ಪುತ್ತೂರು: ನಿಷೇಧಿತ ಪಿ.ಎಫ್.ಐ ಸಂಘಟನೆ ಪರ ಸಾಮಾಜಿಕ ಜಾಲತಾಣವಾದ ವಾಟ್ಸ್ ಆಪ್ ನಲ್ಲಿ ಪೋಸ್ಟ್ ಪ್ರಕಟಿಸಿರುವ ಆರೋಪದ ಮೇರೆಗೆ ಉಪ್ಪಿನಂಗಡಿ ಸಮೀಪದ ರಾಮಕುಂಜ ಗ್ರಾಮದ ಸೈಯ್ಯದ್ ಇಬ್ರಾಹಿಂ ತಂಙಳ್(55) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ವಾಟ್ಸ್ ಆಪ್ ಗ್ರೂಪ್ ವೊಂದರಲ್ಲಿ ಕೇಂದ್ರ ಸರಕಾರದಿಂದ ನಿಷೇಧಕ್ಕೊಳಗಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯ ಪರವಾಗಿ ಪೋಸ್ಟ್ ಪ್ರಕಟಿಸಿ, ಸದ್ರಿ ಸಂಘಟನೆಯ ಬಗ್ಗೆ ಸ್ವಯಂ ಪ್ರೇರಿತನಾಗಿ ಪ್ರಚಾರ ಮಾಡಿ ಅಪರಾಧಿಕ ಬಲ ಪ್ರದರ್ಶನದ ಮೂಲಕ ಆತಂಕ ಉಂಟು ಮಾಡಿದ ಕೃತ್ಯವೆಸಗಿದ್ದರಿಂದ, ಪಿ.ಎಸ್.ಐ ಸಲ್ಲಿಸಿರುವ ದೂರನ್ನು ಆಧಾರಿಸಿ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಅ.ಕ್ರ.113/2025 U/s 10 (a), (i), 13, 18 UAPA ಆಕ್ಟ್ ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಆರೋಪಿಯನ್ನು ಅ.9ರಂದು ಮಂಗಳೂರು ನಗರದ ಉರ್ವ ಸ್ಟೋರ್ ಬಳಿಯಿಂದ ವಶಕ್ಕೆ ಪಡೆದು ದಸ್ತಗಿರಿ ಮಾಡಿದ್ದು, ಅ.10ರಂದು ಆರೋಪಿಯನ್ನು 49ನೇ ಹೆಚ್ಚುವರಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ (CCH-50) ಮತ್ತು ಎನ್.ಐ.ಎ. ಪ್ರಕರಣಗಳ ವಿಶೇಷ ನ್ಯಾಯಾಲಯ ಬೆಂಗಳೂರು ಇಲ್ಲಿಗೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಯನ್ನು ಅ.24ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.