ಮೌಲ್ಯಯುತ ಸೇವೆ ಆದ್ಯತೆಯಾಗಲಿ – ಸಂಜೀವ ನಾಯಕ್
ಪುತ್ತೂರು: ಬೆಂಗಳೂರಿನ ನ್ಯಾಚುರಲ್ ಟ್ರೈನಿಂಗ್ ಅಕಾಡೆಮಿಯಲ್ಲಿ ಸ್ಕಿನ್, ಹೇರ್, ಮೇಕಪ್ ಹಾಗೂ ನೈಲ್ ಆರ್ಟ್ ನಲ್ಲಿ ವಿಶೇಷ ಪರಿಣತಿ ಪಡೆದಿರುವ ಮಾತ್ರವಲ್ಲದೇ ಮನು ಅಕಾಡೆಮಿ ಮಂಗಳೂರಿನಲ್ಲೂ ತರಬೇತಿ ಪಡೆದುಕೊಂಡಿರುವ ಅಂಕಿತಾ ಕೌಶಿಕ್ ಇವರ ಮಾಲಕತ್ವದ ಅಂಕಿತಾ’ಸ್ ಬ್ಯೂಟಿ ಲಾಂಚ್ ನೆಹರುನಗರ ಪಟ್ಲ ಸಂಕೀರ್ಣದಲ್ಲಿ ಸೆ.22ರಂದು ಧಾರ್ಮಿಕ ಕಾರ್ಯಕ್ರಮದೊಂದಿಗೆ ಶುಭಾರಂಭಗೊಂಡಿತು.

ಮಳಿಗೆಯ ಉದ್ಘಾಟನೆಯನ್ನು ಅಂಕಿತಾ ರವರ ಹೆತ್ತವರು ಶೇಖರ್ ಪಟ್ಲ, ಪ್ರೇಮಾ ಶೇಖರ್ ಹಾಗೂ ಅತ್ತೆ ನಿವೃತ್ತ ಬಿಎಸ್ಎನ್ಎಲ್ ಉದ್ಯೋಗಿ ಸುಜಾತಾ ಸುಂದರ್ ಜೊತೆಯಾಗಿ ರಿಬ್ಬನ್ ಕತ್ತರಿಸೋ ಮೂಲಕ ನೆರವೇರಿಸಿದರು. ಆ ಬಳಿಕ ಅತಿಥಿಗಳ ಮುಖೇನ ದೀಪ ಪ್ರಜ್ವಲನೆ ಕಾರ್ಯ ನೆರವೇರಿತು. ಕಲ್ಲೇಗ ರೂರಲ್ ಡೆವಲಪ್ಮೆಂಟ್ ಇದರ ಅಧ್ಯಕ್ಷ ಸಂಜೀವ ನಾಯಕ್ ದೀಪ ಪ್ರಜ್ವಲನೆ ನೆರವೇರಿಸಿ ಬಳಿಕ ಮಾತನಾಡಿ, ಪಟ್ಲ ಕುಟುಂಬ ಸದಸ್ಯರು ಬಹಳ ಆತ್ಮೀಯರು. ನಾವೆಲ್ಲರೂ ಕಲ್ಲೇಗ ಕಲ್ಕುಡ ಕಲ್ಲುರ್ಟಿ ದೈವದ ಸೇವೆಯನ್ನು ಜೊತೆಗೂಡಿಕೊಂಡು ಮಾಡಿಕೊಂಡು ಬಂದವರು. ಪಟ್ಲ ಕುಟುಂಬ ಇದೀಗ ಹೊಸತೊಂದು ಸೌಂದರ್ಯವರ್ಧಕ ಮಳಿಗೆ ಆರಂಭಿಸಿದ್ದು, ಅತ್ಯುತ್ತಮ ರೀತಿಯಲ್ಲಿ ಮುಂದುವರಿಯಲಿ. ಗ್ರಾಹಕರೆಂದರೇ ದೇವರು, ಬರುವಂತಹ ಗ್ರಾಹಕ ವರ್ಗಕ್ಕೆ ಮೌಲ್ಯಯುತ ಸೇವೆಯನ್ನು ಒದಗಿಸುವುದೇ ಆದ್ಯತೆಯಾಗಿರಲಿಯೆಂದು ಹೇಳಿದ ಅವರು, ಒಳ್ಳೇಯ ರೀತಿಯ ವರ್ತನೆಯು ಕೂಡ ಗ್ರಾಹಕರನ್ನು ಮತ್ತೆ ಮತ್ತೆ ಸೆಳೆಯಲು ಸಾಧ್ಯವೆಂಬ ಮಾತನ್ನು ಹೇಳಿ ಶ್ರೇಯೋಭಿವೃದ್ಧಿಗೆ ಹರಸಿದರು.

ಐಶ್ವರ್ಯ ಬ್ಯೂಟಿಪಾರ್ಲರ್ ಮಾಲಕಿ ಐಶ್ವರ್ಯ ಚಂದ್ರಶೇಖರ್ ಮಾತನಾಡಿ, ಮಂಗಳೂರಿನ ಪ್ರಸಿದ್ಧ ಮೇಕಪ್ ಎಜ್ಯುಕೇಟರ್ ಮನು ಮುರಳೀಧರ್ ಇವರ ಅಕಾಡೆಮಿಯಲ್ಲಿ ತರಬೇತಿ ಪಡೆದಿರುವ ಅಂಕಿತಾರವರು ಖಂಡಿತ ಈ ಉದ್ಯಮದಲ್ಲಿ ಯಶಸ್ಸು ಕಾಣುತ್ತಾರೆ. ಗುಣಮಟ್ಟದ ಸೇವೆಯನ್ನು ಗ್ರಾಹಕ ಜನತೆಗೆ ನೀಡಿದಾಗಲೇ ಎಲ್ಲೆಡೆಯೂ ಪ್ರಚಾರ ಪಡೆಯಲು ಸಾಧ್ಯವಿದೆ. ನೂತನ ಮಳಿಗೆ ಉನ್ನತ ಮಟ್ಟವನ್ನು ಏರಲಿಯೆಂದು ಶುಭ ಕೋರಿದರು.
ಕಲ್ಲೇಗ ದೈವಸ್ಥಾನದ ಪಾತ್ರಿ ಜಿನ್ನಪ್ಪ ಗೌಡ ಕಲ್ಲೇಗ , ಮೇಕಪ್ ಎಜ್ಯುಕೇಟರ್ ಮನು ಮುರಳೀಧರ್, ಸಮೃದ್ದಿ ಬ್ಯೂಟಿ ಪಾರ್ಲರ್ ಮಾಲಕಿ ಸುಪ್ರೀತಾ ಹಾಗೂ ಮಾಲಕಿ ಅಂಕಿತಾರವರ ಅತ್ತೆ ಸುಜಾತ ಸುಂದರ್ ಮತ್ತು ಪತಿ ಇಂಜಿನಿಯರ್ ಕೌಶಿಕ್ ಸುಂದರ್ ಮಾತನಾಡಿ, ಶುಭಾಶಯ ಕೋರಿದರು. ತದ ನಂತರ ಬ್ಯೂಟಿ ಲಾಂಜ್ ನ ಲೋಗೊ ಅನಾವರಣ ಅತಿಥಿಗಳ ಮುಖೇನ ನಡೆಯಿತು. ಬಳಿಕ ಎಲ್ಲಾ ಅತಿಥಿಗಳನ್ನು ಕೂಡ ಸಂಸ್ಥೆಯ ಪರವಾಗಿ ಗೌರವಿಸಲಾಯಿತು.
ಇಂಜಿನಿಯರ್ ಪ್ರೀತಂ ಗಣೇಶ್ ಮತ್ತು ಸಮೃದ್ಧಿ ಪಾರ್ಲರ್ ಮಾಲಕಿ ಸುಪ್ರೀತಾರನ್ನು ಕೂಡ ವಿಶೇಷವಾಗಿ ಸನ್ಮಾನಿಸಲಾಯಿತು. ಕಬಕ ಬಿಲ್ಲವ ಗ್ರಾಮ ಸಮಿತಿ ಗೌರವಾಧ್ಯಕ್ಷ ಜಿನ್ನಪ್ಪ ಪೂಜಾರಿ ಮುರ, ಸಹೋದರಿ ಅರ್ಪಿತಾ ಸಹಿತ ಹಲವರು ಅತಿಥಿಗಳು, ಕುಟುಂಬ ಸದಸ್ಯರು ಹಾಜರಿದ್ದರು. ವಿ.ಜೆ ಮಧ್ವರಾಜ್ ಕಾರ್ಯಕ್ರಮ ನಿರೂಪಿಸಿದರು.