ಪುತ್ತೂರು: ನೆ.ಮುಡ್ನೂರು ಗ್ರಾಮದ ಪಾಳ್ಯತ್ತಡ್ಕ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಕೊಳವೆ ಬಾವಿ ದುರಸ್ತಿಯಲ್ಲಿ ಅವ್ಯವಹಾರ ನಡೆದಿರುವುದಾಗಿ ಆರೋಪಿಸಿ ನೀಡಲಾದ ದೂರಿಗೆ ಸಂಬಂಧಿಸಿ ಲೋಕಾಯುಕ್ತ ತನಿಖೆ ಆರಂಭಗೊಂಡಿದೆ. ಕೊಳವೆ ಬಾವಿ ಅವ್ಯವಹಾರ ದಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗಿದೆ ಎಂದು ಆರೋಪಿಸಿ ಬೆಂಗಳೂರು ಲೋಕಾಯುಕ್ತ ಸಂಸ್ಥೆಗೆ ಆರ್ ಟಿ ಐ ಕಾರ್ಯಕರ್ತರಾದ ಶ್ರೀಧರ ಪೂಜಾರಿ ಮತ್ತು ಕೊರಗಪ್ಪ ಎಂಬವರು ಸಲ್ಲಿಸಿರುವ ದೂರಿನ ಕುರಿತು ತಾಂತ್ರಿಕ ವಿಭಾಗದ ಕಾರ್ಯ ಪಾಲಕ ಇಂಜಿನಿಯರ್
ಹಾಗೂ ತನಿಖಾಧಿಕಾರಿಗಳು ಈಶ್ವರಮಂಗಲ ಪಾಳ್ಯತ್ತಡ್ಕ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಕೊಳವೆ ಬಾವಿ ಪರಿಶೀಲನೆ ನಡೆಸಿ ತನಿಖೆ ಪ್ರಾರಂಭಿಸಿದ್ದಾರೆ.
ದೂರುದಾರರು ಆಗಸ್ಟ್ 2019ರಲ್ಲಿ ದೂರು ನೀಡಿದ್ದು 2025ನೇ ಸೆ.23ರಿಂದ ತನಿಖೆ ಆರಂಭಿಸಿರುವ ಲೋಕಾಯುಕ್ತ ಅಧಿಕಾರಿಗಳು ಕೊಳವೆ ಬಾವಿಯ ಪರಿಶೀಲನೆ, ಕೇಸಿಂಗ್ ಪೈಪ್, ಪಂಪ್ ಹಾಗೂ ಆಳದ ತಪಾಸಣೆ ನಡೆದಿದ್ದು ತನಿಖಾಽಕಾರಿಗಳು ವಿವರವನ್ನು ಉಪಲೋಕಾಯುಕ್ತರಿಗೆ ಸಲ್ಲಿಕೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ವಿದ್ಯಾರ್ಥಿನಿಲಯದ ಕೊಳವೆ ಬಾವಿಯಿಂದ ಕೆಸರು ನೀರು ಬರುತ್ತಿದೆ ಎಂಬ ಕಾರಣ ನೀಡಿ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದರು. 2019ರ ಆಗಸ್ಟ್ 8ರಂದು ಅಂದಾಜು ಪಟ್ಟಿ ತಯಾರಿಸಿ ಕಾರ್ಯಾದೇಶ ಪಡೆದು, 2020ರ ಮಾರ್ಚ್ 13ಕ್ಕೆ ಹಣ ಪಾವತಿ ಮಾಡಲಾಗಿದೆ. ಆದರೆ, ಈ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಕೇಳಿದರೂ, ಇಲಾಖೆ ಸಮರ್ಪಕ ಮಾಹಿತಿ ನೀಡುವಲ್ಲಿ ವಿಫಲವಾಗಿದೆ. ಬೋರ್‌ವೆಲ್ ದುರಸ್ತಿಗೆ 4.64 ಲಕ್ಷ ರೂಪಾಯಿ ವ್ಯಯಿಸಿದ್ದು ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ದೂರು ನೀಡಲಾಗಿತ್ತು.
ಬಲ್ನಾಡು ಅಶ್ರಮ ಶಾಲೆಯಲ್ಲಿ ಕೊಳವೆ ಬಾವಿಯ ಸ್ಟಾರ್ಟ್‌ಗೆ ಹುಡುಕಾಟ:
ಕೊಳವೆ ಬಾವಿಯ ಸ್ಟಾರ್ಟ್ ನ ವಿಚಾರಣೆ ನಡೆಸಿದಾಗ ಅದನ್ನು ವಸತಿ ನಿಲಯದಲ್ಲಿ ಇಡಲು ಸರಿಯಾದ ವ್ಯವಸ್ಥೆ ಇಲ್ಲದೇ ಇರುವುದರಿಂದ ಅದನ್ನು ಬಲ್ನಾಡು ಆಶ್ರಮ ಶಾಲೆಯ ಗೋದಾಮುಗೆ ಇತರ ವಸ್ತುಗಳೊಂದಿಗೆ ಕಳಿಸಲಾಗಿದೆ ಎಂದು ಅಡುಗೆ ಸಿಬ್ಬಂದಿ ಹೇಳಿದ್ದರು. ಆದರ ತನಿಖೆಗೆ ಬಲ್ನಾಡು ಆಶ್ರಮ ಶಾಲೆಗೆ ಹೋಗಿ ನೋಡಿದಾಗ ಅಲ್ಲಿ ಯಾವುದೇ ಕೊಳವೆ ಬಾವಿಯ ಸ್ಟಾರ್ಟ್ ಸಿಕ್ಕಿಲ್ಲ ಎನ್ನಲಾಗಿದೆ. ಇದು ಮತ್ತಷ್ಟು ಸಂಶಯಕ್ಕೆ ಕಾರಣವಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸುನಿತಾ, ಕೆ ಆರ್ ಡಿ ಎಲ್ ನ ಸಹಾಯಕ ಕಾರ್ಯಪಾಲಕ ಅಭಿಯಂತರೆ ಫಾರಿದಾ, ಜೂನಿಯರ್ ಇಂಜಿನಿಯರ್ ದೀಕ್ಷಿತ್, ನಿವೃತ್ತ ಕಾರ್ಯಪಾಲಕ ಅಭಿಯಂತರ ಮಹಾದೇವ ಪ್ರಸಾದ್, ಪಾಳ್ಯತ್ತಡ್ಕ ವಿದ್ಯಾರ್ಥಿ ನಿಲಯದ ವಾರ್ಡನ್ ವಿಶ್ವನಾಥ್, ಹಿಂದಿನ ವಾರ್ಡನ್ ಅನ್ನಪೂರ್ಣೇಶ್ವರಿ, ಲೋಕೇಶ್, ಮತ್ತಿತರರು ಉಪಸ್ಥಿತರಿದ್ದರು.