ಪುಣಚ: ಮಲೆತ್ತಡ್ಕದಲ್ಲಿ ಕುಸಿತಗೊಂಡ ಮೋರಿ, ಸಂಪರ್ಕ ಕಡಿತ

0

ಸಂಕಷ್ಟದಲ್ಲಿ ಗ್ರಾಮಸ್ಥರು…! ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಮೋರಿ…?!


ವರದಿ: ಸಿಶೇ ಕಜೆಮಾರ್


ಪುತ್ತೂರು:
ಸಂಪರ್ಕ ರಸ್ತೆಯೊಂದಕ್ಕೆ ಕಟ್ಟಿದ ಮೋರಿಯೊಂದು ಮಳೆ ನೀರಿನ ರಭಸಕ್ಕೆ ಕುಸಿದು ಬಿದ್ದು ಸಂಪರ್ಕ ಕಡಿತಗೊಂಡು ಜನರು ಸಂಕಷ್ಟಕ್ಕೆ ಸಿಲುಕಿರುವ ಘಟನೆಯ ಪುಣಚ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲೆತ್ತಡ್ಕ ಎಂಬಲ್ಲಿಂದ ವರದಿಯಾಗಿದೆ. ಮಲೆತ್ತಡ್ಕ-ದೇರಣಮೂಲೆ-ಕೊಪ್ಪರತೊಟ್ಟು ನೆಲ್ಲಿಗುಡ್ಡೆಯಾಗಿ ತೋರಣಕಟ್ಟೆ ಆಜೇರು ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಮಲೆತ್ತಡ್ಕ ಎಂಬಲ್ಲಿ ಮೋರಿ ರಚನೆ ಮಾಡಲಾಗಿತ್ತು. ಈ ಮೋರಿಯು ಎರಡು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ತೋಡಿನಲ್ಲಿ ಹರಿದ ನೀರಿನ ರಭಸಕ್ಕೆ ಕುಸಿದು ಬಿದ್ದಿದೆ. ಮೋರಿ ಸಂಪೂರ್ಣವಾಗಿ ಕುಸಿದಿದ್ದು ತೋಡಿನ ಎರಡು ಬದಿಗಳಲ್ಲೂ ಬಿರುಕು ಕಾಣಿಸಿಕೊಂಡಿದೆ. ಮೋರಿ ಕುಸಿದು ಬಿದ್ದಿರುವುದರಿಂದ ಈ ಭಾಗದ ನೂರಾರು ಮಂದಿಗೆ ಮುಖ್ಯರಸ್ತೆಗೆ ಸಂಪರ್ಕ ಪಡೆಯಲು ಸುತ್ತು ಬಳಸಿ ಬರಬೇಕಾದ ಪ್ರಸಂಗ ಎದುರಾಗಿದೆ. ಶಾಲಾ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರು ಸೇರಿದಂತೆ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ.


ಸಂಪರ್ಕ ಕಡಿತಗೊಂಡು ಸಂಕಷ್ಟದಲ್ಲಿ ಗ್ರಾಮಸ್ಥರು…!:
ಪುಣಚ ಪರಿಯಾಲ್ತಡ್ಕ ತೋರಣಕಟ್ಟೆ ಸಾರಡ್ಕ ರಸ್ತೆಯಲ್ಲಿ ಮಲೆತ್ತಡ್ಕ ಎಂಬಲ್ಲಿ ಮಲೆತ್ತಡ್ಕದಿಂದ ದೇರಣಮೂಲೆ ಆಜೇರುಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಮೋರಿ ರಚನೆ ಮಾಡಲಾಗಿದೆ. ಗ್ರಾಮಸ್ಥರ ಸಹಕಾರ ಹಾಗೂ ಪಂಚಾಯತ್ ಅನುದಾನಲ್ಲಿ ಮೋರಿ ರಚನೆ ಮಾಡಲಾಗಿದ್ದು ಇದಕ್ಕೆ ಪಂಚಾಯತ್‌ನಿಂದ 70 ಸಾವಿರ ರೂಪಾಯಿ ಅನುದಾನ ನೀಡಲಾಗಿದೆ. ಉಳಿದಂತೆ ಊರವರ ಆರ್ಥಿಕ ನೆರವು ನೀಡುವ ಮೂಲಕ ಗ್ರಾಮಸ್ಥರ ಅನುಕೂಲಕ್ಕಾಗಿ ಮೋರಿ ಮಾಡಿದ್ದು ಇದೀಗ ಮಳೆಯ ನೀರಿಗೆ ಕುಸಿದು ಬಿದ್ದಿರುವುದರಿಂದ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.


20 ಕ್ಕೂ ಅಧಿಕ ಮನೆಯವರಿಗೆ ತೊಂದರೆ…!:
ದೇರಣಮೂಲೆ, ಕೊಪ್ಪರತೊಟ್ಟು, ನೆಲ್ಲಿಗುಡ್ಡೆ ಈ ಭಾಗದಲ್ಲಿ 20ಕ್ಕೂ ಅಧಿಕ ಮನೆಗಳಿವೆ. ಆರಂಭದಲ್ಲಿ ಕಾಲುದಾರಿಯಾಗಿದ್ದ ಈ ರಸ್ತೆಯನ್ನು ದಾನಿಯೊಬ್ಬರು ಮಾನವೀಯ ನೆಲೆಯಲ್ಲಿ ಬಿಟ್ಟುಕೊಡುವ ಮೂಲಕ ಪಂಚಾಯತ್ ರಸ್ತೆಯನ್ನಾಗಿ ಮಾಡಲಾಗಿತ್ತು. ಈ ಭಾಗದಿಂದ ಪುಣಚ ಪೇಟೆಗೆ ಬರಬೇಕಿದ್ದರೆ ಈ ಮೊದಲು ತೋರಣಕಟ್ಟೆಯಾಗಿ ಸುಮಾರು 6 ಕಿ.ಮೀ ಸುತ್ತುಬಳಸಿ ಬರಬೇಕಾಗಿತ್ತು. ಈ ಮೋರಿಯಿಂದ ಐನೂರು ಮೀಟರ್ ದೂರದಲ್ಲೇ ಐದಾರು ಮನೆಗಳಿವೆ. ಎಲ್ಲರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಪಡೆದುಕೊಂಡು ಮಲೆತ್ತಡ್ಕದಲ್ಲಿ ಮೋರಿ ರಚನೆ ಮಾಡಲಾಗಿತ್ತು. ಇದರಿಂದ ಈ ಭಾಗದ ಜನರಿಗೆ ಸುಲಭವಾಗಿ ಪುಣಚ ಪೇಟೆಗೆ ಬರಲು ಸಹಕಾರಿಯಾಗುತ್ತಿತ್ತು. ವಿಶೇಷವಾಗಿ ಶಾಲಾ,ಕಾಲೇಜು ಮಕ್ಕಳಿಗೆ, ಹಿರಿಯ ನಾಗರಿಕರಿಗೆ ತುಂಬಾ ಉಪಯುಕ್ತವಾಗಿತ್ತು. ಆದರೆ ಇದೀಗ ಮೋರಿಯೇ ಕುಸಿತಗೊಂಡಿರುವುದರಿಂದ ಶಾಲಾ,ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ಎಲ್ಲರಿಗೂ ತೊಂದರೆಯಾಗಿದೆ.


ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಮೋರಿ…?!:
ಮೋರಿ ಕುಸಿತಗೊಂಡಿರುವುದರಿಂದ ಮೋರಿ ಮೇಲೆ ಹಾಕಿದ ಮರದ ತುಂಡುಗಳ ಪಾಲ ಇನ್ನೂ ಹಾಗೆಯೇ ಉಳಿದುಕೊಂಡಿದೆ. ತೋಡಿನ ಎರಡು ಬದಿಗಳಲ್ಲೂ ಬಿರುಕು ಮೂಡಿದ್ದು ಕುಸಿಯುವ ಹಂತದಲ್ಲಿದೆ. ಅರ್ಧದಲ್ಲಿ ನೇತಾಡಿಕೊಂಡಿರುವ ಮರದ ತುಂಡುಗಳ ಮೇಲೆ ಜನರು ಓಡಾಡುತ್ತಿದ್ದು ಇದು ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. ಮಕ್ಕಳು ಎಲ್ಲಾದರೂ ಇದೇ ಮರದ ತುಂಡುಗಳು ಮೇಲೆ ಓಡಾಡಿದರೆ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಗ್ರಾಮ ಪಂಚಾಯತ್ ಈ ಮರದ ತುಂಡುಗಳನ್ನು ತೆರವುಗೊಳಿಸಿ ಜನರು ಓಡಾಡಲು ಸಹಕಾರಿಯಾಗುವಂತೆ ಸುರಕ್ಷಿತವಾದ ಪಾಲದ ರಚನೆ ಮಾಡಿ ಕೊಡಬೇಕಾಗಿದೆ. ಈ ಬಗ್ಗೆ ಪಂಚಾಯತ್ ಗಮನ ಹರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಶಾಸಕರೇ ಗಮನಿಸಿ
ಮಲೆತ್ತಡ್ಕದಲ್ಲಿ ಮೋರಿ ಕುಸಿತದಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳು ಸುತ್ತುಬಳಸಿ ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಔಷಧಿಗಾಗಿ ಓಡಾಡುವ ಹಿರಿಯ ಜೀವಗಳಿಗೂ ತೊಂದರೆಯಾಗಿದೆ. ಕುಸಿತಗೊಂಡ ಮೋರಿಯ ಪುನರ್‌ನಿರ್ಮಾಣ ಕಾರ್ಯ ಶೀಘ್ರವೇ ಆಗಬೇಕಾಗಿದೆ. ತಡೆಗೋಡೆ ರಚನೆ ಮಾಡಿಯೇ ಮೋರಿ ರಚನೆ ಮಾಡಬೇಕಾದ ಸ್ಥಿತಿ ಇಲ್ಲಿದೆ. ಪಂಚಾಯತ್‌ನಿಂದ ಇದಕ್ಕೆ ಬೇಕಾದ ಅನುದಾನ ದೊರೆಯುವುದು ಕಷ್ಟಸಾಧ್ಯ ಆದ್ದರಿಂದ ಶಾಸಕರಾದ ಅಶೋಕ್ ರೈಯವರು ಈ ಬಗ್ಗೆ ಗಮನ ಹರಿಸಬೇಕಾಗಿದೆ ಎನ್ನುವುದು ಈ ಭಾಗದ ಗ್ರಾಮಸ್ಥರ ಮನವಿಯಾಗಿದೆ. ಈಗಾಗಲೇ ಶಾಸಕರಿಗೆ ಈ ಬಗ್ಗೆ ಮನವಿಯನ್ನು ನೀಡಲಾಗಿದೆ ಎಂದು ಈ ಭಾಗದ ಜನರು ತಿಳಿಸಿದ್ದಾರೆ.


‘ ವಿಪರೀತ ಮಳೆ ನೀರಿನ ರಭಸಕ್ಕೆ ಮೋರಿ ಕುಸಿತಗೊಂಡಿರುವ ಬಗ್ಗೆ ತಿಳಿದುಬಂದಿದೆ. ಈ ಬಗ್ಗೆ ಪರಿಶೀಲನೆ ಮಾಡಲಾಗುವುದು ಹೊಸ ಮೋರಿ ರಚನೆಗೆ ಬಹಳಷ್ಟು ಅನುದಾನದ ಅವಶ್ಯಕತೆ ಇರುವುದರಿಂದ ಮಳೆಹಾನಿಗೆ ಇದನ್ನು ಸೇರ್ಪಡೆಗೊಳಿಸಿ ಅನುದಾನಕ್ಕೆ ಬರೆಯಬೇಕಾಗುತ್ತದೆ. ತಾತ್ಕಾಲಿಕವಾಗಿ ಪಾಲದ ವ್ಯವಸ್ಥೆ ಮಾಡಿಕೊಡುವ ಬಗ್ಗೆ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸುತ್ತೇವೆ.’
ಬೇಬಿ ಯಾನೆ ಯಶೋಧ, ಅಧ್ಯಕ್ಷರು ಪುಣಚ ಗ್ರಾಪಂ


‘ ಮಲೆತ್ತಡ್ಕದಿಂದ ದೇರಣಮೂಲೆ, ಕೊಪ್ಪರತೊಟ್ಟು ನೆಲ್ಲಿಗುಡ್ಡೆಯಾಗಿ ತೋರಣಕಟ್ಟೆ ಆಜೇರುಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಸುಮಾರು 20 ಕ್ಕೂ ಅಧಿಕ ಮನೆಗಳಿವೆ. ಮೋರಿ ಕುಸಿತದಿಂದ ನಮಗೆ ಬಹಳಷ್ಟು ತೊಂದರೆಯಾಗಿದೆ. ಸುಮಾರು 5 ಕಿ.ಮೀ ಸುತ್ತುಬಳಸಿ ಪೇಟೆಗೆ ಬರಬೇಕಾಗಿದೆ.ಶಾಲಾ,ಕಾಲೇಜು ವಿದ್ಯಾರ್ಥಿಗಳಿಗೆ ಎಲ್ಲರಿಗೂ ಸಮಸ್ಯೆಯಾಗಿದೆ. ಜನಪ್ರತಿನಿಧಿಗಳು ನಮ್ಮ ಸಮಸ್ಯೆಯನ್ನು ಆಲಿಸಿ ಶೀಘ್ರವೇ ಹೊಸ ಮೋರಿ ರಚನೆ ಮಾಡಿಕೊಡಬೇಕಾಗಿ ವಿನಂತಿ.’
ಟಿ.ಎಸ್.ರಘುರಾಮ ಭಟ್, ದೇರಣಮೂಲೆ

‘ ವಿಪರೀತ ಮಳೆಗೆ ತೋಡಿನಲ್ಲಿ ನೀರಿನ ಹರಿವು ಹೆಚ್ಚಿದ್ದರಿಂದ ಮೋರಿ ಕುಸಿತಗೊಂಡಿದೆ. ಗ್ರಾಮಸ್ಥರ ಅನುಕೂಲಕ್ಕಾಗಿ ಪಂಚಾಯತ್ ಅನುದಾನ 70 ಸಾವಿರ ರೂ ಮತ್ತು ಊರವರ ಸಹಕಾರದಿಂದ ಊರವರೇ ನಿರ್ಮಿಸಿದ ಮೋರಿಯಾಗಿದೆ. ಮಳೆಹಾನಿಗೆ ಇದನ್ನು ಸೇರ್ಪಡೆ ಮಾಡಿ ಅನುದಾನಕ್ಕೆ ಬರೆಯಬೇಕಾಗಿದೆ.’
ತೀರ್ಥಾರಾಮ ನಾಯಕ್, ಸದಸ್ಯರು ಪುಣಚ ಗ್ರಾಪಂ

LEAVE A REPLY

Please enter your comment!
Please enter your name here