ಪುಣಚ: ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸೆ.22ರಿಂದ ಸೆ.30ರವರೆಗೆ ನಡೆಯುತ್ತಿರುವ ನವರಾತ್ರಿ ಉತ್ಸವದ ಪ್ರಯುಕ್ತವಾಗಿ ವರ್ಷಂಪ್ರತಿಯಂತೆ ನವರಾತ್ರಿಯ ಪ್ರಥಮ ದಿನವಾದ ಸೆ.22ರಂದು ಬೈಲುಗುತ್ತು ಕುಟುಂಬಸ್ಥರು ಮತ್ತು ಬಂಧುಗಳಿಂದ ಮಧ್ಯಾಹ್ನ ಅನ್ನದಾನ ಸೇವೆ ನಡೆಯಿತು.
ಬೆಳಿಗ್ಗೆ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಬನ್ನಿಂತಾಯರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ, ಪ್ರಾರ್ಥನೆಯೊಂದಿಗೆ ಗದ್ದಿಗೆ ಏರುವ ಕಾರ್ಯಕ್ರಮ ನಡೆಯಿತು. ಬೈಲುಗುತ್ತು ಕುಟುಂಬಸ್ಥರು ಮತ್ತು ಬಂಧುಗಳಿಂದ ವರ್ಷಂಪ್ರತಿ ಸಂಪ್ರದಾಯದಂತೆ ದೇವರ ನಿತ್ಯ ನೈವೇದ್ಯಕ್ಕೆ ಒಂದು ಕಿಂಟ್ವಾಲು ಅಕ್ಕಿಯನ್ನು ಈ ಸಂದರ್ಭದಲ್ಲಿ ಸಮರ್ಪಿಸಲಾಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಬೈಲುಗುತ್ತು ಕುಟುಂಬದ ಯಜಮಾನ ಜಗನ್ನಾಥ ರೈ ಬೈಲುಗುತ್ತು, ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು, ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್ ದಂಬೆ, ಉಪಾಧ್ಯಕ್ಷ ಜಯಂತ ಗೌಡ ಒ, ಸಂಚಾಲಕ ಶ್ರೀಧರ ಶೆಟ್ಟಿ ದೇವರಗುಂಡಿ, ಕೋಶಾಧಿಕಾರಿ ಹರ್ಷ ಶಿಬರೂರಾಯ ಏರಣಿಕಟ್ಟೆ, ಸಮಿತಿ ಸದಸ್ಯರುಗಳು ಸೇರಿದಂತೆ ಬೈಲುಗುತ್ತು ಕುಟುಂಬಸ್ಥರು,ಬಂಧುಗಳು, ಗ್ರಾಮಸ್ಥರು ಹಾಗೂ ಅನೇಕ ಭಕ್ತ ಮಹಾಶಯರು ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿದರು.
