ರಾಮಕುಂಜ: ಡಿಸೆಂಬರ್ನಲ್ಲಿ ಕುಟ್ರುಪ್ಪಾಡಿ ಗ್ರಾಮದ ಕೇಪು ಶ್ರೀ ಲಕ್ಷ್ಮಿ ಜನಾರ್ದನ ಆಂಜನೇಯ ದೇವಸ್ಥಾನದಲ್ಲಿ ಆಯೋಜಿಸಲು ನಿರ್ಧರಿಸಲಾಗಿರುವ ಕಡಬ ತಾಲೂಕು ಪ್ರಥಮ ತುಳು ಸಮ್ಮೇಳನದ ಕುರಿತು ಅ.20ರಂದು ದೇವಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಹಲವು ನಿರ್ಣಯ ತೆಗೆದುಕೊಳ್ಳಲಾಯಿತು.

ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಜನಪದ ಕುಣಿತ (ಕಂಗೀಲು, ಕರಂಗೋಲು, ಕನ್ಯಾಪು, ಚೆನ್ನು)ಮತ್ತು ಕುಣಿತ ಭಜನಾ ಸ್ಪರ್ಧೆ, ಬೊಳ್ಳಿ ಬೊಲ್ಪು ತುಳುಕೂಟ ಸವಣೂರು ಇಲ್ಲಿ ಜನಪದ ಆಟಗಳ (ಜುಬಿಲಿ, ಕುಟ್ಟಿದೊಣ್ಣೆ, ಟೊಂಕ, ಲಗೋರಿ) ಸ್ಪರ್ಧೆಗಳನ್ನು ನಡೆಸುವುದು. ತುಳು ಸಾಹಿತ್ಯಕ್ಕೆ ಸಂಬಂಧಪಟ್ಟಂತಹ ಸ್ಪರ್ಧೆಗಳನ್ನು(ಎದುರುಕತೆ, ಜನಪದ ಕತೆ, ಪಾಡ್ದನ, ಗಾದೆ) ತೆಗ್ರ್ ತುಳುಕೂಟ ನೂಜಿಬಾಳ್ತಿಲ ಇವರು ವಹಿಸಿಕೊಳ್ಳುವುದಾಗಿ ನಿರ್ಣಯ ತೆಗೆದುಕೊಳ್ಳಲಾಯಿತು.
ಸ್ಪರ್ಧೆಗಳನ್ನು ಪ್ರಾಥಮಿಕ, ಪ್ರೌಢಶಾಲಾ, ಪ.ಪೂ., ಪದವಿ ಕಾಲೇಜು ವಿಭಾಗ ಹಾಗೂ ಸಾರ್ವಜನಿಕ ವಿಭಾಗದಲ್ಲಿ ನಡೆಸುವುದು. ಅ.30ರ ಒಳಗಾಗಿ ಎಂಟ್ರಿಶೀಟ್ ಪಡೆದುಕೊಂಡು ನ.10ರ ಒಳಗಾಗಿ ಫಲಿತಾಂಶ ಪಡೆಯಬೇಕು ಹಾಗೂ ಇದರ ಜವಾಬ್ದಾರಿಯನ್ನು ಆಯಾ ಸಂಘಟಕರೇ ನಡೆಸಬೇಕೆಂದು ಸೂಚಿಸಲಾಯಿತು. ಕಾಣಿಯೂರು ಪ್ರಗತಿ ವಿದ್ಯಾಲಯದ ಜಯಸೂರ್ಯ ರೈ ಮಾದೋಡಿ, ಸವಣೂರು ಬೊಳ್ಳಿ ಬೊಲ್ಪು ತುಳುಕೂಟದ ಗಿರಿಶಂಕರ್ ಸುಲಾಯ ಹಾಗೂ ನೂಜಿಬಾಳ್ತಿಲ ತೆಗ್ರ್ ತುಳುಕೂಟದ ಉಮೇಶ್ ಶೆಟ್ಟಿ ಸಾಯಿರಾಮ್ರಿಗೆ ಸ್ಪರ್ಧೆಯ ಜವಾಬ್ದಾರಿ ನೀಡಲಾಯಿತು.
ಸಮ್ಮೆಳನದ ಕುರಿತಾಗಿ ತುಳು ಸಾಹಿತ್ಯ ಅಕಾಡೆಮಿಗೆ ಮನವಿ ನೀಡುವುದು, ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ, ಮಹಾದಾನಿಗಳಿಗೆ, ಗೌರವ ಪೋಷಕರನ್ನು ಮತ್ತು ಪೋಷಕರನ್ನು ಸನ್ಮಾನಿಸುವುದು, ಜನಪದ ವಸ್ತುಗಳ ಪ್ರದರ್ಶನ, ಮಾರಾಟ, ಕಡಬ ಪೇಟೆಯಿಂದ ವಾಹನಗಳ ಮೆರವಣಿಗೆ ಮೂಲಕ ವೇದಿಕೆಗೆ ಆಗಮನ, ಸಮ್ಮೇಳನದ ವಿರಾಮದ ನಡುವೆ ತುಳು ಮೂಲ ನೃತ್ಯಗಳ ಪ್ರದರ್ಶನ ಮಾಡುವುದಾಗಿ ಚರ್ಚಿಸಲಾಯಿತು. ಅ.26ರಂದು ಮಧ್ಯಾಹ್ನ 2 ಗಂಟೆಗೆ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಂದಿನ ಸಮಾಲೋಚನಾ ಸಭೆ ನಡೆಸಲು ತೀರ್ಮಾನಿಸಲಾಯಿತು.
ನೇತ್ರಾವತಿ ತುಳುಕೂಟದ ಅಧ್ಯಕ್ಷ ಕೆ.ಸೇಸಪ್ಪ ರೈ, ಕುಟ್ರುಪ್ಪಾಡಿ ಕೇಪು ಶ್ರೀ ಲಕ್ಷ್ಮಿ ಜನಾರ್ದನ ಆಂಜನೇಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಿವರಾಮ ಶೆಟ್ಟಿ ಕೇಪು, ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಜನಾರ್ದನ ಗೌಡ ಪಣೆಮಜಲು, ಪುಲಸ್ತ್ಯ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸರಿತಾ ಜನಾರ್ದನ ಸ್ವಾಗತಿಸಿದರು. ಕಿಶೋರ್ ಕಾರ್ಯಕ್ರಮದ ನಿರ್ಣಯ ಮಂಡಿಸಿದರು. ಪ್ರೇಮಾ ಸಹಕರಿಸಿದರು. ಉಮೇಶ್ ಶೆಟ್ಟಿ ಸಾಯಿ ರಾಮ್ ನಿರೂಪಿಸಿ, ವಂದಿಸಿದರು.