ರಾಮಕುಂಜ ಹಾ.ಉ.ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

4.62 ಲಕ್ಷ ರೂ.ನಿವ್ವಳ ಲಾಭ | ಶೇ.10 ಡಿವಿಡೆಂಡ್, ಲೀ.ಹಾಲಿಗೆ 63 ಪೈಸೆ ಬೋನಸ್ ಘೋಷಣೆ

ರಾಮಕುಂಜ: ರಾಮಕುಂಜ ಹಾಲು ಉತ್ಪಾದಕರ ಸಹಕಾರ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸೆ.24ರಂದು ಬೆಳಿಗ್ಗೆ ಕೊಯಿಲ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ.ಮುರಳೀಕೃಷ್ಣ ಬಡಿಲ ಮಾತನಾಡಿ, 2024-25ನೇ ಸಾಲಿನಲ್ಲಿ ಸಂಘವು 5,86,06,122.80 ರೂ.ವ್ಯವಹಾರ ನಡೆಸಿದ್ದು 4,62,314.19 ನಿವ್ವಳ ಲಾಭಗಳಿಸಿದೆ. ಲಾಭಾಂಶವನ್ನು ನಿಯಮಾನುಸರ ಹಂಚಲಾಗಿದ್ದು ಸದಸ್ಯರಿಗೆ ಶೇ.10 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 63 ಪೈಸೆಯಂತೆ ಬೋನಸ್ ನೀಡಲಾಗುವುದು ಎಂದು ಹೇಳಿದರು. ಪ್ರಕೃತ ಸಂಘದಲ್ಲಿ ದಿನಂಪ್ರತಿ ಸರಾಸರಿ 1400 ಲೀ.ಹಾಲು ಸಂಗ್ರಹವಾಗುತ್ತಿದೆ. ಆತೂರು, ಖಂಡಿಗದಲ್ಲಿ ಖರೀದಿ ಉಪಕೇಂದ್ರ ಕಾರ್ಯನಿರ್ವಹಿಸುತ್ತದೆ. ಬಿಎಂಸಿಯಲ್ಲಿ 2600 ಲೀ.ನಷ್ಟು ಹಾಲು ಶೀತಲೀಕರಿಸಿ ಒಕ್ಕೂಟಕ್ಕೆ ಕಳುಹಿಸಲಾಗುತ್ತಿದೆ. ಉತ್ತಮ ಗುಣಮಟ್ಟ ಹಾಗೂ ಶುಚಿತ್ವಕ್ಕೆ ಒತ್ತು ನೀಡಿ ಉತ್ತಮ ಸಂಘವಾಗಿ ಬೆಳೆಯಬೇಕೆಂಬುದು ನಮ್ಮ ಆಶಯವಾಗಿದೆ. ಇದಕ್ಕೆ ಸದಸ್ಯರೂ ಸಹಕಾರ ನೀಡಬೇಕೆಂದು ಹೇಳಿದರು. ದ.ಕ.ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಸತೀಶ ರಾವ್, ವಿಸ್ತರಣಾಧಿಕಾರಿ ಆದಿತ್ಯ ಸಿ.ಅವರು ಹೈನುಗಾರಿಕೆ ಹಾಗೂ ಒಕ್ಕೂಟದಿಂದ ಸಂಘದ ಸದಸ್ಯರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ಪ್ರತಿಭಾ ಪುರಸ್ಕಾರ;
ಸಂಘದ ಸದಸ್ಯರ ಮಕ್ಕಳಾಗಿದ್ದು ಕಳೆದ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಕಾವ್ಯಶ್ರೀ, ಸಂಪತ್ ಕೆ., ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಶೀತಲ್, ಕೃಪಾ ಕೆ.ಚೌಟ, ಮಾನಸ, ಧನುಶ್ ಗೌಡ ಅವರಿಗೆ ಗೌರವಾರ್ಪಣೆ ಮಾಡಲಾಯಿತು.

ಸದಸ್ಯರಿಗೆ ಬಹುಮಾನ:
2024-25ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಸದಸ್ಯರಿಗೆ ಬಹುಮಾನ ನೀಡಿ ಗೌರವಿಸಲಾಯಿತು. 14,176 ಲೀ.ಹಾಲು ಪೂರೈಸಿದ ವಾಸಪ್ಪ ಗೌಡ, 10,824 ಲೀ.ಹಾಲು ಪೂರೈಸಿದ ಸತ್ಯಸುಂದರ ರಾವ್ ಹಾಗೂ 6533 ಲೀ.ಹಾಲು ಪೂರೈಸಿದ ನಳಿನಿ ಹಾಗೂ 5 ಸಾವಿರ ಲೀ.ಗಿಂತ ಹೆಚ್ಚು ಹಾಲು ಪೂರೈಸಿದ 10 ಸದಸ್ಯರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ವಾರ್ಷಿಕ 500 ಲೀ.ಗಿಂತ ಹೆಚ್ಚು ಹಾಲು ಪೂರೈಸಿದ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು. ಸಂಘದಿಂದ ವಾರ್ಷಿಕ 74 ಚೀಲ ಪಶು ಆಹಾರ ಖರೀದಿಸಿದ ತೇಜಕುಮಾರ್ ಅವರಿಗೆ 1 ಚೀಲ ಪಶುಆಹಾರ ನೀಡಿ ಗೌರವಿಸಲಾಯಿತು.

ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿತ್ತರಂಜನ್ ರಾವ್ ಬದೆಂಜ, ಉಪಾಧ್ಯಕ್ಷ ಪ್ರವೀಣ ಡಿ.ದೇರೆಜಾಲು, ನಿರ್ದೇಶಕರಾದ ಯನ್.ಸುಬ್ರಹ್ಮಣ್ಯ ಭಟ್ ಬರೆಂಪಾಡಿ, ಮೋನಪ್ಪ ಮೂಲ್ಯ ಬಿ.ಬೊಳ್ಳರೋಡಿ, ಬಾಲಕೃಷ್ಣ ಗೌಡ ಬಿ.ಬೇಂಗದಪಡ್ಪು, ಸುರೇಶ್ ನಾಕ್ ಕೆ.ಕೊಲ, ಪ್ರಕಾಶ್ ಕೆ.ಆರ್.ಕೆಮ್ಮಾರ, ರತ್ನಾವತಿ ಎಸ್.ಗೌಡ ಬಟ್ಟೋಡಿ, ರೇಖಾ ಶೆಟ್ಟಿ ಬರೆಂಬಾಡಿ, ವಿಶ್ವನಾಥ ಮೂಲ್ಯ ಕೆ.ಕುಂಡಡ್ಕ, ರವಿಪ್ರಸನ್ನ ಸಿ.ಕೆ.ಕುಂಡಡ್ಕ, ನವೀನ ಬಿ.ಬರೆಂಬಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸದಸ್ಯರಾದ ರಾಮಭಟ್, ಉದಯ ಕಶ್ಯಪ್ ಪೂರಿಂಗ, ಯದುಶ್ರೀ ಆನೆಗುಂಡಿ, ಧರ್ಮಪಾಲ ರಾವ್ ಕಜೆ ಮತ್ತಿತರರು ಸಲಹೆ ಸೂಚನೆ ನೀಡಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಭಿನವ್ ವೈ.ಟಿ.ವರದಿ ವಾಚಿಸಿದರು. ಸಂಘದ ಅಧ್ಯಕ್ಷರಾದ ಕೆ.ಮುರಳೀಕೃಷ್ಣ ಬಡಿಲ ಸ್ವಾಗತಿಸಿ, ನಿರೂಪಿಸಿದರು. ನಿರ್ದೇಶಕ ಸುಬ್ರಹ್ಮಣ್ಯ ಭಟ್ ಬರೆಂಪಾಡಿ ವಂದಿಸಿದರು. ಹಾಲು ಪರೀಕ್ಷಕ ಪಿ.ಹರಿಪ್ರಸಾದ್, ಕಂಪ್ಯೂಟರ್ ನಿರ್ವಾಹಕಿ ಜಲಜಾಕ್ಷಿ, ಬಿ.ಎಂ.ಸಿ.ಸಹಾಯಕ ಪಿ.ಧರ್ಣಪ್ಪ ಗೌಡ, ಉಪಖರೀದಿ ಕೇಂದ್ರ ಸಹಾಯಕ ಸದಾಶಿವ ಎ.ಖಂಡಿಗ ಸಹಕರಿಸಿದರು.

ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸನ್ಮಾನ;
ಸಂಘದಲ್ಲಿ 36 ವರ್ಷ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಕಳೆದ ಜುಲೈ ತಿಂಗಳಿನಲ್ಲಿ ನಿವೃತ್ತರಾದ ಚಿತ್ತರಂಜನ್ ರಾವ್ ಬದೆಂಜ ಅವರನ್ನು ಮಹಾಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಅಭಿನಂದನಾ ಭಾಷಣ ಮಾಡಿದ ಸಂಘದ ಮಾಜಿ ಅಧ್ಯಕ್ಷ ಉದಯ ಕಶ್ಯಪ್ ಪೂರಿಂಗ ಅವರು, ರಾಮಕುಂಜ ಹಾ.ಉ.ಸಹಕಾರ ಸಂಘ 1966ರಲ್ಲಿ ಆರಂಭಗೊAಡಿದ್ದು ಚಿತ್ತರಂಜನ್ ಅವರು 1990ರಲ್ಲಿ ಕಾರ್ಯದರ್ಶಿಯಾಗಿ ಸಂಘಕ್ಕೆ ಸೇರ್ಪಡೆಗೊಂಡಿದ್ದರು. ಸಂಘಕ್ಕೆ ಸ್ವಂತ ಜಾಗ ಹಾಗೂ ಕಟ್ಟಡ ನಿರ್ಮಾಣದಲ್ಲಿ ಅವರ ಶ್ರಮವಿದೆ. ಎಲ್ಲರಿಗೂ ಸ್ಪಂದನೆ ನೀಡುವ ಮೂಲಕ ಸಂಘಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. 2002ರಲ್ಲಿ ಸಂಘಕ್ಕೆ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನವೂ ಲಭಿಸಿತ್ತು. ಅವರೊಬ್ಬ ಮಾದರಿ ಕಾರ್ಯನಿರ್ವಹಣಾಧಿಕಾರಿಯಾಗಿದ್ದಾರೆ ಎಂದರು. ಇನ್ನೋರ್ವ ಮಾಜಿ ಅಧ್ಯಕ್ಷ ರಾಮ್‌ಭಟ್ ಶುಭಹಾರೈಸಿದರು. ಸಂಘದ ಉಪಾಧ್ಯಕ್ಷ ಪ್ರವೀಣ್ ಡಿ.ದೇರೆಜಾಲು ಸನ್ಮಾನ ಪತ್ರ ವಾಚಿಸಿದರು. ನಿರ್ದೇಶಕ ಪ್ರಕಾಶ್ ಕೆ.ಆರ್. ಕೆಮ್ಮಾರ ನಿರೂಪಿಸಿದರು.

LEAVE A REPLY

Please enter your comment!
Please enter your name here