





ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮರಥ ಮಂದಿರದ ಎದುರು ಕಾರ್ಯಾಲಯ ಉದ್ಘಾಟನೆ
ದೇಶವನ್ನು ಕಾಲ್ನಡಿಗೆಯಲ್ಲಿ ಸುತ್ತಿದ ಸೀತಾರಾಮ ಕೆದಿಲಾಯರಲ್ಲಿ ದೀಪ ಪ್ರಜ್ವಲನೆ


ಪುತ್ತೂರು: ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಪುತ್ತೂರು ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಇದರ ಸಾರಥ್ಯದಲ್ಲಿ ಇತಿಹಾಸ ಪ್ರಸಿದ್ಧ ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನ.29 ಮತ್ತು 30ರಂದು ಜರುಗುವ 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ, ಸಾಮೂಹಿಕ ವಿವಾಹ ಹಾಗು ಹಿಂದವೀ ಸಾಮ್ರಾಜ್ಯೋತ್ಸವ ಕಾರ್ಯಕ್ರಮದ ಕಾರ್ಯಾಲಯ ಉದ್ಘಾಟನೆಯು ನ.17 ರಂದು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮರಥ ಮಂದಿರದ ಎದುರು ನಡೆಯಿತು.






ಕಾಲ್ನಡಿಗೆಯಲ್ಲಿ ಸುಮಾರು 35 ಸಾವಿರ ಕಿ.ಮೀ ಭಾರತ ದೇಶವನ್ನು ಸುತ್ತಿದ ‘ದೇಶಾಂತರಿ’ ಸೀತಾರಾಮ ಕೆದಿಲಾಯ ಅವರು ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿ, ಭಾರತ ನೂರಾರು ದೇಶಗಳಂತೆ ಅಲ್ಲ. ಜಗತ್ತಿನ ಎಲ್ಲಾ ದೇಶಗಳಿಗೆ ಬೆಳಕು ನೀಡುತ್ತಾ ಬಂದ ದೇಶ ನಮ್ಮ ಭಾರತ ದೇಶ. ಹಾಗಾಗಿ ಭಾರತ ಬೆಳಕಿನ ದೇಶ. ಅಂತಹ ದೇವ ಭೂಮಿ ಭಾರತದಲ್ಲಿ ಯಾವುದೇ ಕೆಲಸ ಮಾಡುವ ಮುನ್ನ ದೀಪ ಪ್ರಜ್ವಲಿಸುವುದು ಸಂಪ್ರದಾಯ, ಸಂಸ್ಕೃತಿ. ಶ್ರೀನಿವಾಸ ಕಲ್ಯಾಣೋತ್ಸವದ ಮೂಲಕವಾಗಿ ಭಾರತ ಹಿಂದಿನಂತೆ ಮತ್ತೆ ವಿಶ್ವ ಗುರುವಾಗಿ, ಭಾರತ ಮಾತೆ ವಿಶ್ವಮಾತೆಯಾಗಿ ಜಗತ್ತಿನ ಪೀಠದಲ್ಲಿ ಕುಳ್ಳಿರಿಸಬೇಕೆಂಬ ಸಂಕಲ್ಪದೊಂದಿಗೆ ಹಿಂದವೀ ಸಾಮ್ರಾಜ್ಯದ ಕನಸ್ಸನ್ನು ಕಂಡ ಛತ್ರಪತಿ ಶಿವಾಜಿಯ ಜೀವನದ ನೆನಪು ಮಾಡಿಕೊಳ್ಳುತ್ತಾ ಈ ಉತ್ಸವ ವಿಜೃಂಭಣೆಯಿಂದ ಆಚರಿಸುವ ಸಂಕಲ್ಪದಂತೆ ಮಹಾಲಿಂಗೇಶ್ವರನ ಕೃಪೆಯಿಂದ ಎಲ್ಲವೂ ಯಶಸ್ವಿಯಾಗಿ ನಡೆಯುತ್ತದೆ ಎಂದರು.
ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಗೌರವಾಧ್ಯಕ್ಷ ಸಿದ್ದನಾಥ ಯಸ್ ಕೆ, ಸಮಿತಿ ಅಧ್ಯಕ್ಷ ನರಸಿಂಹ ಪ್ರಸಾದ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.










