ಪುತ್ತೂರು ಮೂಲದ ಕೆ.ಇ ರಾಧಾಕೃಷ್ಣ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರಿಗೆ ಸ್ಥಾನ
ಪುತ್ತೂರು: ರಾಜ್ಯದ ಸಿ ವರ್ಗದ ದೇವಸ್ಥಾನಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ದೃಷ್ಟಿಯಿಂದ ಸಮಾಜದ ವಿವಿಧ ಕ್ಷೇತ್ರಗಳ ಪ್ರಮುಖರು ಮತ್ತು ಅಧಿಕಾರಿಗಳನ್ನೊಳಗೊಂಡ 7 ಮಂದಿಯ ವಿಷನ್ ಗ್ರೂಪ್ ರಚಿಸಿ ಸರ್ಕಾರ ಆದೇಶಿಸಿದೆ.
ಈ ಸಮಿತಿಯಲ್ಲಿ ಪುತ್ತೂರು ಮೂಲದ ಪ್ರೊ. ಕೆ.ಇ ರಾಧಾಕೃಷ್ಣ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಸ್ಥಾನ ಪಡೆದುಕೊಂಡಿದ್ದಾರೆ.
ಮುಜರಾಯಿ ಇಲಾಖೆಗೆ ಆದಾಯ ತಂದು ಕೊಡದ ಸಿ ವರ್ಗದ ದೇವಸ್ಥಾನಗಳ ಮೂಲಸೌಕರ್ಯ ಅಭಿವೃದ್ಧಿ ಕುರಿತಂತೆ 2023ರ ಅ.13ರಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ನಡೆದ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ವಿಷನ್ ಗ್ರೂಪ್ ರಚಿಸುವ ನಿರ್ಧಾರ ಮಾಡಲಾಗಿತ್ತು. ಅದಾದ ನಂತರ 2023-24ರ ರಾಜ್ಯ ಬಜೆಟ್ನಲ್ಲಿ ವಿಷನ್ ಗ್ರೂಪ್ ರಚಿಸುವುದಾಗಿ ಘೋಷಿಸಲಾಗಿತ್ತು. ಇದೀಗ ಅದನ್ನು ಕಾರ್ಯಗತಗೊಳಿಸಲಾಗಿದ್ದು, ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡಿದ ಪ್ರಮುಖರನ್ನು ಸೇರಿಸಿ 7 ಮಂದಿ ಸದಸ್ಯರನ್ನೊಳಗೊಂಡ ವಿಷನ್ ಗ್ರೂಪ್ ರಚಿಸಲಾಗಿದೆ.
ಪ್ರೊ. ಕೆ.ಇ. ರಾಧಾಕೃಷ್ಣ, ರಾಜ್ಯ ಸಭಾ ಮಾಜಿ ಸದಸ್ಯ ಕೆ.ಸಿ.ರಾಮಮೂರ್ತಿ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಡಾ. ಮಹಾಂತೇಶ್ ಬಿರಾದಾರ್, ಪಿ.ಸಿ. ಶ್ರೀನಿವಾಸ್ ಮತ್ತು ಕೆಎಎಸ್ ಅಧಿಕಾರಿ ಡಾ. ಶ್ರೀಪಾದ್ ರನ್ನು ವಿಷನ್ ಗ್ರೂಪ್ ಸದಸ್ಯರನ್ನಾಗಿ ನೇಮಿಸಲಾಗಿದೆ. ವಿಷನ್ ಗ್ರೂಪ್ಗೆ ಎಸ್.ಎನ್. ಯತಿರಾಜ, ಸಂಪತ್ ಕುಮಾರನ್ ಅವರನ್ನು ಸಂಚಾಲಕರನ್ನಾಗಿ ನಿಯೋಜಿಸಲಾಗಿದೆ.