ಪುತ್ತೂರು; ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ ವಾಸ್ತವ್ಯ ಇರುವ ಕೊರಗ ಸಮುದಾಯದ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕೊರಗ ಕುಂದುಕೊರತೆ ಸಭೆ ನಡೆಸುವಂತೆ ಕೊರಗ ಅಭಿವೃಧ್ದಿ ಸಂಘಗಳ ಒಕ್ಕೂಟದಿಂದ ಶಾಸಕ ಅಶೋಕ್ ರೈ ಅವರಿಗೆ ಮನವಿ ಸಲ್ಲಿಸಲಾಯಿತು.
ಪುತ್ತೂರು ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ವಾಸ್ತವ್ಯ ಇರುವ ಅನೇಕ ಕೊರಗ ಕುಟುಂಬಗಳ ವಿವಿಧ ಸಮಸ್ಯೆಗಳಿಂದಾಗಿ ಯಾವುದೇ ಸರಕಾರಿ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅನೇಕ ಕುಟುಂಬಗಳ ಭೂ ದಾಖಲೆಯೇ ಸರಿಯಾಗಿಲ್ಲ ಮತ್ತು ಹಲವರಿಗೆ ಪಡಿತರ ಚೀಟಿಯ ಸೌಲಭ್ಯವೂ ಇಲ್ಲ. ಪಡಿತರ ಚೀಟಿ ಇಲ್ಲದ ಕಾರಣ ಗೃಹಲಕ್ಷ್ಮಿ ಸೌಲಭ್ಯದಿಂದಲೂ ವಂಚಿತರಾಗಿದ್ದಾರೆ. ಈ ವಿಚಾರವನ್ನು ನಾವು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು ಅವರ ಜೊತೆ ಚರ್ಚೆ ನಡೆಸಿದ್ದೇವೆ. ಪುತ್ತೂರು ತಾಲೂಕಿನಲ್ಲಿ ಈ ಸಮಸ್ಯೆ ಇದ್ದು ಶಾಸಕರು ಕೊರಗ ಕುಂದು ಕೊರತೆ ಸಭೆಯನ್ನು ನಡೆಸುವ ಮೂಲಕ ಕೊರಗರ ಸಮಸ್ಯೆಯನ್ನು ಆಲಿಸಿ ಅದನ್ನು ಸರಕಾರಕ್ಕೆ ತಲುಪಿಸುವಂತೆ ಸಂಘದಿಂದ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಶಾಸಕರು, ಕೊರಗರ ಸಮಸ್ಯೆ ಇತ್ಯರ್ಥಪಡಿಸಲು ನಾನು ಸಿದ್ದವಾಗಿದ್ದು, ಕೊರಗ ಕುಂದುಕೊರತೆ ಸಭೆ ನಡೆಸುವ ಮೊದಲು ನಿಮ್ಮಲ್ಲಿರುವ ಸಮಸ್ಯೆಗಳ ಬಗ್ಗೆ ನಾನು ನಿಮ್ಮ ಜೊತೆ ಚರ್ಚೆ ನಡೆಸಬೇಕು. ಯಾವುದೇ ಕುಂದುಕೊರತೆ ಸಭೆಗಳು ಕಾಟಾಚಾರಕ್ಕೆ ನಡೆದಿದೆ ಎಂಬಂತೆ ಆಗಬಾರದು ಎಂದು ತಿಳಿಸಿದ ಶಾಸಕರು ಕೊರಗರ ಸಮಸ್ಯೆಯನ್ನು ಸರಕಾರಿ ಮಟ್ಟದಲ್ಲಿ ಬಗೆಹರಿಸಲು ನಾನು ಕಠಿಬದ್ದನಾಗಿದ್ದೆನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಪುತ್ರನ್, ಉಕ್ರಪ್ಪ ಬೊಳ್ಳಾಡಿ, ಅಣ್ಣು ಮಾಡಾವು, ಬಾಬು ಬೊಳ್ಳಾಡಿ, ನವೀನ್ ಬಂಟ್ವಾಳ, ಪವಿತ್ರ ನೀರಕಟ್ಟೆ, ಲಲಿತಾ ನೀರಕಟ್ಟೆ ಉಪಸ್ಥಿತರಿದ್ದರು.