




ರಾಮಕುಂಜ: ಡಿ.20 ಮತ್ತು 21ರಂದು ಕುಟ್ರುಪ್ಪಾಡಿ ಗ್ರಾಮದ ಕೇಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ ಕಡಬ ತಾಲೂಕು ಪ್ರಥಮ ತುಳು ಸಮ್ಮೇಳನಾಧ್ಯಕ್ಷರಾಗಿ ನೇತ್ರಾವತಿ ತುಳುಕೂಟ ರಾಮಕುಂಜ ಇದರ ಅಧ್ಯಕ್ಷರಾಗಿರುವ ಕೆ.ಸೇಸಪ್ಪ ರೈ ರಾಮಕುಂಜ ಆಯ್ಕೆಯಾಗಿದ್ದಾರೆ.




ರಾಮಕುಂಜ ಗ್ರಾಮದ ಬಾಂತೊಟ್ಟು ಎಂಬಲ್ಲಿ ಕೃಷಿ ಕುಟುಂಬದ ದಿ| ದೂಮಣ್ಣ ರೈ ಹಾಗೂ ದಿ|ಅಪ್ಪಿ ಹೆಂಗ್ಸುರವರ ಪುತ್ರರಾಗಿ ಜು.10, 1947ರಲ್ಲಿ ಜನಿಸಿದ ಕೆ.ಸೇಸಪ್ಪ ರೈ ಅವರಿಗೆ ಈಗ 78ರ ಹರೆಯ. ಈ ಹರೆಯದಲ್ಲೂ ಸೇಸಪ್ಪ ರೈ ಅವರು ತುಳು ಸಂಸ್ಕೃತಿ, ಆಚಾರ-ವಿಚಾರವನ್ನು ನಾಡಿನಾದ್ಯಂತ ಪಸರಿಸುವಲ್ಲಿ ಶ್ರಮ ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಕಡಬ ತಾಲೂಕು ಪ್ರಥಮ ತುಳು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ರಾಮಕುಂಜದಲ್ಲೇ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಕೆ.ಸೇಸಪ್ಪ ರೈ ಅವರು 1968 ರಿಂದ 2005ರ ತನಕ ಸುಮಾರು 37 ವರ್ಷ ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ಸೇವಾವಧಿಯ 22 ವರ್ಷ ಉಡುಪಿ/ದ.ಕ.ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿಯಾಗಿ ಸೇವೆ ಮಾಡಿದ್ದ ಇವರು ಕೃಷ್ಣೈಕ್ಯರಾದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ನಿಕಟ ವರ್ತಿಯಾಗಿ ಅವರ ಪ್ರತಿಯೊಂದು ಮಾತುಗಳನ್ನೂ ಆದೇಶವೆಂದೇ ತಿಳಿದು ಚಾಚೂ ತಪ್ಪದೇ ಪಾಲಿಸಿಕೊಂಡು ಬಂದವರು. ಶ್ರೀಗಳ ಸೂಚನೆಯಂತೆ ನಿವೃತ್ತಿಯ ಬಳಿಕ ಸೇಸಪ್ಪ ರೈ ಅವರು ಶ್ರೀ ರಾಮಕುಂಜೇಶ್ವರ ವೃತ್ತಿಪರ ಶಿಕ್ಷಣ ಅಭಿವೃದ್ಧಿ ಕೇಂದ್ರದಲ್ಲಿ ಕಾರ್ಯದರ್ಶಿಯಾಗಿ ನೇಮಕಗೊಂಡು ವಿದ್ಯಾರ್ಥಿನಿಲಯ, ಆಂಗ್ಲಮಾಧ್ಯಮ ಪ್ರಾಥಮಿಕ, ಪ್ರೌಢಶಾಲೆ, ಕಿಂಡರ್ ಗಾರ್ಟನ್, ಶ್ರೀ ರಾಮಕುಂಜೇಶ್ವರ ಸಿಬಿಎಸ್‌ಇ ವಿದ್ಯಾಲಯ, ಕಂಪ್ಯೂಟರ್ ತರಬೇತಿ ಕೇಂದ್ರವನ್ನು ಆರಂಭಿಸಿದರು.





ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತುಳು ಲಿಪಿಯಲ್ಲೇ ತಮ್ಮ ಸಹಿ ಮಾಡುತ್ತಿರುವುದರಿಂದ ಪ್ರೇರಣೆ ಪಡೆದ ಸೇಸಪ್ಪ ರೈಯವರು ರಾಜ್ಯದಲ್ಲೇ ಮೊದಲ ಬಾರಿಗೆ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ತುಳು ತರಗತಿ ಆರಂಭಿಸಿದ ಕೀರ್ತಿಗೂ ಪಾತ್ರರಾಗಿದ್ದಾರೆ. ಅಲ್ಲದೆ ಶಾಲೆಯಲ್ಲಿ ರಾಜ್ಯಮಟ್ಟದ ತುಳು ರಸಮಂಟಮೆಯನ್ನೂ ಎರಡು ಸಲ ಆಯೋಜಿಸಿದ್ದಾರೆ. ಶಾಲೆಯಲ್ಲಿ ತುಳು ಲ್ಯಾಬ್ ಆರಂಭಿಸಿ ನಶಿಸಿ ಹೋಗುತ್ತಿರುವ ತುಳುನಾಡಿನ ಸೊತ್ತುಗಳನ್ನು ಸಂರಕ್ಷಿಸುವ ಮೂಲಕ ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ. ಮನೆಮದ್ದು ಪುಸ್ತಕದ ಮೂಲಕ ಮನೆಯಲ್ಲೇ ತಯಾರಿಸಬಹುದಾದ ಔಷಧಿಗಳನ್ನು ಪರಿಚಯಿಸಿದ್ದಾರೆ. ಆಟಿ ಅಮಾವಾಸ್ಯೆ, ಬಿಸು, ಕೆಡ್ಡಸ, ಪತ್ತನಾಜೆ, ದೀಪಾವಳಿ, ಶ್ರೀಕೃಷ್ಣ ಜನ್ಮಾಷ್ಟಮಿ, ಪುದ್ವಾರ್ ವನಸ್, ಕುರಾಲ್ ಪರ್ಬ ಆಚರಿಸುವ ಮೂಲಕ ತುಳುನಾಡಿನ ಸಂಸ್ಕೃತಿ, ಆಚಾರ, ವಿಚಾರಗಳನ್ನು ಹೊರ ರಾಜ್ಯದ ವಿದ್ಯಾರ್ಥಿಗಳಿಗೂ ಉಣ ಬಡಿಸುವ ಮೂಲಕ ರಾಜ್ಯದಾದ್ಯಂತ ಪಸರಿಸುತ್ತಿದ್ದಾರೆ. ಸೇಸಪ್ಪ ರೈ ಅವರ ಈ ಸೇವಾ ಕಾರ್ಯಗಳಿಗೆ ಸಂಸ್ಥೆಯ ಶಿಕ್ಷಕರಾದ ಸರಿತಾ ಹಾಗೂ ಪ್ರೇಮಾ ಅವರು ಬೆನ್ನೆಲುಬಾಗಿ ನಿಂತು ಸಹಕಾರ ನೀಡುತ್ತಿದ್ದಾರೆ. ತುಳು ಸಂಸ್ಕೃತಿಯ ಬೆಳವಣಿಗೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡುರವ ಕೆ.ಸೇಸಪ್ಪ ರೈ ಅವರ ಸೇವೆಯನ್ನು ಪರಿಗಣಿಸಿ ಅಖಿಲ ಭಾರತ ತುಳುಕೂಟ ಮಂಗಳೂರು ಇವರಿಂದ ’ಪೆರ್ಮೆದ ತುಳುವೆ’ ಪ್ರಶಸ್ತಿಯೂ ಸಂದಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಿತ ವಿವಿಧ ಸಂಘಟನೆಗಳು ಸನ್ಮಾನಿಸಿ ಗೌರವಿಸಿವೆ.
ಕೆ.ಸೇಸಪ್ಪ ರೈ ಅವರು ಪ್ರಸ್ತುತ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕೋಶಾಧಿಕಾರಿಯಾಗಿ, ನೇತ್ರಾವತಿ ತುಳುಕೂಟ ರಾಮಕುಂಜ ಇದರ ಅಧ್ಯಕ್ಷರಾಗಿ, ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆ ಹಾಗೂ ಶ್ರೀ ರಾಮಕುಂಜೇಶ್ವರ ಸಿಬಿಎಸ್‌ಇ ವಿದ್ಯಾಲಯದ ಕಾರ್ಯದರ್ಶಿಯಾಗಿ, ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಉಪ್ಪಿನಂಗಡಿ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್‌ನ ಕಡಬ ತಾಲೂಕು ಘಟಕದ ಅಧ್ಯಕ್ಷರಾಗಿರುವ ಇವರು ಬಿಳಿನೆಲೆ ಹಾಗೂ ಕುಂತೂರಿನಲ್ಲಿ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಸಂಘಟಿಸಿದ್ದಾರೆ. ಈ ಹಿಂದೆ ನಡೆದ ಎತ್ತಿನಹೊಳೆ ವಿರೋಧಿ ಹೋರಾಟ ಸಮಿತಿಯಲ್ಲೂ ತೊಡಗಿಕೊಂಡಿದ್ದರು. ಇವರಿಗೆ ಆರು ಮಂದಿ ಸಹೋದರಿಯರು, ಓರ್ವ ಸಹೋದರ ಇದ್ದಾರೆ. ಪತ್ನಿ ಪುಷ್ಪಾ ಜೊತೆ ರಾಮಕುಂಜದ ಬಾಂತೊಟ್ಟು ಎಂಬಲ್ಲಿ ವಾಸ್ತವ್ಯವಿದ್ದಾರೆ. ಇವರ ಹಿರಿಯ ಪುತ್ರಿ ಸುಕೇತಾ ರೈ ಮುಂಬೈಯಲ್ಲಿ ಪತಿಯ ಜೊತೆಗೆ ಉದ್ಯಮದಲ್ಲಿ ತೊಡಗಿಕೊಂಡಿದ್ದು ಕಿರಿಯ ಪುತ್ರಿ ಡಾ.ಸುಪ್ರಿತಾ ರೈ ವೈದ್ಯೆಯಾಗಿದ್ದು ಪತಿ ಡಾ.ನಿರಂಜನ್ ರೈಯವರ ಜೊತೆಗೆ ತಮ್ಮದೇ ಆದ ಉಪ್ಪಿನಂಗಡಿ ಧನ್ವಂತರಿ ಆಸ್ಪತ್ರೆಯಲ್ಲಿ ಸೇವೆ ಮಾಡುತ್ತಿದ್ದಾರೆ.







