ಅಗಲಿದ ಸಹಕಾರಿ ಚೇತನ ಬೊಳಿಕ್ಕಲ ಶಶಿಧರ ರಾವ್‌ರವರಿಗೆ ಸಾರ್ವಜನಿಕರಿಂದ ಅಂತಿಮ ನಮನ

0

ಮೂರು ಕಡೆಗಳಲ್ಲಿ ಪಾರ್ಥೀವ ಶರೀರದ ದರ್ಶನ, ನೂರಾರು ಮಂದಿಯಿಂದ ಶ್ರದ್ಧಾಂಜಲಿ ಅರ್ಪಣೆ

ಪುತ್ತೂರು: ಅನಂತದಲ್ಲಿ ಲೀನವಾದ ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ, ಹಿರಿಯ ಸಹಕಾರಿ ಧುರೀಣ ಬೊಳಿಕ್ಕಲ ಶಶಿಧರ ರಾವ್‌ರವರ ಪಾರ್ಥೀವ ಶರೀರಕ್ಕೆ ಸಾರ್ವಜನಿಕರಂದ ಅ.14 ರಂದು ಅಂತಿಮ ನಮನ ಸಲ್ಲಿಸಲಾಯಿತು.

ಮೂರು ಕಡೆಗಳಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು ಮೂರು ಕಡೆಗಳಲ್ಲೂ ನೂರಾರು ಮಂದಿ ಆಗಮಿಸಿ ಹಾರಾರ್ಪಣೆಯ ಮೂಲಕ ಅಂತಿಮ ನಮನ ಸಲ್ಲಿಸಿದರು. ವಿಶೇಷವಾಗಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಸಂಜೀವ ಮಠಂದೂರು ಸೇರಿದಂತೆ ರಾಜಕೀಯ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರದ ನೂರಾರು ಗಣ್ಯರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.


ತಿಂಗಳಾಡಿಯಲ್ಲಿರುವ ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಂಗಳದಲ್ಲಿ ಪಾರ್ಥೀವ ಶರೀರದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಬೆಳಗ್ಗೆ ಪಾರ್ಥೀವ ಶರೀರ ಆಗಮಿಸುತ್ತಿದ್ದಂತೆ ಸಂಸ್ಥೆಯ ಉಪಾಧ್ಯಕ್ಷರು, ಎಲ್ಲಾ ನಿರ್ದೇಶಕರುಗಳು ಹಾಗೇ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಅಂತಿಮ ನಮನ ಸಲ್ಲಿಸಿದರು. ಇದಲ್ಲದೆ ಊರಿನ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಕೆದಂಬಾಡಿ ಗ್ರಾಮ ಪಂಚಾಯತ್ ಅಡಳಿತ ಮಂಡಳಿ ಸದಸ್ಯರುಗಳು, ಅಧಿಕಾರಿಗಳು, ರೈತಾಪಿ ಬಂಧುಗಳು, ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಗಣ್ಯರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು ಆ ಬಳಿಕ ಕೆಯ್ಯೂರು ಜಂಕ್ಷನ್‌ನಲ್ಲಿ ಪಾರ್ಥೀವ ಶರೀರದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು ಇಲ್ಲಿಯೂ ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಭಜನಾ ಮಂಡಳಿ ಪದಾಧಿಕಾರಿಗಳು, ಯುವಕ ಮಂಡಲ ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು,ಕೆಯ್ಯೂರು ಗ್ರಾಮ ಪಂಚಾಯತ್ ಅಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರುಗಳು, ಅಧಿಕಾರಿಗಳು ಸೇರಿದಂತೆ ನೂರಾರು ಮಂದಿ ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

ಮಾಡಾವು ಹಾಲು ಉತ್ಪಾದಕರ ಸಹಕಾರಿ ಸಂಘದ ಕಛೇರಿ ಎದುರು ಭಾಗದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಇಲ್ಲಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು, ನಿರ್ದೇಶಕರುಗಳು, ಸದಸ್ಯರುಗಳು ಹಾಗೇ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರುಗಳು, ಗ್ರಾಮಸ್ಥರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಮಾಡಾವು ಶ್ರೀ ಅಯ್ಯಪ್ಪ ಭಜನಾ ಮಂದಿರದ ಎದುರು ಭಾಗದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಇಲ್ಲಿಯೂ ನೂರಾರು ಮಂದಿ ಆಗಮಿಸಿ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಆ ಬಳಿಕ ಪಾರ್ಥೀವ ಶರೀರವನ್ನು ಅವರ ಸ್ವಗೃಹವಾದ ಬೊಳಿಕ್ಕಲಕ್ಕೆ ಕೊಂಡೊಯ್ಯಲಾಯಿತು. ಅಲ್ಲಿಯೂ ನೂರಾರು ಮಂದಿ ಆಗಮಿಸಿ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಅರ್ಪಿಸಿದರು. ಬಳಿಕ ಕುಟುಂಬಸ್ಥರು, ಹಿತೈಷಿಗಳು, ಬಂಧುಮಿತ್ರರ ಸಮಕ್ಷಮದಲ್ಲಿ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ನಡೆಯಿತು.


ಅಂತ್ಯ ಸಂಸ್ಕಾರದಲ್ಲಿ ಕೈಜೋಡಿಸಿದ ಯುವಕರ ತಂಡ
ಶಶಿಧರ ರಾವ್ ಬೊಳಿಕ್ಕಲರವರು ಓರ್ವ ವಿಶಿಷ್ಠ ವ್ಯಕ್ತಿತ್ವದ ವ್ಯಕ್ತಿಯಾಗಿದ್ದು ಸರಳತೆಯನ್ನು ಮೈಗೂಡಿಸಿಕೊಂಡು ಎಲ್ಲರೊಂದಿಗೆ ಬೆರೆಯುವ ಸ್ನೇಹ ಜೀವಿಯಾಗಿದ್ದರು. ತನ್ನ ಇಳಿ ವಯಸ್ಸಿನಲ್ಲೂ ಸದಾ ಯುವಕರಿಗೆ ಮಾರ್ಗದರ್ಶನ ನೀಡುತ್ತಾ ಅತ್ಯಂತ ಚಟುವಟಿಕೆಯಿಂದ ಇರುತ್ತಿದ್ದರು. ಹಲವು ಯುವಕ ಮಂಡಲದ ಗೌರವ ಅಧ್ಯಕ್ಷರು, ಸಲಹೆಗಾರರಾಗಿಯೂ ಸೇವೆ ಮಾಡುತ್ತಿದ್ದರು. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಮಂಗಳೂರಿಗೆ ಧಾವಿಸಿದ ಯುವಕರ ತಂಡ ಅಲ್ಲಿ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದು ಅಲ್ಲದೆ ಕೆಯ್ಯೂರಿನ ಶ್ರೀ ದುರ್ಗಾ ಆಂಬುಲೆನ್ಸ್‌ನಲ್ಲಿ ಪಾರ್ಥೀವ ಶರೀರವನ್ನು ಪುತ್ತೂರಿಗೆ ತಂದು ಅಲ್ಲಿಂದ ಅ.14 ರಂದು ಬೆಳಿಗ್ಗೆ ಸ್ವಗ್ರಾಮಕ್ಕೆ ತರುವ ವ್ಯವಸ್ಥೆಯನ್ನು ಮಾಡಿದ್ದರು. ಪಾರ್ಥೀವ ಶರೀರದ ಅಂತಿಮ ಸಂಸ್ಕಾರದ ಸಮಯದಲ್ಲೂ ನೂರಾರು ಮಂದಿ ಯುವಕರು ಸೇರಿಕೊಂಡು ಅಂತ್ಯ ಸಂಸ್ಕಾರದ ಎಲ್ಲಾ ವ್ಯವಸ್ಥೆಗಳಲ್ಲೂ ಕೈಜೋಡಿಸಿರುವುದು ಅವರ ಮಾನವೀಯ ಗುಣಕ್ಕೆ ಸಾಕ್ಷಿಯಾಗಿತ್ತು.

LEAVE A REPLY

Please enter your comment!
Please enter your name here