ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಂಧದ ಮರ ಸಾಗಾಟ ಪ್ರಕರಣಕ್ಕೆ ಸುಮಾರು 55 ವರ್ಷಗಳಿಂದ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಸಂಪ್ಯ ಪೊಲೀಸರು ಕೇರಳದಿಂದ ಬಂಧಿಸಿದ್ದಾರೆ.
ಕೇರಳ ರಾಜ್ಯದ ಮಲಪುರಂ ಜಿಲ್ಲೆಯ ಬೆಳ್ಳಿಪರಂಬ ಕೊಂಡೊಟ್ಟಿ ನಿವಾಸಿ 78 ವರ್ಷದ ಪ್ರಾಯದ ವಯೋವೃದ್ದ ಸಿ.ಆರ್ ಚಂದ್ರನ್ ಬಂಧಿತ ಆರೋಪಿ.
1970ರಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಂಧದ ಮರ ಸಾಗಾಟದ ವೇಳೆ ಸಿ.ಆರ್ ಚಂದ್ರನ್ ಮತ್ತು ಇನ್ನೋರ್ವ 1ನೇ ಆರೋಪಿಯ ಬಂಧನವಾಗಿತ್ತು. ಬಳಿಕ ಅವರು ಜಾಮೀನು ಮೂಲಕ ಬಿಡುಗಡೆಗೊಂಡಿದ್ದರು. ಆದರೆ ಬೆಳವಣಿಗೆಯಲ್ಲಿ 1ನೇ ಆರೋಪಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿದ್ದರಿಂದ ಅವರ ಕೇಸು ಮುಗಿದಿತ್ತು. ಆದರೆ 2ನೇ ಆರೋಪಿ ಚಂದ್ರನ್ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ಈ ಕುರಿತು ನ್ಯಾಯಾಲಯ ಆರೋಪಿಯ ಮೇಲೆ ವಾರಂಟ್ ಜಾರಿ ಮಾಡಿತ್ತು.
ಆರೋಪಿಯ ಪತ್ತೆಗೆ ಪೊಲೀಸ್ ಉಪ ವಿಭಾಗ ಪುತ್ತೂರು ಉಪ ಅಧೀಕ್ಷಕರಾದ ಅರುಣ್ ನಾಗೇಗೌಡ, ಪೊಲೀಸ್ ಠಾಣಾ ನಿರೀಕ್ಷಕ ರವಿ ಬಿ. ಎಸ್ ಮತ್ತು ಉಪ ನೀರಿಕ್ಷಕ ಜಂಬೂ ರಾಜ್. ಬಿ.ಮಹಾಜನ್ ಮತ್ತು ಸುಷ್ಮಾ ಜಿ ಭಂಡಾರಿ ರವರ ನಿರ್ದೇಶನದಲ್ಲಿ ಠಾಣಾ ಎ.ಎಸ್ ಐ ಪರಮೇಶ್ವರ ಗೌಡ, ಹೆಡ್ ಕಾನಸ್ಟೇಬಲ್ ಭವಿತ್ ರೈ, ಕಾನ್ಸ್ಟೇಬಲ್ ಗಳಾದ ಯುವರಾಜ ರವರನ್ನು ಆರೋಪಿಯ ಪತ್ತೆ ಕಾರ್ಯಕ್ಕೆ ನೇಮಕ ಮಾಡಲಾಗಿತ್ತು. ಅದರಂತೆ ಕೇರಳ ರಾಜ್ಯದಲ್ಲಿ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜಾರುಪಡಿಸಿರುವುದಾಗಿದೆ.