ಎನ್.ಎಸ್.ಎಸ್ ಸ್ವಯಂಸೇವಕರಿಗೆ ಸಮಾಜವನ್ನು ಬದಲಾಯಿಸುವ ಶಕ್ತಿ ಇದೆ: ಡಿ. ಶಂಭು ಭಟ್
ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ 2025-26ನೇ ಸಾಲಿನ ಕಾರ್ಯ ಚಟುವಟಿಕೆಗಳಿಗೆ ಚಾಲನೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ದೀಪ ಬೆಳಗುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಪುತ್ತೂರಿನ ಹಿರಿಯ ವಕೀಲರಾದ ಡಿ. ಶಂಭು ಭಟ್ ನಂತರ ಮಾತನಾಡಿ, ವಿದ್ಯಾರ್ಥಿಗಳಿಗೆ ಕಾನೂನು ಕಲಿಕೆಯ ಜೊತೆಗೆ ಸಮಾಜದ ಜನರ ನಾಡಿಮಿಡಿತಗಳನ್ನು ಅರಿಯಲು ರಾಷ್ಟ್ರೀಯ ಸೇವಾ ಯೋಜನೆಯು ಒಂದು ಅತ್ಯುತ್ತಮ ವೇದಿಕೆಯಾಗಿದೆ. ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೋಡಗಿಸಿಕೊಂಡು ಆ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲಿ ಸೇವಾ ಮನೋಭಾವ ಮಾತ್ರವಲ್ಲ. ಅದರ ಆಚೆಗೂ ಸಾಕಷ್ಟು ಅವಕಾಶಗಳಿಗೆ ಎಸ್. ಎಸ್. ಎಸ್ ಸಹಕಾರಿ ಯಾಗಿದೆ ಎಂದರು. ಎನ್.ಎಸ್.ಎಸ್ ಸ್ವಯಂಸೇವಕರಿಗೆ ಸಮಾಜವನ್ನು ಬದಲಾಯಿಸುವ ಶಕ್ತಿ ಇದೆ. ಪ್ರಧಾನಿ ನರೇಂದ್ರ ಮೋದಿಯ ವಿಕಸಿತ ಭಾರತದ ಪರಿಕಲ್ಪನೆಯನ್ನು ಸಾಮಾಜಿಕ ಕೆಲಸಗಳ ಮುಖಾಂತರ ಸಮಾಜಕ್ಕೆ ಒಳಿತಾಗುವ ಕೆಲಸಗಳನ್ನು ಪ್ರತಿಯೊಬ್ಬ ಎನ್. ಎಸ್. ಎಸ್. ಸ್ವಯಂ ಸೇವಕನು ಮಾಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರು ಹಾಗೂ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಸುರೇಶ್ ರೈ ಪಡ್ಡಂಬೈಲು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ಸದೃಢವಾದ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಅಂತಹ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಈ ರಾಷ್ಟ್ರೀಯ ಸೇವಾ ಯೋಜನೆಯು ಬಹುದೊಡ್ಡ ಕೊಡುಗೆಯನ್ನು ನೀಡುತ್ತದೆ. ಜೊತೆಗೆ ವಿದ್ಯಾರ್ಥಿಗಳು ಶಿಸ್ತು ಸಂಯಮ, ಜೊತೆಗೆ ಸಮಾಜದಲ್ಲಿ ಹೇಗೆ ಬೆರೆಯುತ್ತಾರೆಂಬದನ್ನು ಅದು ಕಲಿಸಿಕೊಡುತ್ತದೆ. ಅವಕಾಶಗಳ ಜೊತೆಗೆ ಜೀವನದ ಅನುಭವವನ್ನು ಎನ್.ಎಸ್.ಎಸ್. ನಡೆಸುವ ಕಾರ್ಯಕ್ರಮಗಳು ನೀಡುತ್ತದೆ. ಅದಕ್ಕಾಗಿ ಪ್ರತಿಯೊಬ್ಬರೂ ನಿಷ್ಠೆಯಿಂದ ಎನ್. ಎಸ್. ಎಸ್. ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಮಂಗಳೂರಿನಲ್ಲಿ ಸೋಲಾರ್ ಇಲೆಕ್ಟ್ರಿಕ್ ಉದ್ಯಮ ನಡೆಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗದ ಪ್ರಚಾರ ಪ್ರಮುಖ್ ಸೂರಜ್ ರವರು ಮಾತನಾಡಿ, ಭಾರತವು ಜಗತ್ತಿನ ಅತ್ಯುತ್ತಮವಾದ ಸಂಸ್ಕೃತಿ, ಆರ್ಥಿಕತೆ ಹಾಗೂ ವಿಚಾರವಂತಿಕೆ ಇರುವ ದೇಶವಾಗಿದೆ. ಆದರೆ ಅದನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಪ್ರಯತ್ನ ಮೊಘಲರ ಕಾಲ, ಬ್ರಿಟಿಷರ ಕಾಲದಲ್ಲಿ ಮಾಡಲಾಯಿತು. ಆದರೆ ಸ್ವಾಮಿ ವಿವೇಕಾನಂದರು ಭಾರತದ ಆತ್ಮವನ್ನು ಜಗತ್ತಿಗೆ ಪರಿಚಯಿಸಿದರು. ಅಂತಹ ಸ್ವಾಮಿ ವಿವೇಕಾನಂದರ ಆಶಯಗಳನ್ನು ಯುವಜನರಾದ ನಾವೆಲ್ಲರೂ ಪಾಲಿಸಿ ಮತ್ತೊಮ್ಮೆ ಸದೃಢ ಭಾರತವನ್ನು ಕಟ್ಟೋಣ ಎಂದರು. ಅದರಲ್ಲಿಯೂ ಕಾನೂನು ವಿದ್ಯಾರ್ಥಿಗಳು ನ್ಯಾಯಯುತವಾದ ಸೇವೆಯನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಜವಾಬ್ದಾರಿ ಎಂದು ಹೇಳುವ ಜೊತೆಗೆ ಸ್ವಯಂಸೇವಕರಿಗೆ ಸೇವಾ ಮನೋಭಾವದ ಮಹತ್ವವನ್ನು ತಿಳಿಸಿದರು.

ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮಾಧಿಕಾರಿ ಲಕ್ಷ್ಮೀಕಾಂತ್ ಎ. ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸಂಗೀತಾ ಎಸ್. ಎಂ., ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕಿ ಹಾಗೂ ಎನ್. ಎಸ್. ಎಸ್. ಕಾರ್ಯಕ್ರಮಾಧಿಕಾರಿ ರಕ್ಷಿತಾ ಕೆ., ಎನ್. ಎಸ್. ಎಸ್. ಘಟಕದ ವಿದ್ಯಾರ್ಥಿ ನಾಯಕರಾದ ಅನಿಕೇತ್, ಕೃಪಾಕ್ಷಿ ಉಪಸ್ಥಿತರಿದ್ದರು. ಎಸ್. ಎಸ್. ಘಟಕದ ವಿದ್ಯಾರ್ಥಿ ನಾಯಕ ಶ್ರೇಯಸ್ ರೈ ಸ್ವಾಗತಿಸಿ, ನಾಯಕಿ ದೃತಿ ವಂದಿಸಿದರು. ವಿದ್ಯಾರ್ಥಿನಿ ವರ್ಷಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಸೇರಿದಂತೆ ಬೋಧಕ, ಬೋಧಕೇತರ ವೃಂದ ಹಾಗೂ ಎನ್. ಎಸ್. ಎಸ್. ಸ್ವಯಂ ಸೇವಕರು ಉಪಸ್ಥಿತರಿದ್ದರು.

‘ಸ್ವಾಮಿ ವಿವೇಕಾನಂದರ ಆಶಯವನ್ನು ರಾಷ್ಟ್ರೀಯ ಸೇವಾ ಯೋಜನೆಯು ಒಳಗೊಂಡಿದ್ದು, ಸೇವಾ ಯೋಜನೆಗಳ ಮೂಲಕ ಸಮಾಜಮುಖಿ ಚಟುವಟಿಕೆಗಳಲ್ಲಿ ಯುವಕರು ಭಾಗವಹಿಸುವುದು ಅತಿಮುಖ್ಯವಾಗಿದೆ. ರಾಷ್ಟ್ರೀಯ ಸೇವಾ ಯೋಜನೆಯಿಂದ ವಿದ್ಯಾರ್ಥಿಗಳು ನಿಜವಾದ ಜೀವನದ ಅರ್ಥವನ್ನು ತಿಳಿಯಲು ಸಾಧ್ಯ. ಸ್ವಯಂ ಸೇವೆಯ ಮೂಲಕ ವ್ಯಕ್ತಿತ್ವ ನಿರ್ಮಾಣವನ್ನು ಮಾಡಿಕೊಳ್ಳೋಣ’
ಶ್ರೀ ಸೂರಜ್
ಸೋಲಾರ್ ಇಲೆಕ್ಟ್ರಿಕ್ ಉದ್ಯಮಿ,
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗದ ಪ್ರಚಾರ ಪ್ರಮುಖ್