ಪುತ್ತೂರು: ಹಲ್ಲೆ ಪ್ರಕರಣದ ಆರೋಪಿ ಶರತ್ ಕುಮಾರ್ಗೆ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಸೆ. 16ರಂದು ನೀಲು ಎಂಬವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಭಿಕ್ಷೆ ಬೇಡಿ ನಂತರ ದೇವಸ್ಥಾನದಲ್ಲಿ ಸಿಗುವ ಊಟ ಮಾಡಿ ಅಯ್ಯಪ್ಪ ಗುಡಿ ಹಿಂಬದಿ ನಟರಾಜ್ ಹಾಲ್ ನ ಮೆಟ್ಟಿಲ ಮೇಲೆ ವಿಶ್ರಾಂತಿಗಾಗಿ ಕುಳಿತಕೊಂಡಿದ್ದ ಸಮಯ ದೇವಸ್ಥಾನದಲ್ಲಿ ಕೆಲಸಕ್ಕಿರುವ ಶರತ್ ಕುಮಾರ್ ಎಂಬವರು ಅಲ್ಲಿಗೆ ಬಂದು ಇಲ್ಲಿ ಯಾಕೆ ಕುಳಿತುಕೊಂಡಿದ್ದೀಯಾ? ಎಂದು ಅವಾಚ್ಯ ಶಬ್ಧಗಳಿಂದ ಬೈದು, ಹಲ್ಲೆ ನಡೆಸಿ ಒತ್ತಾಯ ಪೂರ್ವಕವಾಗಿ ಅಲ್ಲಿಂದ ಕಳಿಸಿರುತ್ತಾರೆ. ಗಾಯಾಳು ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಶರತ್ ಕುಮಾರ್ ವಿರುದ್ಧ ಪುತ್ತೂರು ಮಹಿಳಾ ಠಾಣೆಗೆ ದೂರನ್ನು ಸಲ್ಲಿಸಿದ್ದರು. ಆರೋಪಿಯ ವಿರುದ್ಧ ಪೋಲೀಸರು ಭಾರತೀಯ ನ್ಯಾಯ ಸಂಹಿತೆಯ ಕಲಂ 74, 352, 115(2) ರಡಿ ಪ್ರಕರಣ ದಾಖಲಿಸಿ,ತನಿಖೆ ಆರಂಬಿಸಿದ್ದರು.
ಆರೋಪಿ ಶರತ್ ಕುಮಾರ್ ನಿರೀಕ್ಷಣಾ ಜಾಮೀನು ಕೋರಿ ತನ್ನ ಪರ ವಕೀಲರಾದ ಮಹೇಶ್ ಕಜೆಯವರ ಮುಖಾಂತರ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಽಶೆ ಶ್ರೀಮತಿ ಸರಿತಾ ಡಿ ರವರು ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ.