊಳೆಯ ವೀಕ್ಷಣೆ ನಡೆಸಿ, ಮುಂದುವರಿದು
ಏರ್ಮಾಯಿ ಫಾಲ್ಸ್ ತಲುಪಿ, ಅಲ್ಲಿಂದ ಎರಡು ತಂಡಗಳಾಗಿ ಜೀಪಿನಲ್ಲಿ ಫಾಲ್ಸ್ ಕಡೆಗೆ ಪ್ರಯಾಣಿಸಿ, ಸುಮಾರು 500 ಮೀ ಕಾಲ್ನಡಿಗೆ ಮೂಲಕ ಫಾಲ್ಸ್ ತಲುಪಲಾಯಿತು. ಇಲ್ಲಿ 1 ಗಂಟೆಗಳ ಕಾಲ ನೀರಿನಲ್ಲಿ ಆಟವಾಡಿ, ಫೋಟೋ ತೆಗೆದು ನಂತರ ಎಲ್ಲರೂ ಅಲ್ಲಿಂದ ಹೊರಟು, ಜೀಪಿನಲ್ಲಿ ಬರುವಾಗ ಮಧ್ಯ ದಾರಿಯಲ್ಲಿ ಒಂದು ಚಿಕ್ಕ ಹೊಳೆಗೆ ಇಳಿದು ಫೋಟೋ ಕ್ಲಿಕ್ಕಿಸಿ ಮತ್ತೆ ಜೀಪ್ ಮೂಲಕ ನಮ್ಮ ವಾಹನ ಇರುವಲ್ಲಿಗೆ ಬಂದು ತಲುಪಿದೆವು.







ಅದಾಗಲೇ ಸಮಯ ಸಂಜೆ 5.30 ಆಗಿದ್ದು, ಅಲ್ಲೇ ಇದ್ದ ಹೋಟೆಲೊಂದರಲ್ಲಿ ಚಹಾ, ಕಾಫಿ, ತಿಂಡಿ ತಿಂದು ಹೋಂಸ್ಟೇ ಕಡೆಗೆ ತೆರಳಿದೆವು. ಚಾರ್ಮಾಡಿ ಘಾಟ್ ಮುಖಾಂತರ ಕೊಟ್ಟಿಗೆಹಾರ ತಲುಪಿ ಕಳಸ ಮಾರ್ಗವಾಗಿ ಜಾವಳಿ ಸುಂಕಸಾಲೆಯಲ್ಲಿರುವ ಸುದರ್ಶನ್ ಹೋಂ ಸ್ಟೇ ತಲುಪಿ, ಸ್ನಾನ ಮುಗಿಸಿ, ಎಲ್ಲರೂ ಊಟ ಮುಗಿಸಿದೆವು. ಬಿರಿಯಾನಿ, ರೈಸ್, ಚಿಕನ್ ಕರಿ, ಚಪಾತಿ ಎಲ್ಲವೂ ರುಚಿಯಾಗಿತ್ತು. ಊಟದ ಬಳಿಕ ಕ್ಯಾಂಪ್ ಫೈಯರ್, ಹರಟೆ, ಹಾಡು, ಕುಣಿತ ಎಲ್ಲವನ್ನು ಮುಗಿಸಿ 11ರವೇಳೆಗೆ ನಿದ್ರೆಗೆ ಜಾರಿದೆವು.


ಸೆ.15 ರಂದು ಬೆಳಗ್ಗೆದ್ದು ಸ್ನಾನ ಮುಗಿಸಿ, ಕೆಲವರು ಶಟಲ್ ಆಡಿದರು. 8ರ ಹೊತ್ತಿಗೆ ತಿಂಡಿ ಮುಗಿಸಿ, ಬಂಡಾಜೆ ಫಾಲ್ಸ್ ಗೆ ಚಾರಣಕ್ಕೆ ಹೊರಟೆವು, ಬಲ್ಲಾಳ ರಾಯನಕೋಟೆ ಎಂಟ್ರಿ ಪಾಯಿಂಟ್ ನಿಂದ ಎಲ್ಲರೂ ಗುಂಪಾಗಿ ಬಂಡಾಜೆ ಫಾಲ್ಸ್ ಕಡೆಗೆ ತೆರಳಿದೆವು. ದಾರಿಯಲ್ಲಿ ಹೋಗುತ್ತಾ ಕ್ಯಾಮರದಲ್ಲಿ ಫೋಟೋವನ್ನು ತೆಗೆದು, ಮಾತನಾಡುತ್ತಾ ಗುಡ್ಡದ ದುರ್ಗಮ ದಾರಿಯನ್ನು ಹೇಗೋ ಹತ್ತಿ ಇಳಿದು ಮಳೆಯ ತಂಪನ್ನು ಅನುಭವಿಸುತ್ತಾ 9 ಕಿಲೋಮೀಟರ್ ನಡೆದು ಬಲ್ಲಾಳರಾಯನ ದುರ್ಗಾ ಕೋಟೆ, ರೋರಿಂಗ್ ಲಯನ್ ವೀವ್ಹ್ ಪಾಯಿಂಟ್, ಟೋಪಿ ಬೆಟ್ಟದ ಮೂಲಕ 4250 ಅಡಿ ಎತ್ತರದಲ್ಲಿರುವ ಬಂಡಾಜೆ ಫಾಲ್ಸ್ ತಲುಪಿದೆವು, ಜೊತೆಯಲ್ಲಿ ತೆಗೆದುಕೊಂಡು ಹೋಗಿದ್ದ ಊಟವನ್ನು ಮುಗಿಸಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು, ಅಲ್ಲಿಂದ 100 ಮೀಟರ್ ಹತ್ತಿರದಲ್ಲಿರುವ ಬಂಡೆಕಲ್ಲುಗಳಿಂದ ಕೂಡಿದ ತಂಪಾದ ಜಾಗದಲ್ಲಿ ಹೋಗಿ ಕುಳಿತುಕೊಂಡು, ಅಲ್ಲಿಂದ ಹಿಂದಿರುಗಿ ಹೊರಟು 5.30 ಸುಮಾರಿಗೆ ಬಲ್ಲಾಳರಾಯನ ಕೋಟೆಗೆ ತೆರಳಿದೆವು, ಆ ಬಳಿಕ 6200 ಅಡಿ ಎತ್ತರದಲ್ಲಿರುವ ರಾಣಿ ಝರಿ ವೀಕ್ಷಿಸಿ, 6.30 ರವೇಳೆಗೆ ಹೋಂ ಸ್ಟೇಗೆ ತಲುಪಿದೆವು.ದಣಿದ ದೇಹಕ್ಕೆ ಹೋಮ್ ಸ್ಟೆ ವತಿಯಿಂದ ನೀಡಲಾದ ಚಹಾ ತಿಂಡಿ ಒಂದಿಷ್ಟು ಮುದ ನೀಡಿತ್ತು. ಸ್ನಾನ ಮುಗಿಸಿ ವಿಶ್ರಾಂತಿ ಪಡೆದು, ರಾತ್ರಿ ಊಟ ಮುಗಿಸಿ ಮತ್ತೆ ಕ್ಯಾಂಪ್ ಫೈರ್, ಮೋಜು ಮಸ್ತಿ ಹಾಡು ಕುಣಿತ ಮುಗಿಸಿ ಎಲ್ಲರು ನಿದ್ರೆಗೆ ಜಾರಿದೆವು.

ಸೆ.16 ರಂದು 7.00 ಗಂಟೆಗೆ ಎಲ್ಲರೂ ಎದ್ದು ತಿಂಡಿ ಮುಗಿಸಿ, 8.30ಕ್ಕೆ ಅಲ್ಲಿಂದ ಹೊರಟು ದೇವರ ಮನೆ ಕಡೆ ಪ್ರಯಾಣ ಬೆಳೆಸಿದೆವು,ದಾರಿಯಲ್ಲಿ ಒಂದು ಗುಡ್ಡಕ್ಕೆ ಹೋಗಿ ಪುನಃ ಅಲ್ಲಿಂದ ಎತ್ತಿನಭುಜಕ್ಕೆ ಪ್ರಯಾಣ ಬೆಳೆಸಿದೆವು. ಎತ್ತಿನ ಭುಜದ ಎಂಟ್ರಿ ಪಾಯಿಂಟ್ ನಲ್ಲಿ ಮಧ್ಯಾಹ್ನದ ಊಟ ಮುಗಿಸಿ ಮುಗಿಸಿ ಚಾರಣಕ್ಕೆ ಹೊರೆಟೆವು. 5 ಕಿಲೋಮೀಟರ್ ನ ಚಾರಣದ ದಾರಿ ದೊಡ್ಡ ಸಾಹಸವೇ ಎಂಬಂತಿತ್ತು.ಎತ್ತಿನ ಭುಜ ತಲುಪಿ ಅಲ್ಲಿ ಒಂದು ಗಂಟೆ ಸಮಯ ಕಳೆದು ಫೋಟೋ ತೆಗೆಸಿಕೊಂಡು ನಂತರ ಹಿಂದಿರುಗುವ ವೇಳೆ ಸಮಯ 4 ಗಂಟೆ. ಅಲ್ಲಿಯೇ ಇದ್ದ ಒಂದು ಅಂಗಡಿಯೊಂದರಲ್ಲಿ ಚಹಾ ಕುಡಿದು, ಪುತ್ತೂರಿನ ಕಡೆ ಪ್ರಯಾಣ ಬೆಳೆಸಿದೆವು. ಕ್ಷೇಮವಾಗಿ ಮನೆ ತಲುಪಿದಾಗ ಮನೆ ಮಂದಿಯ ನಿಟ್ಟುಸಿರುನೊಂದಿಗೆ ಚಾರಣಕ್ಕೆ ಪೂರ್ಣ ವಿರಾಮವನ್ನಿಡಲಾಯಿತು.
















