ನೆಲ್ಯಾಡಿ: ನೆಲ್ಯಾಡಿ ಗ್ರಾ.ಪಂ.ನ 2024-25ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಕೇಂದ್ರದ 15ನೇ ಹಣಕಾಸು ಯೋಜನೆ ಹಾಗೂ ರಾಜ್ಯ ಹಣಕಾಸು ಯೋಗದ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆ ಅ.14ರಂದು ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಯೋಜಕ ಹರಿಪ್ರಸಾದ್ ಮಾತನಾಡಿ, ಸರಕಾರದಿಂದ ಸಿಗುವ ಸವಲತ್ತು ಗ್ರಾ.ಪಂ.ಮೂಲಕ ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ತಲುಪಲಿದೆ. ಸರಕಾರದ ಅನುದಾನ ದುರುಪಯೋಗವಾಗದೆ ಆ ಯೋಜನೆಗೆ ಪೂರ್ಣ ಬಳಕೆ ಆಗಬೇಕು ಎಂದರು. ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್ ಮಾತನಾಡಿ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮೂಲಕ ಗ್ರಾಮಸ್ಥರಿಗೆ ತಮ್ಮ ಜಮೀನಿನಲ್ಲಿ ವೈಯಕ್ತಿಕ ಕಾಮಗಾರಿ ನಡೆಸಲು ಅವಕಾಶವಿದೆ. ಈ ಬಗ್ಗೆ ಫಲಾನುಭವಿಗಳು ಗ್ರಾ.ಪಂ.ನಿಂದ ಮಾಹಿತಿ ಪಡೆದುಕೊಂಡು ಯೋಜನೆ ಕಾರ್ಯಗತಗೊಳಿಸಬೇಕೆಂದು ಹೇಳಿದರು.
ಗ್ರಾ.ಪಂ.ಉಪಾಧ್ಯಕ್ಷೆ ರೇಷ್ಮಾಶಶಿ ಸಂದರ್ಭೋಚಿತವಾಗಿ ಮಾತನಾಡಿದರು. ತಾಲೂಕು ಸಂಯೋಜಕಿ ಸವಿತಾ, ತಾಂತ್ರಿಕ ಸಹಾಯಕಿ ಸವಿತಾ ಲೋಬೋ ಅವರು ಯೋಜನೆಯ ಕುರಿತು ಮಾಹಿತಿ ನೀಡಿದರು. ಗ್ರಾ.ಪಂ.ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಆನಂದ ಪಿಲವೂರು, ಪುಷ್ಪಾ ಪಡುಬೆಟ್ಟು, ಉಷಾ ಒ.ಕೆ., ಅಬ್ದುಲ್ ಜಬ್ಬಾರ್, ಜಯಾನಂದ ಬಂಟ್ರಿಯಾಲ್, ಮಹಮ್ಮದ್ ಇಕ್ಬಾಲ್, ಪ್ರಕಾಶ್ ಕೆ., ಜಯಂತಿ ಮಾದೇರಿ, ತಾಂತ್ರಿಕ ಸಹಾಯಕ ಮನೋಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಜಯರಾಜ್ ಸ್ವಾಗತಿಸಿದರು. ಸಿಬ್ಬಂದಿ ಶಿವಪ್ರಸಾದ್ ವಂದಿಸಿದರು. ಗ್ರಾ.ಪಂ. ಸಿಬ್ಬಂದಿಗಳು ಸಹಕರಿಸಿದರು. ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಪೂಜಾ, ರಮ್ಯಾ ಎಸ್., ದಯಾಮಣಿ ಪಿ., ಪ್ರತಿಭಾಕುಮಾರಿ ಹೆಚ್., ಪ್ರಣಮ್ಯ ಪಿ. ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ನರೇಗಾದಲ್ಲಿ 41.77ಲಕ್ಷ ರೂ.ಖರ್ಚು
ಏ.1, 2024ರಿಂದ ಮಾ.31,2025ರ ತನಕ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮದಲ್ಲಿ 162 ವೈಯಕ್ತಿಕ ಹಾಗೂ 15 ಸಾರ್ವಜನಿಕ ಕಾಮಗಾರಿ ಸಹಿತ ಒಟ್ಟು 177 ಕಾಮಗಾರಿ ಅನುಷ್ಠಾನಗೊಂಡಿದ್ದು, ರೂ. 32,05,565 ಕೂಲಿ ಹಾಗೂ 9,64,609 ರೂ.ಸಾಮಾಗ್ರಿ ಮೊತ್ತ ಸಹಿತ ಒಟ್ಟು 41,77,092 ಖರ್ಚು ಆಗಿದೆ. 9185 ಮಾನವ ದಿನ ಸೃಜನೆಯಾಗಿದ್ದು, 269 ಕುಟುಂಬಗಳ 447 ಜನ ಕಾಮಗಾರಿ ನಿರ್ವಹಿಸಿದ್ದಾರೆ ಎಂದು ಗ್ರಾಮ ಸಂಪನ್ಮೂಲ ವ್ಯಕ್ತಿಗಳು ಸಭೆಗೆ ಮಾಹಿತಿ ನೀಡಿದರು.
ಕೇಂದ್ರ/ರಾಜ್ಯ ಹಣಕಾಸು ಯೋಜನೆ ಖರ್ಚು
ಕೇಂದ್ರ ಸರಕಾರದ 15ನೇ ಹಣಕಾಸು ಯೋಜನೆಯಡಿ 47 ಕಾಮಗಾರಿ ನಡೆದಿದ್ದು, 24,16,136 ರೂ. ಖರ್ಚು ಆಗಿದೆ. ಕಳೆದ 5 ವರ್ಷಗಳಲ್ಲಿ ರಾಜ್ಯ ಸರಕಾರದ ಹಣಕಾಸು ಯೋಜನೆಯಡಿ ತಾ.ಪಂ.ನ 41 ಕಾಮಗಾರಿ ನಡೆದಿದ್ದು, 53,99,281 ರೂ.ಹಾಗೂ ಜಿ.ಪಂ.ನ 12 ಕಾಮಗಾರಿಗಳಿಗೆ 24,07,735 ರೂ.ಖರ್ಚು ಆಗಿದೆ.