ಪುತ್ತೂರು: ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟದ 14 ವಯೋಮಾನದ ಬಾಲಕರ ವಿಭಾಗದಲ್ಲಿ ದರ್ಬೆ ಪಾಂಗಳಾಯಿಯ ಬೆಥನಿ ಆಂಗ್ಲ ಮಾಧ್ಯಮ ಶಾಲೆ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ.
ರಾಜ್ಯದ ವಿವಿಧ ವಿಭಾಗಗಳಿಂದ ಆಗಮಿಸಿದ ಒಟ್ಟು 4 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಲೀಗ್ ಮಾದರಿಯಲ್ಲಿ ನಡೆದ ಪಂದ್ಯಾಟದ ಫೈನಲ್ ಸ್ಪರ್ಧೆಯಲ್ಲಿ ಮೈಸೂರು ವಿಭಾಗವನ್ನು ಪ್ರತಿನಿಧಿಸಿದ್ದ ದರ್ಬೆ ಬೆಥನಿ ಆಂಗ್ಲ ಮಾಧ್ಯಮ ಶಾಲಾ ತಂಡವು ಕಲುಬುರ್ಗಿ ವಿಭಾಗದ ತಂಡದ ಎದುರು 24-10 ಅಂಕಗಳ ಅಂತರದಲ್ಲಿ ಕಲುಬುರ್ಗಿ ವಿಭಾಗವನ್ನು ಸೋಲಿಸಿದ ಬೆಥನಿ ಶಾಲಾ ತಂಡವು ಪ್ರಥಮ ಸ್ಥಾನ ಪಡೆದ ರಾಜ್ಯದ ಬಲೀಷ್ಠ ತಂಡವಾಗಿ ಹೊರಮೊಮ್ಮಿದೆ.
ತಂಡದ ಆಟಗಾರರಾದ ಮಹಮ್ಮದ್ ಹೂದ್ ಬೆಸ್ಟ್ ಸೆಟ್ಟರ್ ಹಾಗೂ ಶಿಶಿರ್ ಎಸ್ ಸಾಲ್ಯಾನ್ ಆಲ್ ರೌಂಡರ್ ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳಾದ ಮಹಮ್ಮದ್ ಅಕ್ಮಾಲ್, ಮಹಮ್ಮದ್ ಹೂದ್, ಕ್ಲೇಟನ್ ದಿಕ್ಷನ್ ತೋರಸ್, ಅಬೂಬಕ್ಕರ್ ಶಾನ್, ಅಲನ್ ಡಿ’ಸೋಜ, ಶಿಶಿರ್ ಎಸ್ ಸಾಲ್ಯಾನ್, ಜೆಶ್ವಿನ್, ವೈಭವ್, ಪ್ರಣವ್, ಅಂಕಿತ್, ರೆಗುನ ಹಾಗೂ ಸಮರ್ಥ್ ತಂಡದಲ್ಲಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಅನಿತಾ ಟ್ರೆಸ್ಸಿ ಮಾರ್ಗದರ್ಶನದಲ್ಲಿ, ದೈಹಿಕ ಶಿಕ್ಷಣ ಶಿಕ್ಷಕರಾದ ನಿರಂಜನ್ ಮತ್ತು ಅಕ್ಷಯ್ ತರಬೇತಿ ನೀಡಿದ್ದಾರೆ. ವಿದ್ಯಾರ್ಥಿಗಳ ರಾಜ್ಯ ಮಟ್ಟದ ಸಾಧನೆಗೆ ಶಾಲಾ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ.