ಎಳ್ಳೆಣ್ಣೆ ಸಮರ್ಪಣೆ ಅವಕಾಶಕ್ಕೆ ಚಾಲನೆ ನೀಡಿದ ಈಶ್ವರ ಭಟ್ ಪಂಜಿಗುಡ್ಡೆ
ಪುತ್ತೂರು: ಮೋದಕ ಹೋಮ, ತುಪ್ಪದೀಪ, ಶುದ್ದ ಎಣ್ಣೆ, ಗಾಯತ್ರಿ ಪೂಜೆ ಸಹಿತ ದೇವರಿಗೆ ಪ್ರೀತ್ಯರ್ಥವಾಗಿ ಭಕ್ತರ ಬೇಡಿಕೆಯಂತೆ ಹಲವು ಸೇವೆಗಳನ್ನು ನೆರವೇರಿಸಲು ಕಾರಣಕರ್ತರಾದ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಈ ಹಿಂದೆ ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ದೈವಜ್ಞರು ಉಲ್ಲೇಘಿಸಿದ ರೀತಿಯಲ್ಲೇ ದೀಪಾವಳಿಯ ಅ.18ರಂದು ಶಿವಲಿಂಗಕ್ಕೆ ಶುದ್ಧ ಎಳ್ಳೆಣ್ಣೆ ಸಮರ್ಪಣೆ ಮಾಡಲಿದ್ದಾರೆ. ಭಕ್ತರಿಗೆ ಎಳ್ಳೆಣ್ಣೆ ಸಮರ್ಪಣೆ ಅವಕಾಶಕ್ಕಾಗಿ ಅ.6ರಂದು ಬೆಳಗ್ಗೆ ಚಾಲನೆ ನೀಡಲಾಗಿದೆ.

ದೇವಳದ ಹಿಂದಿನ ಆಡಳಿತ ಸಮಿತಿ ನಡೆಸಿದ ಅಷ್ಟಮಂಗಲ ಪ್ರಶ್ನಾಚಿಂತನೆಯ ವಿಚಾರಗಳನ್ನು ಪುಸ್ತಕರೂಪಕ್ಕೆ ತಂದಿದ್ದರು. ಅದರಲ್ಲಿ ದೈವಜ್ಞರು ಉಲ್ಲೇಖಿಸಿರುವಂತೆ ಶಿವ ದೇವರಿಗೆ ಎಳ್ಳೆಣ್ಣೆ ಸಮರ್ಪಣೆಯನ್ನು ಇದೀಗ ಈಗಿನ ಆಡಳಿತ ಸಮಿತಿ ಕಾರ್ಯರೂಪಕ್ಕೆ ತಂದಿದ್ದಾರೆ. ಅ.6ರಂದು ಬೆಳಗ್ಗೆ ಶ್ರೀ ದೇವರ ಪೂಜೆಯ ಬಳಿಕ ವಿಶೇಷ ಪ್ರಾರ್ಥನೆ ಮಾಡಿ ತುಪ್ಪದ ದೀಪ ಬೆಳಗಿಸಿ ಎಳ್ಳೆಣ್ಣೆ ಸಮರ್ಪಣೆಗೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಚಾಲನೆ ನೀಡಿದರು.

ಈಶ್ವರ ಭಟ್ ಪಂಜಿಗುಡ್ಡೆಯವರು ಪ್ರಥಮವಾಗಿ ಎಳ್ಳೆಣ್ಣೆ ಖರೀದಿಸಿದರು. ಇವರ ಜೊತೆ ಸಮಿತಿ ಸದಸ್ಯರು, ಭಕ್ತರು ಜೊತೆಯಲ್ಲಿ ಎಳ್ಳೆಣ್ಣೆ ಖರೀದಿಸಿ ಎಳ್ಳೆಣ್ಣೆ ಶೇಖರಣಾ ಡಬ್ಬಿಗೆ ಎರೆಯಲಾಯಿತು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ, ಈಶ್ವರ ಬೆಡೇಕರ್, ಸುಭಾಶ್ ರೈ ಬೆಳ್ಳಿಪ್ಪಾಡಿ, ಹಿರಿಯರಾದ ಕಿಟ್ಟಣ್ಣ ಗೌಡ, ಶಿವರಾಮ ಆಳ್ವ, ಭಾಸ್ಕರ್ ಬಾರ್ಯ, ಗೋವರ್ಧನ್ ಕಾವೇರಿಕಟ್ಟೆ, ಗೋವಿಂದ ಭಟ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ದೇವಳದ ಪ್ರಧಾನ ಅರ್ಚಕರೂ ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯರು ಆಗಿರುವ ವೇ ಮೂ ವಸಂತ ಕೆದಿಲಾಯ ಅವರು ವಿಶೇಷ ಪ್ರಾರ್ಥನೆ ಮಾಡಿದರು.