ಪುತ್ತೂರು : ತೀವ್ರ ಅನಾರೋಗ್ಯ ಪೀಡಿತರಾಗಿ ಜೀವನ್ಮರಣದ ಹೋರಾಟದ ದಯನೀಯ ಸ್ಥಿತಿಯಲ್ಲಿರುವ ಒಂಟಿ ಮಹಿಳೆಯನ್ನು ತಾರಿಗುಡ್ಡೆ ನಿವಾಸಿ ಹರೀಶ್ ಗೌಡ ಎಂಬವರ ಕಾಳಜಿ ಮೇರೆಗೆ ಸಮಾಜ ಸೇವಕರಾದ ಪುತ್ತೂರು ಉಮೇಶ್ ನಾಯಕ್ ನೇತೃತ್ವದಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ,ಶಿಶು ಅಭಿವೃದ್ಧಿ ಇಲಾಖೆ ಪುತ್ತೂರು, ಮಹಿಳಾ ಪೊಲೀಸ್, ದ ಕ ಜಿಲ್ಲಾ ಮರಾಠಿ ಹಿತರಕ್ಷಣ ಸಮಿತಿ ಸಹಕಾರದೊಂದಿಗೆ ರಕ್ಷಣೆ ಮಾಡಿ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.
ಅಪ್ಪಿ ನಾಯ್ಕ್ ಇವರ ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತ ಅಧಿಕಾರಿಗಳಾದ ಡಾ. ಯಧು ರಾಜ್ ಹಾಗೂ ಇತರ ವೈದ್ಯರು ಹಾಗೂ ಸಿಬ್ಬಂದಿಗಳ ಸೇವೆಗೆ ಈಗ ಶ್ಲಾಘನೆ ವ್ಯಕ್ತವಾಗಿದೆ.
ಘಟನೆಯ ಹಿನ್ನೆಲೆ:
ಪುತ್ತೂರು ತಾಲೂಕಿನ ತಾರಿ ಗುಡ್ಡೆ ಎಂಬಲ್ಲಿ ವಿದ್ಯುತ್ ಸಂಪರ್ಕ ಹಾಗೂ ಬಾಗಿಲು ಇಲ್ಲದ ಮುರುಕಲು ಮನೆಯಲ್ಲಿ ವಾಸವಾಗಿದ್ದ ಸುಮಾರು 75 ವರ್ಷ ವಯೋಮಾನದ ಅಪ್ಪಿ ನಾಯ್ಕ್ ಎಂಬ ಒಂಟಿ ಮಹಿಳೆಯು ಕಳೆದ ಎರಡು ತಿಂಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿ ನಡೆಯಲಾಗದೆ ಮಲಗಿದ ಸ್ಥಿತಿಯಲ್ಲಿದ್ದು, ತುಂಬಾ ಅಸಹಾಯಕ ಸ್ಥಿತಿಯಲ್ಲಿದ್ದರು. ಇವರ ಮನೆಯ ಪಕ್ಕದಲ್ಲಿ ವಾಸವಾಗಿರುವ ಹರೀಶ್ ಗೌಡ ಹಾಗೂ ವಸಂತಿ ಗೌಡ ದಂಪತಿಗಳು ಹಾಗೂ ನೆರೆಕೆರೆಯವರು ಇವರಿಗೆ ದಿನನಿತ್ಯ ಆಹಾರ ನೀಡುತ್ತಿದ್ದು, ಜಿಡೆಕಲ್ಲು ಅಂಗನವಾಡಿ ಕಾರ್ಯಕರ್ತೆ ಲೀನಾ ಡಿ ಸೋಜಾ ಹಾಗೂ ಕೇಪುಳು ಅಂಗನವಾಡಿ ಕಾರ್ಯಕರ್ತೆ ಸಂಧ್ಯಾ ಅವರು ದಿನನಿತ್ಯ ಅಪ್ಪಿ ನಾಯ್ಕ್ ಇವರ ಮನೆಗೆ ಬಂದು ಇವರ ಆರೈಕೆ ಮಾಡಿ ಆಹಾರದ ತುತ್ತನ್ನು ಬಾಯಿಗೆ ನೀಡಿ ಸೇವೆಯನ್ನು ಮಾಡುತ್ತಿದ್ದರು. ಅವರ ಜೊತೆಗೆ ನೆಲ್ಲಿಕಟ್ಟೆಯ ಸಮುದಾಯ ಆರೋಗ್ಯ ಅಧಿಕಾರಿ ಚಂದ್ರಕಲಾ ಹಾಗೂ ಪ್ರಾಥಮಿಕ ಸುರಕ್ಷಾಧಿಕಾರಿ ಭವ್ಯಶ್ರೀ ಅವರು ಔಷಧೋಪಚಾರ ಮಾಡುತ್ತಿದ್ದರು.
ಇತ್ತೀಚಿನ ಮೂರು ದಿನಗಳಿಂದ ಅಪ್ಪಿ ನಾಯ್ಕ್ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿ ಹರೀಶ್ ಗೌಡ ಅವರು ಪುತ್ತೂರು ಉಮೇಶ್ ನಾಯಕ್ ಅವರಿಗೆ ಮಾಹಿತಿಯನ್ನು ನೀಡಿ ಅಪ್ಪಿ ನಾಯ್ಕ್ ಅವರ ರಕ್ಷಣೆ ಮಾಡಬೇಕೆಂದು ವಿನಂತಿಸಿದ ಹಿನ್ನೆಲೆಯಲ್ಲಿ ಪುತ್ತೂರು ಉಮೇಶ್ ನಾಯಕ್ ಅವರು ರೋಟರಿ ಕ್ಲಬ್ ಪುತ್ತೂರು ಯುವ ಇದರ ನೇತೃತ್ವದಲ್ಲಿ ಶಿಶು ಅಭಿವೃದ್ಧಿ ಇಲಾಖೆ -ಮಹಿಳಾ ಪೊಲೀಸ್ ಠಾಣೆ- ಮರಾಠಿ ಸಂರಕ್ಷಣಾ ಸಮಿತಿ ಸಹಕಾರದೊಂದಿಗೆ ವಿಟ್ಲ ವ್ಯಾಪ್ತಿಯ 108 ಆಂಬುಲೆನ್ಸ್ ಮೂಲಕ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಿರುತ್ತಾರೆ.
ಈ ಕಾರ್ಯಾಚರಣೆಯಲ್ಲಿ ಶಿಶು ಅಭಿವೃದ್ಧಿ ಇಲಾಖೆಯ ಮಂಗಳ ಕಾಳೆ, ಯಶೋಧ, ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ಮಂಜುಳಾ, ದಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಶೋಕ್ ನಾಯ್ಕ ಕೆದಿಲ, ಪದಾಧಿಕಾರಿಗಳಾದ ಶ್ರೀಧರ್ ನಾಯ್ಕ,ಮುಂಡೊವು ಮೂಲೆ, ಸದಾಶಿವ ನಾಯ್ಕ, ರತ್ನಾವತಿ ನಾಯ್ಕ, ಬಾಲಕೃಷ್ಣ ಮುರುಂಗಿ, ರೋಟರಿ ಕ್ಲಬ್ ಪುತ್ತೂರು ಯುವ ಇದರ ಅಧ್ಯಕ್ಷ ಕುಸುಮರಾಜ್, ಕಾರ್ಯದರ್ಶಿ ಅಭಿಶ್ ಕೊಳಕೆಮಾರ್, ಪುಟಾಣಿ ಗಹನ್, ಜಿಡೆಕಲ್ಲು ಅಂಗನವಾಡಿ ಕಾರ್ಯಕರ್ತೆ ಲೀನಾ ಡಿ ಸೋಜಾ ಹಾಗೂ ಕೇಪುಳು ಅಂಗನವಾಡಿ ಕಾರ್ಯಕರ್ತೆ ಸಂಧ್ಯಾ, ನೆಲ್ಲಿಕಟ್ಟೆಯ ಸಮುದಾಯ ಆರೋಗ್ಯ ಅಧಿಕಾರಿಗಳಾದ ಚಂದ್ರಕಲಾ ಹಾಗೂ ಪ್ರಾಥಮಿಕ ಸುರಕ್ಷಾಧಿಕಾರಿ ಭವ್ಯಶ್ರೀ ಸಹಕರಿಸಿದರು.