ಪ್ರಸಾದ್ ಕೌಶಲ್ ಶೆಟ್ಟಿಯವರಿಗೂ ಶಾಸಕನಾಗುವ ಯೋಗ ಕೂಡಿಬರಲಿ; ಶಕುಂತಳಾ ಶೆಟ್ಟಿ
ನೆಲ್ಯಾಡಿ: ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಉಪಾಧ್ಯಕ್ಷರಾಗಿ ಆಯ್ಕೆಗೊಂಡಿರುವ ರಾಯ್ ಅಬ್ರಹಾಂ ಹಾಗೂ ನೂತನ ನಿರ್ದೇಶಕರಿಗೆ ಅಭಿನಂದನಾ ಕಾರ್ಯಕ್ರಮ ನೆಲ್ಯಾಡಿಯಲ್ಲಿರುವ ಸಂಘದ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ಸೆ.೨೩ರಂದು ನಡೆಯಿತು.
ಮಾಜಿ ಶಾಸಕಿ ಟಿ.ಶಕುಂತಳಾ ಶೆಟ್ಟಿಯವರು ನೂತನ ಆಡಳಿತ ಮಂಡಳಿಯನ್ನು ಅಭಿನಂದಿಸಿ ಮಾತನಾಡಿ, ನಾನೂ ಸಹ ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿದ್ದೇನೆ. ಆ ಬಳಿಕ ಶಾಸಕಿಯಾಗಿಯೂ ಚುನಾಯಿತನಾಗಿದ್ದೇನೆ. ಅದೇ ರೀತಿ ಕಳೆದ 15 ವರ್ಷಗಳಿಂದ ಈ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿಯವರಿಗೂ ಶಾಸಕನಾಗುವ ಯೋಗ ಕೂಡಿಬರಲಿ ಎಂದು ಹಾರೈಸಿದರು. ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿಯವರು ಅಧ್ಯಕ್ಷರಾದ ಬಳಿಕ ಈ ಸಂಘ ಹಂತ ಹಂತವಾಗಿ ಬೆಳೆದು ಲಾಭದ ಕಡೆಗೆ ಬಂದಿದೆ. ಇವರಿಗೆ ಸಂಘದ ಉಪಾಧ್ಯಕ್ಷರು, ನಿರ್ದೇಶಕರೂ ಸಾಥ್ ನೀಡಿದ್ದಾರೆ. ಸಂಘ ಇನ್ನಷ್ಟೂ ಎತ್ತರಕ್ಕೆ ಏರಲಿ ಎಂದು ಹೇಳಿದ ಶಕುಂತಳಾ ಶೆಟ್ಟಿಯವರು ನೂತನ ಆಡಳಿತ ಮಂಡಳಿಗೆ ಶುಭ ಹಾರೈಸಿದರು.

ಅಭಿನಂದನೆ ಸ್ವೀಕರಿಸಿದ ನೂತನ ಅಧ್ಯಕ್ಷರಾದ ಪ್ರಸಾದ್ ಕೌಶಲ್ ಶೆಟ್ಟಿ ಮಾತನಾಡಿ, ಪ್ರಸ್ತುತ ಅಸ್ತಿತ್ವಕ್ಕೆ ಬಂದಿರುವ ಆಡಳಿತ ಮಂಡಳಿಯು ಸತತ 4ನೇ ಬಾರಿಗೆ ಆಯ್ಕೆಯಾಗಿದೆ. ಸದಸ್ಯರ ಸಹಕಾರದಿಂದ ಆಡಳಿತ ಮಂಡಳಿಗೆ ನಿರ್ದೇಶಕರ ಅವಿರೋಧ ಆಯ್ಕೆ ನಡೆದಿದೆ. ಪ್ರಸ್ತುತ ರಬ್ಬರ್ ಧಾರಣೆ ಕುಸಿತದಿಂದಾಗಿ ರಬ್ಬರ್ ಬೆಳೆಗಾರರು ಮರ ಕಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಯಾರೂ ರಬ್ಬರ್ ಮರ ಕಡಿಯುವ ಹಂತಕ್ಕೆ ಹೋಗಬಾರದು. ರಬ್ಬರ್ ಬೆಳೆಗಾರರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲೆಯ ಇತರೇ ರಬ್ಬರ್ ಬೆಳೆಗಾರರ ಸಹಕಾರ ಸಂಘ ಹಾಗೂ ಕೆಲವೊಂದು ಸಹಕಾರ ಸಂಘಗಳ ಅಧ್ಯಕ್ಷರು ಸಭೆ ಸೇರಿ ಚರ್ಚೆ ನಡೆಸಿದ್ದೇವೆ. ಮೂರು ತಿಂಗಳ ಹಿಂದೆ ರಬ್ಬರ್ ಧಾರಣೆ ಏರಿಕೆಯಾಗಿದ್ದರೂ ಈಗ ಧಾರಣೆ ಕುಸಿತವಾಗಿರುವುದರಿಂದ ರಬ್ಬರ್ ಬೆಳೆಗಾರರು ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನೂತನ ಆಡಳಿತ ಮಂಡಳಿಯ ಮುಂದೆ ದೊಡ್ಡ ಸವಾಲು ಇದೆ. ಈ ಎಲ್ಲಾ ಸವಾಲು ಎದುರಿಸಿಕೊಂಡು ರಬ್ಬರ್ ಬೆಳೆಗಾರರಿಗೆ ಡಿವಿಡೆಂಡ್, ಬೋನಸ್ ನೀಡುವ ಜವಾಬ್ದಾರಿ ಆಡಳಿತ ಮಂಡಳಿಯ ಮೇಲಿದೆ ಎಂದು ಹೇಳಿದರು.
ಉಪಾಧ್ಯಕ್ಷ ರಾಯ್ ಅಬ್ರಹಾಂ ಮಾತನಾಡಿ, ಸಹಕಾರ ಸಂಘದೊಂದಿಗೆ ಎಲ್ಲಾ ವರ್ಗದ ಜನರೂ ವ್ಯವಹಾರ ಮಾಡುತ್ತಾರೆ. ಕಳೆದ ೧೫ ವರ್ಷಗಳಿಂದ ಯಾವುದೇ ಗೊಂದಲವಿಲ್ಲದೆ ಸಂಘವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಬಂದಿದ್ದೇವೆ. ಸಂಘ ಲಾಭದಲ್ಲಿ ಮುನ್ನಡೆಯಲು ಸದಸ್ಯರ ಸಹಕಾರವೂ ಮುಖ್ಯ ಎಂದು ಹೇಳಿದರು.
ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಗುರುಪ್ರಸಾದ್, ಮಾಜಿ ಅಧ್ಯಕ್ಷ ಮಹಾಬಲ ಶೆಟ್ಟಿ ದೋಂತಿಲ, ಉಪ್ಪಿನಂಗಡಿಯ ಅಝೀಝ್ ಬಸ್ತಿಕ್ಕಾರ್, ಸಂಘದ ನಿರ್ದೇಶಕರಾದ ರಮೇಶ್ ಕಲ್ಪುರೆ, ಕೇಶವ ಭಂಡಾರಿ ಕೈಪ, ಎನ್.ವಿ.ವ್ಯಾಸ ನೆಕ್ಕರ್ಲ, ಮುಖ್ಯಕಾರ್ಯನಿರ್ವಹಣಾಧಿಕಾರಿ ಶಶಿಪ್ರಭಾ ಅವರು ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದರು. ನಿರ್ದೇಶಕರಾದ ಜಾರ್ಜ್ ಕುಟ್ಟಿ ಸಿ. ಇಚ್ಲಂಪಾಡಿ, ಶ್ರೀರಾಮ ಪಕ್ಕಳ ಕರ್ನೂರುಗುತ್ತು, ಸತ್ಯಾನಂದ ಬಿ.ಬೊಳ್ಳಾಜೆ, ಗಿರೀಶ್ ಸಾಲಿಯಾನ್ ಬಿ. ಬದನೆ, ಜಯರಾಮ ಬಿ.ಬಾಣಜಾಲು, ಅರುಣಾಕ್ಷಿ ಪುಚ್ಚೇರಿ, ಗ್ರೇಸಿ ನೈನಾನ್ ನೆಲ್ಯಾಡಿ, ಸುಭಾಸ್ ನಾಯಕ್ ಕೋಡಿಂಬಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದ.ಕ.ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕಿಂ ಡಿ.ಸೋಜ, ಜಿ.ಪಂ.ಮಾಜಿ ಸದಸ್ಯರಾದ ಸರ್ವೋತ್ತಮ ಗೌಡ, ಪಿ.ಪಿ.ವರ್ಗೀಸ್, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ನಿರ್ದೇಶಕ ಜಯಾನಂದ ಬಂಟ್ರಿಯಾಲ್, ಕಾಂಚನ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಡೆನ್ನಿಸ್ ಪಿಂಟೋ, ಮಹೇಂದ್ರ ವರ್ಮ, ಅಶ್ರಫ್ ಬಸ್ತಿಕ್ಕಾರ್ ಉಪ್ಪಿನಂಗಡಿ, ಪಾರ್ಶ್ವನಾಥ ಜೈನ್ ಸೇರಿದಂತೆ ಸಂಘದ ಸದಸ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಅಭಿನಂದನಾ ಕಾರ್ಯಕ್ರಮಕ್ಕೂ ಮೊದಲು ಚುನಾವಣಾಧಿಕಾರಿಯಾಗಿದ್ದ ಮಂಗಳೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ತ್ರಿವೇಣಿ ರಾವ್ ಕೆ. ಅವರು ನೂತನ ನಿರ್ದೇಶಕರಿಗೆ ಪ್ರಮಾಣಪತ್ರ ವಿತರಿಸಿ ಶುಭಹಾರೈಸಿದರು.
ಸಂಘ ಬಲಿಷ್ಠವಾಗಿ ಬೆಳೆಯಲು ಎಲ್ಲರ ಸಹಕಾರ ಬೇಕು;
ಈ ಹಿಂದೆ ಎಲ್ಲಾ ನಿರ್ದೇಶಕರು ಪಕ್ಷ ಬೇಧ ಮರೆತು ಸೇವೆ ಸಲ್ಲಿಸುವ ಮೂಲಕ ಸಂಘವನ್ನು ಹಂತ ಹಂತವಾಗಿ ಬೆಳೆಸಿ ಲಾಭದತ್ತ ಕೊಂಡೊಯ್ದಿದ್ದೇವೆ. ಮುಂದೆಯೂ ಇದೇ ರೀತಿ ಮುಂದುವರಿಯುತ್ತೇವೆ. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಪ್ರಭಾ ಅವರು ಆಡಳಿತ ಮಂಡಳಿ ಹಾಗೂ ಸಂಘದ ಸಿಬ್ಬಂದಿಗಳೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಕಾರ್ಯನಿರ್ವಹಣೆ ಮಾಡುವ ಮೂಲಕ ಸಂಘದ ಏಳಿಗೆಗೆ ಕಾರಣರಾಗಿದ್ದಾರೆ. ಮುಂದಿನ ದಿನಗಳಲ್ಲಿ ರಬ್ಬರ್ ಬೆಳೆಗಾರರ ಸಹಿತ ಕೃಷಿಕರಿಗೆ ಪ್ರಯೋಜನವಾಗುವಂತಹ ಸವಲತ್ತುಗಳನ್ನು ಸಂಘದ ಮೂಲಕ ವಿತರಣೆ ಮಾಡಲು ಕ್ರಮ ಕೈಗೊಳ್ಳುತ್ತೇವೆ. ಸಂಘ ಬಲಿಷ್ಠವಾಗಿ ಬೆಳೆಯಲು ಎಲ್ಲರೂ ಸಹಕಾರ ನೀಡಬೇಕು.

-ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಅಧ್ಯಕ್ಷರು
ಪುತ್ತೂರು ತಾ| ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ
ಹೂಮಾಲೆ ಹಾಕಿ ಅಭಿನಂದನೆ;
ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಉಪಾಧ್ಯಕ್ಷರಾಗಿ ಆಯ್ಕೆಗೊಂಡ ರಾಯ್ ಅಬ್ರಹಾಂ ಪದವು, ನಿರ್ದೇಶಕರಾಗಿ ಆಯ್ಕೆಗೊಂಡ ಕೇಶವ ಭಂಡಾರಿ ಕೆ.ಕೈಪ, ಜಾರ್ಜ್ ಕುಟ್ಟಿ ಸಿ. ಇಚ್ಲಂಪಾಡಿ, ರಮೇಶ್ ಕಲ್ಪುರೆ, ವ್ಯಾಸ ಎನ್.ವಿ.ನೆಕ್ಕರ್ಲ, ಶ್ರೀರಾಮ ಪಕ್ಕಳ ಕರ್ನೂರುಗುತ್ತು, ಸತ್ಯಾನಂದ ಬಿ.ಬೊಳ್ಳಾಜೆ, ಗಿರೀಶ್ ಸಾಲಿಯಾನ್ ಬಿ. ಬದನೆ, ಜಯರಾಮ ಬಿ.ಬಾಣಜಾಲು, ಅರುಣಾಕ್ಷಿ ಪುಚ್ಚೇರಿ, ಗ್ರೇಸಿ ನೈನಾನ್ ನೆಲ್ಯಾಡಿ ಹಾಗೂ ಸುಭಾಸ್ ನಾಯಕ್ ಕೋಡಿಂಬಾಡಿ ಇವರಿಗೆ ಹೂ ಮಾಲೆ ಹಾಕುವ ಮೂಲಕ ಸಂಘದ ಸದಸ್ಯರು, ಸಿಬ್ಬಂದಿಗಳು ಹಾಗೂ ಗಣ್ಯರು ಅಭಿನಂದಿಸಿದರು.